- ಬರಿಗಾಲಿನ ಆಟಗಾರನಿಗೆ ಈಗ ಬೆಂಗಳೂರೇ ಆಸರೆ: ಶೆಫರ್ಡ್ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ!
- ತೆಂಗಿನ ಮಟ್ಟೆಯ ಬ್ಯಾಟು ಹಿಡಿದಿದ್ದ ಕೈಗಳಲ್ಲಿ ಈಗ ಆರ್‌ಸಿಬಿ ಬಾವುಟ: ಗಯಾನಾ ಹುಡುಗನ ಕಣ್ಣೀರಿನ ಕಥೆ.
- ಹಸಿದ ಹೊಟ್ಟೆ, ಮರದ ತುಂಡಿನ ಚೆಂಡು; ವಿಶ್ವ ಕ್ರಿಕೆಟ್ ಆಳಲು ಬಂದ ಶೆಫರ್ಡ್ ಎಂಬ ಕಪ್ಪು ಮುತ್ತು!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈ ಕಳೆದ ವರ್ಷದಿಂದ ಹೊಸ ಶಕ್ತಿ ಬಂದಂತಾಗಿದೆ. ಕೆರಿಬಿಯನ್ ನಾಡಿನ ದೈತ್ಯ ಪ್ರತಿಭೆ ರೊಮಾರಿಯೋ ಶೆಫರ್ಡ್ ಐಪಿಎಲ್ 2026ರಲ್ಲಿ ರೆಡ್ ಅಂಡ್ ಗೋಲ್ಡ್ ಜೆರ್ಸಿಯಲ್ಲಿ ಮಿಂಚುತ್ತಿದ್ದು, ಗಯಾನಾದ ಹಳ್ಳಿಯೊಂದರಿಂದ ಆರಂಭವಾದ ಇವರ ಕ್ರಿಕೆಟ್ ಪಯಣ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಬಂದು ತಲುಪಿದ ಇವರ ಜೀವನದ ಕಥೆ ರೋಚಕವಾಗಿದೆ
ಹೌದು, ತಮ್ಮ ಬಾಲ್ಯದ ಕಷ್ಟಗಳು, ಸ್ಫೂರ್ತಿಯಾದ ಡ್ವೇನ್ ಬ್ರಾವೋ ಮತ್ತು ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ ಗುಟ್ಟುಗಳನ್ನು ಶೆಫರ್ಡ್ ಇದೀಗ ಬಿಚ್ಚಿಟ್ಟಿದ್ದಾರೆ.
ತೆಂಗಿನ ಮಟ್ಟೆಯ ಬ್ಯಾಟ್, ಬರಿಗಾಲಿನ ಕ್ರಿಕೆಟ್!
ಇಂದು ಮೈದಾನದ ಮೂಲೆ ಮೂಲೆಗೆ ಸಿಕ್ಸರ್ ಸಿಡಿಸುವ ಶೆಫರ್ಡ್ ಅವರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಗಯಾನಾದ ಲಿಂಡೆನ್‌ನಲ್ಲಿ ಬೆಳೆದ ಇವರು ಕ್ರಿಕೆಟ್ ಆಡಲು ಸರಿಯಾದ ಉಪಕರಣಗಳಿಲ್ಲದೆ ಪರದಾಡುತ್ತಿದ್ದರು. "ನಾನು ಮನೆಯ ಹಿತ್ತಲಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದವನು. ಮರದ ತುಂಡುಗಳಿಂದ ಬಾಲ್ ತಯಾರಿಸುತ್ತಿದ್ದೆವು, ತೆಂಗಿನ ಮಟ್ಟೆಗಳೇ ನಮಗೆ ಬ್ಯಾಟ್ ಆಗಿದ್ದವು," ಎಂದು ಅವರು ನೆನಪಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಅಂದು ಅವರ ಬಳಿ ಪ್ಯಾಡ್‌ಗಳೂ ಇರಲಿಲ್ಲ. "ಬರಿಗಾಲಿನಲ್ಲಿ ಆಡುತ್ತಿದ್ದ ನಮಗೆ ಬಾಲ್ ಕಾಲಿಗೆ (ಶಿನ್) ಬಡಿದರೆ ವಿಪರೀತ ನೋವಾಗುತ್ತಿತ್ತು. ಹಾಗಾಗಿ ಕಾಲುಗಳನ್ನು ಉಳಿಸಿಕೊಳ್ಳಲು ನಾವು ಡಿಫೆನ್ಸಿವ್ ಆಗಿ ಆಡಬೇಕಿತ್ತು," ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಅಂದು ಒಂದೂ ಸಿಕ್ಸರ್ ಇಲ್ಲ!
ಇಂದು ಶೆಫರ್ಡ್ ಅಂದಾಕ್ಷಣ ನೆನಪಾಗುವುದು ಅವರ ಭರ್ಜರಿ ಸಿಕ್ಸರ್‌ಗಳು. ಆದರೆ ಅವರು ಆಡಿದ ಮೊದಲ ಅಧಿಕೃತ ಪಂದ್ಯದಲ್ಲಿ ಒಂದೂ ಸಿಕ್ಸರ್ ಸಿಡಿಸಿರಲಿಲ್ಲ ಎಂಬುದು ಅಚ್ಚರಿಯ ವಿಷಯ. "ಶಾಲಾ ದಿನಗಳ ನನ್ನ ಮೊದಲ ಪಂದ್ಯದಲ್ಲಿ ನಾನು 40 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ 129 ರನ್ ಗಳಿಸಿದ್ದೆ. ಆದರೆ ಅದರಲ್ಲಿ ಒಂದೇ ಒಂದು ಸಿಕ್ಸರ್ ಇರಲಿಲ್ಲ. ಆಗ ನಾನು ಕೇವಲ ಗ್ಯಾಪ್‌ಗಳನ್ನು ಹುಡುಕಿ ರನ್ ಗಳಿಸುತ್ತಿದ್ದೆ ಅಷ್ಟೇ," ಎಂದು ತಮ್ಮ ಬ್ಯಾಟಿಂಗ್ ಶೈಲಿಯ ಬದಲಾವಣೆಯ ಬಗ್ಗೆ ವಿವರಿಸಿದ್ದಾರೆ.
ಡ್ವೇನ್ ಬ್ರಾವೋ ಸ್ಫೂರ್ತಿ!
ವೆಸ್ಟ್ ಇಂಡೀಸ್‌ನ ದಂತಕಥೆ ಡ್ವೇನ್ ಬ್ರಾವೋ ಅವರ ಆಲ್‌ರೌಂಡ್ ಪ್ರದರ್ಶನವನ್ನು ನೋಡಿ ಬೆಳೆದ ಶೆಫರ್ಡ್, ಅವರನ್ನೇ ತಮ್ಮ ಮಾದರಿಯನ್ನಾಗಿ ಸ್ವೀಕರಿಸಿದರು. "ರೇಡಿಯೋದಲ್ಲಿ ಯಾವಾಗಲೂ ಬ್ರಾವೋ ಹೆಸರೇ ಕೇಳಿಬರುತ್ತಿತ್ತು. ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದರಲ್ಲೂ ನಿಸ್ಸೀಮರು. ನಾನೂ ಅವರಂತೆಯೇ ಆಗಬೇಕು ಎಂದು ಬಯಸಿದ್ದೆ," ಎಂದಿದ್ದಾರೆ.
2018ರ ಕೆರಿಬಿಯನ್ ಪ್ರೀಮಿಯರ್ ಲೀಗ್ ಶೆಫರ್ಡ್ ಬದುಕಿಗೆ ಹೊಸ ತಿರುವು ನೀಡಿತು. ಅಲ್ಲಿ ಅವರು ತಮ್ಮ ಆರಾಧ್ಯ ದೈವ ಬ್ರಾವೋ ಎಸೆದ ಮೊದಲ ಚೆಂಡನ್ನೇ ಸಿಕ್ಸರ್‌ಗೆ ಅಟ್ಟಿದ್ದು ಅವರ ವೃತ್ತಿಜೀವನದ ಮರೆಯಲಾಗದ ಕ್ಷಣವಂತೆ. ಐಯಾನ್ ಬಿಷಪ್ ಅವರಂತಹ ದಿಗ್ಗಜ ಕಾಮೆಂಟೇಟರ್‌ಗಳು ಕೂಡ ಈ ಹುಡುಗನಲ್ಲಿ ಏನೋ ಮ್ಯಾಜಿಕ್ ಇದೆ ಎಂದು ಹೊಗಳಲು ಅಂದೇ ಶುರು ಮಾಡಿದ್ದರು.
ಆರ್‌ಸಿಬಿ ಎಂದರೆ 'ಫ್ಯಾಮಿಲಿ'
ಆರ್‌ಸಿಬಿ ತಂಡದ ಬಗ್ಗೆ ಮಾತನಾಡುತ್ತಾ ಶೆಫರ್ಡ್ ಭಾವುಕರಾದರು.ನಾನು ಚಿಕ್ಕವನಿದ್ದಾಗ ಆರ್‌ಸಿಬಿಯಲ್ಲಿ ಕ್ರಿಸ್ ಗೇಲ್ ಆಡುತ್ತಿದ್ದರು, ಹಾಗಾಗಿ ಇಡೀ ವೆಸ್ಟ್ ಇಂಡೀಸ್ ತಂಡವೇ ಈ ಫ್ರಾಂಚೈಸಿಯನ್ನು ಬೆಂಬಲಿಸುತ್ತಿತ್ತು. ಇಂದು ನಾನೇ ಈ ತಂಡದ ಭಾಗವಾಗಿರುವುದು ಹೆಮ್ಮೆಯ ವಿಷಯ, ಎಂದರು.
ಡ್ರೆಸ್ಸಿಂಗ್ ರೂಮ್ ವಾತಾವರಣದ ಬಗ್ಗೆ ಕೇಳಿದಾಗ, "ವಿರಾಟ್ ಕೊಹ್ಲಿ ಮೈದಾನದಲ್ಲಿ ತುಂಬಾ ಅಗ್ರೆಸಿವ್ ಆಗಿ ಕಾಣುತ್ತಾರೆ. ಆದರೆ ಅವರು ನಿಜ ಜೀವನದಲ್ಲಿ ಅತ್ಯಂತ ತಮಾಷೆಯ ವ್ಯಕ್ತಿ. ಅವರ ಕಾಮಿಡಿ ಸೆನ್ಸ್ ಅದ್ಭುತವಾಗಿದೆ. ಟಿಮ್ ಡೇವಿಡ್, ಫಿಲ್ ಸಾಲ್ಟ್ ಮತ್ತು ಜೇಕಬ್ ಬೆಥೆಲ್ ಅವರಂತಹ ಆಟಗಾರರೊಂದಿಗೆ ಕಾಲ ಕಳೆಯುವುದು ಖುಷಿ ಕೊಡುತ್ತದೆ," ಎಂದು ತಿಳಿಸಿದರು.
'ಆರ್‌ಸಿಬಿ' ಕೇವಲ ಫ್ರಾಂಚೈಸಿಯಲ್ಲ, ಅದೊಂದು ಎಮೋಷನ್!
ವಿಶ್ವದ ಯಾವುದೇ ಮೂಲೆಯಲ್ಲಿ ವೆಸ್ಟ್ ಇಂಡೀಸ್ ಪರ ಆಡುತ್ತಿದ್ದರೂ ಅಲ್ಲಿನ ಅಭಿಮಾನಿಗಳು 'RCB... RCB...' ಎಂದು ಕೂಗುವುದನ್ನು ಕಂಡು ಶೆಫರ್ಡ್ ಬೆರಗಾಗಿದ್ದಾರೆ. ಆರ್‌ಸಿಬಿ ನನಗೆ ದೊಡ್ಡ ವೇದಿಕೆ ನೀಡಿದೆ. ಇದು ಕೇವಲ ಒಂದು ತಂಡವಲ್ಲ, ಇದೊಂದು ಕುಟುಂಬ. ಇಲ್ಲಿನ ಹಿರಿಯ ಮತ್ತು ಕಿರಿಯ ಆಟಗಾರರ ನಡುವಿನ ಬಾಂಧವ್ಯ ಅಮೋಘವಾಗಿದೆ, ಎಂದು ಅವರು ತಮ್ಮ ಮಾತು ಮುಗಿಸಿದ್ದಾರೆ,(ಏಜೆನ್ಸೀಸ್).