ಮುಂಬೈ: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI), 2026ರ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ(IPL 2026) ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಪಡೆ ಕೆಕೆಆರ್ ತಂಡವನ್ನು ಮಣಿಸಿ, ಐಪಿಎಲ್ ಇತಿಹಾಸದಲ್ಲೇ ಅಳಿಸಲಾಗದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಒಂದೇ ತಂಡದ ವಿರುದ್ಧ 25 ಗೆಲುವು!
ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನಲ್ಲಿ ಒಂದೇ ಎದುರಾಳಿ ತಂಡದ ವಿರುದ್ಧ 25 ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಕೆಕೆಆರ್ ಮತ್ತು ಮುಂಬೈ ತಂಡಗಳು ಈವರೆಗೆ ಒಟ್ಟು 36 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಮುಂಬೈ 25 ಬಾರಿ ಜಯಭೇರಿ ಬಾರಿಸಿದೆ. ಕೆಕೆಆರ್ ಕೇವಲ 11 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಲು ಶಕ್ತವಾಗಿದೆ. ಈ ಮೂಲಕ ಐಪಿಎಲ್‌ನಲ್ಲಿ 'ಒನ್ ಸೈಡೆಡ್ ಡಾಮಿನೇಷನ್' ಎಂದರೆ ಅದು ಮುಂಬೈ ಮತ್ತು ಕೆಕೆಆರ್ ನಡುವಿನ ಪಂದ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಐಪಿಎಲ್‌ನಲ್ಲಿ ಎದುರಾಳಿ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ಟಾಪ್ 5 ತಂಡಗಳು:
ಮುಂಬೈ ಇಂಡಿಯನ್ಸ್: 25 ಗೆಲುವು (KKR ವಿರುದ್ಧ - 36 ಪಂದ್ಯಗಳಲ್ಲಿ)
ಚೆನ್ನೈ ಸೂಪರ್ ಕಿಂಗ್ಸ್: 21 ಗೆಲುವು (RCB ವಿರುದ್ಧ - 35 ಪಂದ್ಯಗಳಲ್ಲಿ)
ಕೋಲ್ಕತ್ತಾ ನೈಟ್ ರೈಡರ್ಸ್: 21 ಗೆಲುವು (PBKS ವಿರುದ್ಧ - 35 ಪಂದ್ಯಗಳಲ್ಲಿ)
ಮುಂಬೈ ಇಂಡಿಯನ್ಸ್: 21 ಗೆಲುವು (CSK ವಿರುದ್ಧ - 39 ಪಂದ್ಯಗಳಲ್ಲಿ)
ಮುಂಬೈ ಇಂಡಿಯನ್ಸ್: 21 ಗೆಲುವು (DC ವಿರುದ್ಧ - 37 ಪಂದ್ಯಗಳಲ್ಲಿ)
ವಾಂಖೆಡೆಯಲ್ಲಿ ಮುಂಬೈ ಅಧಿಪತ್ಯ
ಮುಂಬೈನ ವಾಂಖೆಡೆ ಕ್ರೀಡಾಂಗಣವು ಕೆಕೆಆರ್ ಪಾಲಿಗೆ ಯಾವಾಗಲೂ ದುಸ್ವಪ್ನವಾಗಿಯೇ ಉಳಿದಿದೆ. ಇಲ್ಲಿ ನಡೆದ 13 ಪಂದ್ಯಗಳಲ್ಲಿ ಮುಂಬೈ 11 ಬಾರಿ ಕೆಕೆಆರ್ ಅನ್ನು ಸೋಲಿಸಿದೆ. ಇದು ಕೂಡ ಒಂದು ಮೈದಾನದಲ್ಲಿ ಎದುರಾಳಿ ವಿರುದ್ಧ ತಂಡವೊಂದು ಸಾಧಿಸಿದ ಅತಿ ದೊಡ್ಡ ದಾಖಲೆಯಾಗಿದೆ.
ಮುಂಬೈ ಪಾಲಿಗೆ ದಾಖಲೆಯ ಚೇಸಿಂಗ್
ಈ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿ ಜಯದ ನಗೆ ಬೀರಿದೆ. ಇದು ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಅತಿ ದೊಡ್ಡ ಮೊತ್ತವಾಗಿದೆ. ಅಲ್ಲದೆ, ಐಪಿಎಲ್‌ನಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಮುಂಬೈ ತಂಡ ಆರನೇ ಬಾರಿಗೆ ಚೇಸಿಂಗ್ ಮಾಡಿದ್ದು, ಈ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ (8 ಬಾರಿ) ನಂತರದ ಸ್ಥಾನದಲ್ಲಿದೆ.
14 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ
ಮುಂಬೈ ಇಂಡಿಯನ್ಸ್ ತಂಡವು ಸಾಮಾನ್ಯವಾಗಿ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಸೋಲುವ ಸಂಪ್ರದಾಯವನ್ನು ಹೊಂದಿತ್ತು. ಆದರೆ, 2012ರ ನಂತರ ಮೊದಲ ಬಾರಿಗೆ ಮುಂಬೈ ತನ್ನ ಸೀಸನ್‌ನ ಮೊದಲ ಪಂದ್ಯದಲ್ಲೇ ಜಯ ದಾಖಲಿಸಿದೆ. ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ತಂಡವು ಅದ್ಭುತ ಆರಂಭ ಕಂಡಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 4 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ,(ಏಜೆನ್ಸೀಸ್).