- ಐಪಿಎಲ್ 19ನೇ ಆವೃತ್ತಿಯ ಮೊದಲಾರ್ಧ ಮುಕ್ತಾಯ
- ದ್ವಿತೀಯಾರ್ಧದಲ್ಲಿ ಗೆಲುವಿನ ಲೆಕ್ಕಾಚಾರ ಬದಲು
- ಟಾಪ್ ನಾಲ್ಕರಲ್ಲಿರುವ ತಂಡಗಳು ಸೋಲು, ಕೆಕೆಆರ್ ಸತತ 4 ಗೆಲುವು
IPL 2026: 19ನೇ ಐಪಿಎಲ್ ಆವೃತ್ತಿಯ ಮೊದಲಾರ್ಧ ಮುಕ್ತಾಯಗೊಂಡಿದ್ದು, ದ್ವಿತೀಯಾರ್ಧದಲ್ಲಿ ಪ್ಲೇಆಫ್ ಲೆಕ್ಕಾಚಾರ ಸಂಪೂರ್ಣ ಬದಲಾಗುವ ಸಾಧ್ಯತೆಗಳಿವೆ ಎನ್ನುವುದಕ್ಕೆ ಇತ್ತೀಚಿನ ಪಂದ್ಯಗಳೇ ಸಾಕ್ಷಿ. ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿದ್ದ ಕೋಲ್ಕತ ನೈಟ್ ರೈಡರ್ಸ್ ಬ್ಯಾಕ್ ಟು ಬ್ಯಾಕ್ ನಾಲ್ಕು ಪಂದ್ಯಗಳನ್ನು ಗೆದ್ದು ಇದೀಗ 7ನೇ ಸ್ಥಾನಕ್ಕೆ ಬಂದು ನಿಂತಿರುವುದು ಗಮನಾರ್ಹ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫಿನ್ ಆ್ಯಲೆನ್ ಅವರ ಶತಕದಾಟದಿಂದ ಕೇವಲ 14.2 ಓವರ್ನಲ್ಲೇ ಸುಲಭ ಗೆಲುವು ದಾಖಲಿಸಿದ ಕೆಕೆಆರ್, ಉಳಿದಿರುವ ನಿರ್ಣಾಯಕ ಪಂದ್ಯಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಮತ್ತೊಂದೆಡೆ, ಆರ್ಸಿಬಿ, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ನಂತಹ ಗೆಲುವಿನ ತಂಡಗಳು ಸದ್ಯ ಅಗ್ರ ಸ್ಥಾನಗಳಲ್ಲಿದ್ದು, ಹೀನಾಯ ಸೋಲನ್ನು ಅನುಭವಿಸುತ್ತಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ಕಳೆದ ಪಂದ್ಯಗಳಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಸೋಲುಂಡಿದ್ದು, ರಾಜಸ್ಥಾನ ರಾಯಲ್ಸ್ ಅಲ್ಲಲ್ಲಿ ಮುಗ್ಗರಿಸುವ ಮೂಲಕ ಅಂಕಪಟ್ಟಿಯ ಅಗ್ರ ನಾಲ್ಕು ಸ್ಥಾನದಿಂದ ಕೆಳಗಿಳಿಯುವ ಮುನ್ಸೂಚನೆಯನ್ನು ನೀಡಿವೆ. ಪ್ರಸ್ತುತ, ಪಾಯಿಂಟ್ ಟೇಬಲ್ನಲ್ಲಿ ಪಂಜಾಬ್ (2), ಆರ್ಸಿಬಿ (3) ಮತ್ತು ಆರ್ಆರ್ (4) ಟಾಪ್ ನಾಲ್ಕರಲ್ಲಿ ತಮ್ಮ ಸ್ಥಾನಗಳನ್ನು ಭದ್ರವಾಗಿ ಉಳಿಸಿಕೊಂಡಿವೆ. ಆದರೆ, ಮುಂಬರುವ ಪಂದ್ಯಗಳಲ್ಲಿ ಏನಾದರೂ ಸೋತರೆ, ಬೌನ್ಸ್ ಬ್ಯಾಕ್ ಮಾಡುತ್ತಿರುವ ಸಿಎಸ್ಕೆ, ಕೆಕೆಆರ್ ಮತ್ತು ಗುಜರಾತ್ ಟೈಟನ್ಸ್ನಂತಹ ತಂಡಗಳು ಟಾಪ್ 4 ಸ್ಥಾನಗಳನ್ನು ಅಲಂಕರಿಸಿರುವುದು ಖಚಿತ.
ಅಜಿಂಕ್ಯಾ ರಹಾನೆ ಪಡೆಗೆ ಪ್ಲೇಆಪ್ ಗೆಲ್ಲುವ ಭರವಸೆ ಹೆಚ್ಚಾಗಿದ್ದು, ಮುಂದಿನ 4 ಪಂದ್ಯಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸುವುದು ಗುರಿಯಾಗಿದೆ. ಇದರಲ್ಲಿ ಒಂದೇ ಒಂದು ಪಂದ್ಯ ಸೋತರೂ ಕೆಕೆಆರ್ಗೆ ಪ್ಲೇಆಫ್ ಕಷ್ಟವೇ. ಕಾರಣ, ಅವರ ರನ್ರೇಟ್ ಹೇಳಿಕೊಳ್ಳುವಂತಿಲ್ಲ. ಇದೆಲ್ಲದರ ಜೊತೆಗೆ ಅಗ್ರಸ್ಥಾನದಲ್ಲಿರುವ ತಂಡಗಳು ಸೋತರೆ ರಹಾನೆ ಪಡೆಯ ಪ್ಲೇಆಫ್ ಕನಸು ಇನ್ನಷ್ಟು ಸುಲಭವಾಗಲಿದೆ,(ಏಜೆನ್ಸೀಸ್).