- ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- 10 ತಂಡಗಳು ಟ್ರೋಫಿ ಎತ್ತಿಹಿಡಿಯಲು ಭರ್ಜರಿ ಪೈಪೋಟಿಗೆ ಸಿದ್ಧ
- ಸ್ಟಾರ್ ಯುವ ಬ್ಯಾಟರ್ ಸಿಡಿದೆದ್ದರೆ ಖಂಡಿತ ಎದುರಾಳಿ ತಂಡದ ಬೌಲರ್ಗಳಿಗೆ ಸವಾಲು ಖಚಿತ
ಚೆನ್ನೈ: ಮಾ.28ರಿಂದ ಶುರುವಾಗಲಿರುವ ಐಪಿಎಲ್ 19ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, 10 ತಂಡಗಳು ಮೈದಾನದಲ್ಲಿ ಭಾರೀ ಕಸರತ್ತು ನಡೆಸುತ್ತಿವೆ. 5 ಬಾರಿ ಚಾಂಪಿಯನ್ಸ್ಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 19ನೇ ಸೀಸನ್ ಟ್ರೋಫಿಗಾಗಿ ಭಾರೀ ಪೈಪೋಟಿ ಕೊಡಲು ಸಜ್ಜಾಗಿವೆ. ಅದಕ್ಕೆ ತಕ್ಕಂತೆ, ಹರಾಜಿನಲ್ಲಿ ಅತ್ಯುತ್ತಮ ಆಟಗಾರರನ್ನೇ ಆಯ್ದುಕೊಂಡಿದೆ.
ಕಳೆದ ಸೀಸನ್ನಲ್ಲಿ ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಆಟಗಾರರನ್ನು ಕೈಬಿಟ್ಟಿರುವ ಒಂದಷ್ಟು ತಂಡಗಳು, ಅವರ ಬದಲಿಗೆ ಆಲ್ರೌಂಡ್ ಹಾಗೂ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ಮುಂದಾಗಿವೆ. 18ನೇ ಆವೃತ್ತಿಯಲ್ಲಿ ತಮಗೆ ಕೊಟ್ಟ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡ ಯುವ ಪ್ಲೇಯರ್ಗಳ ಪೈಕಿ ಕೆಲವೇ ಕೆಲವರು ಮಾತ್ರ ಬಹಳ ಡೇಂಜರೆಸ್ ಆಗಿ ಕಂಡರು. ಅದರಲ್ಲಿ, ಸಿಎಸ್ಕೆ ತಂಡದ ಆಯುಷ್ ಮಾತ್ರೆ ಮತ್ತು ರಾಜಸ್ಥಾನ ರಾಯಲ್ಸ್ ಪಡೆಯ 'ಬೇಬಿ ಬಾಸ್' ವೈಭವ್ ಸೂರ್ಯವಂಶಿ.
ಅಂಡರ್-19 ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ತಂಡದಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನ ನೋಡುಗರನ್ನು ಬೆರಗುಗೊಳಿಸಿತು. 15ನೇ ವಯಸ್ಸಿಗೆ ದೊಡ್ಡ ಸಾಧನೆಗೈದಿರುವ ಈ ಯುವ ಬ್ಯಾಟರ್, ಎದುರಾಳಿ ತಂಡದ ಬೌಲರ್ಗಳಿಗೆ ಬೆವರಿಳಿಸುವ ಪರಿ ನಿಜಕ್ಕೂ ಅನೇಕ ದಿಗ್ಗಜ ಕ್ರಿಕೆಟಿಗರಿಗೆ ಅಚ್ಚರಿ ತಂದಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಅದು ಅಂತಾರಾಷ್ಟ್ರೀಯ ಬೌಲರ್ಗಳ ಎಸೆತಕ್ಕೆ ಮೈದಾನದ ಪೂರ ಬಾರಿಸುವ ವೈಭವ್ನ ವೈಭವದ ಆಟಕ್ಕೆ ಮನಸೋಲದವರೇ ಇಲ್ಲ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಆಡಲು ತನ್ನ 10ನೇ ತರಗತಿ ಪರೀಕ್ಷೆಯನ್ನು ಕೈಬಿಟ್ಟಿರುವ ಸೂರ್ಯವಂಶಿ, ಸಂಪೂರ್ಣ ಸಮಯವನ್ನು ಕ್ರಿಕೆಟ್ಗೆ ಮೀಸಲಿಟ್ಟಿರುವುದು ಅಚ್ಚರಿಯ ನಡೆ. ಎಂದಿನಂತೆ 19ನೇ ಆವೃತ್ತಿಯಲ್ಲಿಯೂ ರಾಜಸ್ಥಾನ ರಾಯಲ್ಸ್ ಪರ ಆಡಲಿರುವ ಬೇಬಿ ಬಾಸ್, ಕಳೆದ ಇನ್ನಿಂಗ್ಸ್ಗಳಲ್ಲಿ ನೀಡಿರುವ ಸ್ಫೋಟಕ ಬ್ಯಾಟಿಂಗ್ ಇಲ್ಲಿಯೂ ರಿಪೀಟ್ ಮಾಡುವ ಲಕ್ಷಣಗಳು ಹೆಚ್ಚಿವೆ ಎಂದೇ ಹೇಳಲಾಗಿದೆ. ಅನೇಕರು, ವೈಭವ್ ಖಂಡಿತ ಈ ಬಾರಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ. ಎದುರಾಳಿ ತಂಡದ ಬೌಲರ್ಗಳಿಗೆ ಶಾಪವಾಗ್ತಾರೆ ಎಂದು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಅಸಲಿಗೆ, ವೈಭವ್ ಏನಾದರೂ ಕಳೆದ ಬಾರಿ ಆಡಿದ ರೀತಿಯೇ ಈ ವರ್ಷವು ಸ್ಫೋಟಕ ಇನ್ನಿಂಗ್ಸ್ ನೀಡಿದರೆ, ಖಂಡಿತ 9 ಫ್ರಾಂಚೈಸಿಗಳಿಗೆ ದೊಡ್ಡ ಸಂಕಷ್ಟ ಎದುರಾಯಿತು ಎಂದೇ ಅರ್ಥ. ತಾನು ಯಾವ ಹಿರಿಯ ಹಾಗೂ ಅನುಭವಿ ಆಟಗಾರನಿಗೆ ಕಡಿಮೆ ಇಲ್ಲ ಎನ್ನುವಂತೆ ಡೇಂಜರೆಸ್ ಆಗಿ ಬ್ಯಾಟಿಂಗ್ ಮಾಡುವ ವೈಭವ್, ತಮ್ಮ ತಂಡದ ಪರ 19ನೇ ಆವೃತ್ತಿಯಲ್ಲಿಯೂ ಅದ್ಭುತ ಇನ್ನಿಂಗ್ಸ್ ನೀಡಲು ಎದುರುನೋಡುತ್ತಿದ್ದಾರೆ. ಅಂದುಕೊಂಡಂತೆ ತಂಡಕ್ಕೆ ಆಸೆರೆಯಾಗುವುದರ ಜೊತೆಗೆ ಐಪಿಎಲ್ 2026ರಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).