- ಆರ್ಸಿಬಿ ಅಭಿಮಾನಿಗಳ ಪಾಲಿಗೆ ಜೂನ್ 2025 ಅತ್ಯಂತ ಕಹಿ ನೆನಪಿನ ತಿಂಗಳಾಗಿತ್ತು
- ಮೊದಲ ಬಾರಿಗೆ ಚಾಂಪಿಯನ್ ಶಿಪ್ ಪಡೆದು ಬೆಂಗಳೂರಿಗೆ ಆಗಮಿಸಿದ್ದಾಗ ಸಂಭವಿಸಿದ ಕಾಲ್ತುಳಿತ
- ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳಿಗೆ ಗೌರವ ಸಲ್ಲಿಸಲು ಮುಂದಾದ ಆರ್ಸಿಬಿ ಫ್ರಾಂಚೈಸಿ
ಬೆಂಗಳೂರು: ಆರ್ಸಿಬಿ ಅಭಿಮಾನಿಗಳ ಪಾಲಿಗೆ ಜೂನ್ 2025 ಅತ್ಯಂತ ಕಹಿ ನೆನಪಿನ ತಿಂಗಳಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ ಶಿಪ್ ಪಡೆದು ಬೆಂಗಳೂರಿಗೆ ಆಗಮಿಸಿದ್ದಾಗ ಉಂಟಾದ ಕಾಲ್ತುಳಿತ ದೊಡ್ಡ ಆಘಾತ ನೀಡಿತ್ತು. (Chinnaswamy Stadium) ಈಗ ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಫ್ರಾಂಚೈಸಿ ವಿಶೇಷ ನಿರ್ಧಾರ ಕೈಗೊಂಡಿದೆ.
ಆರ್.ಸಿ.ಬಿ ಫ್ರಾಂಚೈಸಿಯ ಹೃದಯಸ್ಪರ್ಶಿ ನಡೆ
ಆರ್ಸಿಬಿ ಯಶಸ್ಸಿನ ಬೆನ್ನೆಲುಬಾಗಿರುವ ಅಭಿಮಾನಿಗಳ ವಿಷಯದಲ್ಲಿ ಹೃದಯಸ್ಪರ್ಶಿ ಹೆಜ್ಜೆ ಇಟ್ಟಿರುವ ಫ್ರಾಂಚೈಸಿ, ಕಳೆದ ವರ್ಷ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ ಅಭಿಮಾನಿಗಳ ಸ್ಮರಣಾರ್ಥವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸುವ ಮೂಲಕ ಮಾದರಿ ನಡೆ ಅನುಸರಿಸುತ್ತಿದ್ದು, ಈ ಆಸನಗಳು ಅಗಲಿದ ಜೀವಗಳ ಜ್ಞಾಪಕಾರ್ಥವಾಗಿ ಶಾಶ್ವತವಾಗಿ ಉಳಿಯಲಿವೆ ಎಂದು ಹೇಳಿದೆ.
ಇದಲ್ಲದೆ, ಮಾರ್ಚ್ 28 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಾವಳಿಯಲ್ಲಿ ಆರ್.ಸಿ.ಬಿ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಪೂರ್ವಭಾವಿ ತರಬೇತಿ ಅವಧಿಯಲ್ಲಿ ತಂಡದ ಎಲ್ಲಾ ಆಟಗಾರರು '11'ನೇ ಸಂಖ್ಯೆಯ ಜರ್ಸಿಯನ್ನು ಧರಿಸಲಿದ್ದಾರೆ ಎಂದು ಫ್ರಾಂಚೈಸಿ ಮಾಹಿತಿ ಹಂಚಿಕೊಂಡಿದೆ.
ಸಿಇಒ ರಾಜೇಶ್ ಮೆನನ್ ಅಭಿಪ್ರಾಯ
ಟೂರ್ನಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಸಿಬಿ ಸಿಇಒ ರಾಜೇಶ್ ಮೆನನ್, ಜೂನ್ 4 ರಂದು ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಅಭಿಮಾನಿಗಳು ಪ್ರಾಣ ಕಳೆದುಕೊಂಡ ಹಿನ್ನಲೆ, ಅವರ ನೆನಪಿಗಾಗಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಸೀಟುಗಳು ಬಿಡಲಾಗುತ್ತದೆ. ಇನ್ನು ಆಟಗಾರರು 11 ನೇ ಸಂಖ್ಯೆಯ ಜೆರ್ಸಿ ಮತ್ತು ಕಪ್ಪು ತೋಳುಪಟ್ಟಿ ಧರಿಸಲಿ ಆಡಲಿದ್ದಾರೆ ಎಂದರು.
ಈ ನಿರ್ಧಾರವು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆರ್.ಸಿ.ಬಿ ಅಭಿಮಾನಿಗಳು ತಮ್ಮ ತಂಡದ ಈ ನಡೆಯನ್ನು ಕೊಂಡಾಡುತ್ತಿದ್ದಾರೆ. ತಂಡವು ಗೆದ್ದಾಗ ಮಾತ್ರವಲ್ಲ, ಕಷ್ಟದ ಸಮಯದಲ್ಲಿ ಅಭಿಮಾನಿಗಳ ಜೊತೆ ನಿಂತಾಗ ಅದು ನಿಜವಾದ ಕುಟುಂಬ ಎನಿಸಿಕೊಳ್ಳುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ (ಏಜೆನ್ಸೀಸ್).