IPL-2026: ಆಡಿಸದಿದ್ದರೂ ಬದಲಿ ಆಟಗಾರರ ಸೇರ್ಪಡೆ; ಇದರ ಹಿಂದಿದೆ ರಿಟೇನ್​ ಪ್ಲ್ಯಾನ್​! 
ಕ್ರಿಕೆಟ್

IPL-2026: ಆಡಿಸದಿದ್ದರೂ ಬದಲಿ ಆಟಗಾರರ ಸೇರ್ಪಡೆ; ಇದರ ಹಿಂದಿದೆ ರಿಟೇನ್​ ಪ್ಲ್ಯಾನ್​!

ನವದೆಹಲಿ: ಐಪಿಎಲ್​ 19ನೇ (IPL 2026) ಆವೃತ್ತಿಯಲ್ಲಿ ಕೊನೇ ಲೀಗ್​ ಪಂದ್ಯಕ್ಕೆ ಮುನ್ನ 3 ತಂಡಗಳು ನಾಲ್ವರು ಆಟಗಾರರನ್ನು ಬದಲಿಗರನ್ನಾಗಿ (replacement) ಸೇರ್ಪಡೆ ಮಾಡಿಕೊಂಡವು. ಮುಂಬೈ ಇಂಡಿಯನ್ಸ್​ ತಂಡ ಗಾಯದಿಂದಾಗಿ ಹೊರಬಿದ್ದ ಕ್ವಿಂಟನ್​ ಡಿಕಾಕ್​ ಮತ್ತು ರಾಜ್​ ಬಾವಾ ಬದಲಿಗೆ ಮಹಿಪಾಲ್​ ಲೊಮ್ರೊರ್​ ಮತ್ತು ರುಚಿತ್​ ಅಹಿರ್​ರನ್ನು ಸೇರಿಸಿಕೊಂಡರೆ, ರಾಜಸ್ಥಾನ ರಾಯಲ್ಸ್​ ತಂಡ ರವಿ ಸಿಂಗ್​ ಬದಲಿಗೆ ಇಮಾನ್​ಜೋತ್​ ಚಾಹಲ್​ ಮತ್ತು ಕೆಕೆಆರ್​ ತಂಡ ಮಥೀಶ್​ ಪಥಿರಣ ಬದಲಿಗೆ ಕನ್ನಡಿಗ ಲವನೀತ್​ ಸಿಸೋಡಿಯಾರನ್ನು ಸೇರಿಸಿಕೊಂಡಿತು. ಆದರೆ ಈ ನಾಲ್ವರು ಬದಲಿಗರಿಗೂ ಕೊನೇ ಲೀಗ್​ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಕಣಕ್ಕಿಳಿಸದ ನಡುವೆಯೂ ಬದಲಿ ಆಟಗಾರರನ್ನು ಸೇರಿಸಿಕೊಂಡ ಈ ನಡೆಯ ಹಿಂದೆ ಜಾಣ ಕಾರ್ಯತಂತ್ರವೊಂದೂ ಇದೆ.

ಅದೆಂದರೆ, ಬದಲಿಗರಾಗಿ ಸೇರಿಸಿಕೊಂಡ ಈ ಆಟಗಾರರನ್ನು ಮುಂದಿನ ಆವೃತ್ತಿಗೆ ರಿಟೇನ್ (
retention)​ ಮಾಡಿಕೊಳ್ಳುವ ಅವಕಾಶವೂ ಈ ತಂಡಗಳಿಗೆ ಲಭಿಸಿದೆ. ಐಪಿಎಲ್​ ನಿಯಮಾವಳಿ ಪ್ರಕಾರ, ತಂಡವೊಂದು ತನ್ನ 12ನೇ ಪಂದ್ಯದವರೆಗೆ ಗಾಯಗೊಂಡ ಆಟಗಾರರಿಗೆ ಬದಲಿಗರನ್ನಾಗಿ ಸೇರಿಸಿಕೊಂಡವರನ್ನು ಮತ್ತು ಗಾಯದಿಂದ ಹೊರಬಿದ್ದ ಇಬ್ಬರನ್ನೂ ಮುಂದಿನ ಆವೃತ್ತಿಗೂ ರಿಟೇನ್​ ಮಾಡಿಕೊಳ್ಳಬಹುದು. ಹೀಗಾಗಿ ತಂಡಗಳು ಕೊನೇ ಲೀಗ್​ ಪಂದ್ಯಕ್ಕೆ ಅಗತ್ಯವಿಲ್ಲದಿದ್ದರೂ, ಬದಲಿ ಆಟಗಾರರನ್ನು ಸೇರಿಸಿಕೊಂಡು, ಆಟಗಾರರ ರಿಟೇನ್​ ಆಯ್ಕೆಯ ಅವಕಾಶ ಸೃಷ್ಟಿಸಿಕೊಂಡಿವೆ.

ಕಳೆದ ವರ್ಷ ಸಿಎಸ್​ಕೆ ತಂಡ ಇದೇ ರೀತಿ, ಗುರುಜಪ್​ನೀತ್​ ಬದಲಿಗೆ ಡಿವಾಲ್ಡ್​ ಬ್ರೆವಿಸ್​ರನ್ನು ಸೇರಿಸಿಕೊಂಡು ಬಳಿಕ, ಹಾಲಿ ಆವೃತ್ತಿಗೆ ಇಬ್ಬರನ್ನೂ ರಿಟೇನ್​ ಮಾಡಿಕೊಂಡಿತ್ತು.