ಕುತೂಹಲ ಮೂಡಿಸಿದ ಐಪಿಎಲ್ ಪ್ಲೇಆಫ್ ರೇಸ್
ಬೆಂಗಳೂರು: ರನ್, ಸಿಕ್ಸರ್ ಮಳೆ ಹರಿಸುತ್ತಿರುವ ಮತ್ತು 200 ಪ್ಲಸ್ ಮೊತ್ತಗಳನ್ನು ಸರಾಗವಾಗಿ ಚೇಸಿಂಗ್ ಮಾಡಲಾಗುತ್ತಿರುವ ಐಪಿಎಲ್ 19ನೇ ಆವೃತ್ತಿಯಲ್ಲಿ ಇದುವರೆಗೆ 49 ಪಂದ್ಯಗಳು ನಡೆದಿದ್ದು, ಇನ್ನು 21 ಲೀಗ್ ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಯಾವ ತಂಡಕ್ಕೂ ಇದುವರೆಗೆ ಪ್ಲೇಆಫ್ (IPL 2026 playoffs) ಸ್ಥಾನ ಖಚಿತವಾಗಿಲ್ಲ. ವಾರದ ಹಿಂದೆ ಅಂಕಪಟ್ಟಿ ನೋಡಿದ್ದರೆ ಪ್ಲೇಆಫ್ಗೇರುವ ಅಗ್ರ 4 ತಂಡಗಳನ್ನು ಊಹಿಸಬಹುದಾಗಿತ್ತು. ಆದರೆ ಕಳೆದೊಂದು ವಾರದಲ್ಲಿ ಈ 4 ತಂಡಗಳು ಮುಗ್ಗರಿಸಿರುವುದರಿಂದ ಈಗ ಪ್ಲೇಆಫ್ ರೇಸ್ ಮುಕ್ತವಾಗಿದೆ. ಸದ್ಯ 8 ತಂಡಗಳು ರೇಸ್ನಲ್ಲಿದ್ದು, ಅಗ್ರ 2ರೊಳಗಿನ ಸ್ಥಾನಕ್ಕೇ 5 ತಂಡಗಳು ಪೈಪೋಟಿಯಲ್ಲಿವೆ. ಅವುಗಳೆಂದರೆ ಪಂಜಾಬ್, ಆರ್ಸಿಬಿ, ಸನ್ರೈಸರ್ಸ್, ರಾಜಸ್ಥಾನ ಮತ್ತು ಗುಜರಾತ್. ಇನ್ನು ಸಿಎಸ್ಕೆ ಪ್ಲೇಆಫ್ ರೇಸ್ನಲ್ಲಿ ಅಚ್ಚರಿ ಮೂಡಿಸಬಲ್ಲ ರೀತಿ ಪುಟಿದೆದ್ದು ಬರುತ್ತಿದೆ. ಡೆಲ್ಲಿ ಉಳಿದ 4 ಮತ್ತು ಕೆಕೆಆರ್ ಉಳಿದ 5 ಪಂದ್ಯ ಗೆದ್ದರಷ್ಟೇ ಪ್ಲೇಆಫ್ಗೆ ಆಸೆ ಪಡಬಹುದು. ಇಲ್ಲದಿದ್ದರೆ ಈಗಾಗಲೆ ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ, ಲಖನೌ ಸಾಲಿಗೆ ಸೇರಲಿವೆ.
ತಲಾ 14 ಲೀಗ್ ಪಂದ್ಯ ಆಡುವ 10 ತಂಡಗಳ ಟೂರ್ನಿಯಲ್ಲಿ ಪ್ಲೇಆಫ್ ಹಂತಕ್ಕೇರಲು ಸಾಮಾನ್ಯವಾಗಿ 8 ಜಯ ಅಂದರೆ 16 ಅಂಕ ಬೇಕಾಗುತ್ತದೆ. 2024ರಲ್ಲಿ ಆರ್ಸಿಬಿ ತಂಡ 7 ಪಂದ್ಯವನ್ನಷ್ಟೇ (14 ಅಂಕ) ಗೆದ್ದು ಪ್ಲೇಆಫ್ ಗೇರಿದ ದೃಷ್ಟಾಂತವೂ ಇದೆ. ಆದರೆ ಈ ಬಾರಿ ಅಗ್ರ 5 ತಂಡಗಳ ನಡುವೆ ನಿಕಟ ಪೈಪೋಟಿ ಇರುವುದರಿಂದ, ಪ್ಲೇಆಫ್ಗೇರಲು 16 ಅಂಕವೂ ಸಾಕಾಗದಿರುವ ಸಾಧ್ಯತೆಯೂ ಇದೆ.
ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಈ ಬಾರಿ ಆರಂಭಿಕ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಾಗಲೇ ಅಭಿಮಾನಿಗಳಿಗೆ ಬಹುತೇಕ ಪ್ಲೇಆಫ್ ಗೇರುವ ವಿಶ್ವಾಸ ಬಂದಿತ್ತು. ನಂತರದ 4ರಲ್ಲಿ ತಲಾ 2 ಜಯ, ಸೋಲು ಕಂಡರೂ, ಆಡಿದ 9ರಲ್ಲಿ 6 ಜಯ, 3 ಸೋಲಿನೊಂದಿಗೆ ರಜತ್ ಪಾಟೀದಾರ್ ಪಡೆ ಈಗಾಗಲೆ ಪ್ಲೇಆಫ್ ಹಂತಕ್ಕೆ ಒಂದು ಕಾಲಿಟ್ಟಿದೆ ಎನ್ನಬಹುದು. ಬಲಿಷ್ಠ ರನ್ರೇಟ್ ಇದಕ್ಕೆ ಪ್ರಮುಖ ಕಾರಣ. ಉಳಿದ 5ರಲ್ಲಿ 2ರಲ್ಲಿ ಗೆದ್ದರೂ ಆರ್ಸಿಬಿ ಪ್ಲೇಆಫ್ಗೇರಲಿದೆ. ಉಳಿದ 3-4 ಪಂದ್ಯ ಗೆದ್ದರೆ ಅಗ್ರ 2ರೊಳಗೆ ಸ್ಥಾನ ಪಡೆಯುವ ಅವಕಾಶವೂ ಇದೆ.
*ಬಾಕಿ ಪಂದ್ಯ: ಲಖನೌ (ಮೇ 7), ಮುಂಬೈ (ಮೇ 10), ಕೆಕೆಆರ್ (ಮೇ 13), ಪಂಜಾಬ್ (ಮೇ 17), ಸನ್ರೈಸರ್ಸ್ (ಮೇ 22).
ಆರಂಭಿಕ 7 ಪಂದ್ಯಗಳಲ್ಲಿ (6 ಜಯ) ಅಜೇಯವಾಗಿದ್ದ ಶ್ರೇಯಸ್ ಅಯ್ಯರ್ ಬಳಗ ನಂತರ ಸತತ 3 ಸೋಲು ಅನುಭವಿಸಿದೆ. ಆದರೂ ಪ್ಲೇಆಫ್ ಹಂತಕ್ಕೇರುವ ಅವಕಾಶ ಮಾತ್ರವಲ್ಲದೆ, ಅಗ್ರ 2ರೊಳಗೂ ಸ್ಥಾನ ಪಡೆಯುವ ಆಸೆ ಜೀವಂತವಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್ ಸ್ಥಾನ ಒಲಿಸಿಕೊಳ್ಳಬಹುದು. 3-4ರಲ್ಲಿ ಗೆದ್ದರೆ ಅಗ್ರ 2ರೊಳಗೂ ಸ್ಥಾನ ಉಳಿಯಬಹುದು.
ಬಾಕಿ ಪಂದ್ಯ: ಡೆಲ್ಲಿ (ಮೇ 11), ಮುಂಬೈ (ಮೇ 14), ಆರ್ಸಿಬಿ (ಮೇ 17), ಲಖನೌ (ಮೇ 23).
ಆರಂಭಿಕ 4 ಪಂದ್ಯಗಳಲ್ಲಿ 3ರಲ್ಲಿ ಸೋತರೂ, ನಂತರ ಸತತ 5 ಜಯದೊಂದಿಗೆ ಪ್ಲೇಆಫ್ ಅವಕಾಶ ಹೆಚ್ಚಿಸಿಕೊಂಡಿದ್ದ ಸನ್ರೈಸರ್ಸ್ ತಂಡ ಈಗ 11ರಲ್ಲಿ 7 ಜಯ, 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದ ಈಗ ಅಗ್ರ 4ರಲ್ಲಿ ಮಾತ್ರವಲ್ಲದೆ ಅಗ್ರ 2ರಲ್ಲೂ ಸ್ಥಾನ ಪಡೆಯಬಹುದಾದ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಉಳಿದ 3ರಲ್ಲಿ 1ರಲ್ಲಿ ಗೆದ್ದರೂ ಪ್ಲೇಆಫ್ ಅವಕಾಶವಿದೆ. ಆದರೆ ಈ ಪೈಕಿ ಗುಜರಾತ್, ಆರ್ಸಿಬಿಯಂಥ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿರುವುದು ಸವಾಲನ್ನು ತುಸು ಕಠಿಣಗೊಳಿಸಿದೆ.
ಬಾಕಿ ಪಂದ್ಯ: ಗುಜರಾತ್ (ಮೇ 12), ಸಿಎಸ್ಕೆ (ಮೇ 18), ಆರ್ಸಿಬಿ(ಮೇ 22).
ಪ್ಲೇಆಫ್ ಚಾನ್ಸ್: 84%
ಸತತ 4 ಜಯದೊಂದಿಗೆ ಟೂರ್ನಿಯಲ್ಲಿ ಬಲಿಷ್ಠ ಆರಂಭ ಕಂಡಿದ್ದ ಆರ್ಆರ್, ನಂತರದ 6 ಪಂದ್ಯಗಳಲ್ಲಿ ಗೆಲುವಿನ (2) ದುಪ್ಪಟ್ಟು ಸೋಲು (4) ಕಂಡಿದೆ. ಪ್ಲೇಆಫ್ಗೇರಲು ಉಳಿದ 4ರಲ್ಲಿ 2 ಗೆಲುವಿನ ಅಗತ್ಯವಿದೆ. ಅಂಕಪಟ್ಟಿಯಲ್ಲಿ ತನಗಿಂತ ಕೆಳಗಿನ ಸ್ಥಾನದಲ್ಲಿರುವ 4 ತಂಡಗಳ ವಿರುದ್ಧವೇ ಉಳಿದೆಲ್ಲ ಲೀಗ್ ಪಂದ್ಯ ಆಡಲಿರುವುದು ಆರ್ಆರ್ಗೆ ಅನುಕೂಲಕರ ಎನಿಸಿದೆ. ಹೀಗಾಗಿ 3ರಲ್ಲಿ ಗೆದ್ದರೆ ಅಗ್ರ 2ರೊಳಗೂ ಸ್ಥಾನ ಪಡೆಯುವ ಅವಕಾಶವಿದೆ.
*ಬಾಕಿ ಪಂದ್ಯ: ಗುಜರಾತ್ (ಮೇ 9), ಡೆಲ್ಲಿ (ಮೇ 17), ಲಖನೌ (ಮೇ 19), ಮುಂಬೈ (ಮೇ 24).
ಆಡಿದ ಮೊದಲ 7ರಲ್ಲಿ ಗೆಲುವಿಗಿಂತ (3) ಹೆಚ್ಚು ಸೋಲು (4) ಕಂಡಿದ್ದ ಶುಭಮಾನ್ ಗಿಲ್ ಪಡೆ, ನಂತರ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಅವಕಾಶ ಹೆಚ್ಚಿಸಿಕೊಂಡಿದ್ದು ಮಾತ್ರವಲ್ಲದೆ, ಅಗ್ರ 2ರೊಳಗೆ ಸ್ಥಾನ ಪಡೆಯುವ ಆಸೆಯನ್ನೂ ಹೊಂದಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೆ ಪ್ಲೇಆಫ್ಗೇರುವ ಅವಕಾಶವಿದೆ. ಆದರೆ ಈ ಪೈಕಿ 2ರಲ್ಲಿ ತನಗಿಂತ ಮೇಲಿರುವ ತಂಡಗಳನ್ನೇ ಎದುರಿಸಲಿದೆ. 2 ಗೆಲುವಿನೊಂದಿಗೆ ರನ್ರೇಟ್ ಸುಧಾರಣೆಯತ್ತ ಕೂಡ ಗಮನಕೊಡುವ ಅಗತ್ಯವಿದೆ.
ಬಾಕಿ ಪಂದ್ಯ: ರಾಜಸ್ಥಾನ (ಮೇ 9), ಸನ್ರೈಸರ್ಸ್ (ಮೇ 12), ಕೆಕೆಆರ್ (ಮೇ 16), ಸಿಎಸ್ಕೆ (ಮೇ 21).
ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಸಿಎಸ್ಕೆ, ನಂತರದ 7 ಪಂದ್ಯಗಳಲ್ಲಿ 2ರಲ್ಲಿ ಸೋತು 5ರಲ್ಲಿ ಗೆಲ್ಲುವ ಮೂಲಕ ಪುಟಿದೆದ್ದಿದೆ. ಈ ಮೂಲಕ ಪ್ಲೇಆಫ್ ಅವಕಾಶ ಹೆಚ್ಚಿಸಿಕೊಂಡಿದೆ. ರನ್ರೇಟ್ ಕೂಡ ಪ್ಲಸ್ ಆಗಿ ಸುಧಾರಣೆ ಕಂಡಿದೆ. ಉಳಿದ 4ರಲ್ಲಿ 3ರಲ್ಲಾದರೂ ಗೆದ್ದರೆ ಪ್ಲೇಆಫ್ಗೇರಬಹುದು. ದುರ್ಬಲ ಲಖನೌ ಎದುರು 2 ಪಂದ್ಯ ಆಡಬೇಕಿರುವುದು ಲಾಭದಾಯಕ. ಆದರೆ ಇನ್ನು 2 ಪಂದ್ಯ ಸೋತರೆ ಪ್ಲೇಆಫ್ ಬಾಗಿಲು ಬಹುತೇಕ ಮುಚ್ಚಲಿದೆ.
*ಬಾಕಿ ಪಂದ್ಯ: ಲಖನೌ (ಮೇ 10), ಲಖನೌ (ಮೇ 15), ಸನ್ರೈಸರ್ಸ್ (ಮೇ 18), ಗುಜರಾತ್ (ಮೇ 21).
ಆರಂಭದಿಂದಲೂ ಸೋಲು-ಗೆಲುವಿನ ಏರಿಳಿತ ಕಾಣುತ್ತಿರುವ ಡೆಲ್ಲಿ ತಂಡ ಸದ್ಯ 10 ಪಂದ್ಯಗಳಲ್ಲಿ ಗೆಲುವಿಗಿಂತ (4) ಹೆಚ್ಚು ಸೋಲು (6) ಅನುಭವಿಸಿದೆ. ಪ್ಲೇಆಫ್ ರೇಸ್ನಲ್ಲಿ ಡೆಲ್ಲಿಗೆ ಕಳಪೆ ರನ್ರೇಟ್ ಕೂಡ ದೊಡ್ಡ ಹಿನ್ನಡೆ ಎನಿಸಿದೆ. ಉಳಿದ 4ರಲ್ಲೂ ಗೆಲ್ಲುವ ಜತೆಗೆ ರನ್ರೇಟ್ ಕೂಡ ಸುಧಾರಿಸಿದರೆ, ಇತರ ಫಲಿತಾಂಶ ವರದಾನವಾದರೆ ಪ್ಲೇಆಫ್ ಅವಕಾಶವಿದೆ. ತನಗಿಂತ ಕೆಳಗಿರುವ ಕೆಕೆಆರ್ ಎದುರು 2 ಪಂದ್ಯ ಆಡುವ ಅನುಕೂಲವಿದೆ.
*ಬಾಕಿ ಪಂದ್ಯ: ಕೆಕೆಆರ್ (ಮೇ 8), ಪಂಜಾಬ್ (ಮೇ 11), ರಾಜಸ್ಥಾನ (ಮೇ 17), ಕೆಕೆಆರ್ (ಮೇ 24).
ಮೊದಲ 6 ಪಂದ್ಯಗಳಲ್ಲಿ ಗೆಲುವು ಕಾಣದಿದ್ದರೂ, ಇದೀಗ ಹ್ಯಾಟ್ರಿಕ್ ಜಯದೊಂದಿಗೆ ಕೆಕೆಆರ್ ಆಸೆ ಜೀವಂತ ಉಳಿಸಿಕೊಂಡಿದೆ. ಆದರೆ ಪ್ಲೇಆಫ್ಗೇರಬೇಕಾದರೆ ಉಳಿದ 5 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಮಾಡು ಇಲ್ಲವೆ ಮಡಿ ಸವಾಲು ಇದೆ. ಇನ್ನೊಂದು ಸೋಲು ಕಂಡರೂ, ರೇಸ್ನಿಂದ ಹೊರಬೀಳಲಿದೆ.
ಬಾಕಿ ಪಂದ್ಯ: ಡೆಲ್ಲಿ (ಮೇ 8), ಆರ್ಸಿಬಿ (ಮೇ 13), ಗುಜರಾತ್ (ಮೇ 16), ಮುಂಬೈ (ಮೇ 20), ಡೆಲ್ಲಿ (ಮೇ 24)
ತಲಾ 7 ಸೋಲು ಅನುಭವಿಸಿರುವ ಮುಂಬೈ, ಲಖನೌ ಈಗಾಗಲೆ ಟೂರ್ನಿಯಿಂದ ಬಹುತೇಕ ಗೇಟ್ಪಾಸ್ ಪಡೆದಿವೆ. ಹಾರ್ದಿಕ್ ಪಾಂಡ್ಯ ಪಡೆ ಇನ್ನುಳಿದ 4 ಮತ್ತು ರಿಷಭ್ ಪಂತ್ ಪಡೆ 5 ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್ ಹಂತಕ್ಕೇರುವ ಅವಕಾಶ ಕ್ಷೀಣ. ಟೂರ್ನಿಯಲ್ಲಿ 3ಕ್ಕಿಂತ ಹೆಚ್ಚು ತಂಡಗಳು ಕನಿಷ್ಠ 8 ಪಂದ್ಯ ಗೆಲ್ಲದಿದ್ದರಷ್ಟೇ, ಗಣಿತಶಾಸ್ತ್ರದ ಪ್ರಕಾರ ಪ್ಲೇಆಫ್ಗೇರುವ ಅವಕಾಶವಿದೆ. ಅದೂ ರನ್ರೇಟ್ ದೊಡ್ಡ ಪ್ರಮಾಣದಲ್ಲಿ ಏರಿಕೆಯಾದರೆ ಮಾತ್ರ.