IPL-2026: ಹಿಸ್ಟರಿ ರಿಪೀಟ್​, ಆರ್​ಸಿಬಿ ಟಾರ್ಗೆಟ್​; ಈ ಸಲ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ! 
ಕ್ರಿಕೆಟ್

IPL-2026: ಹಿಸ್ಟರಿ ರಿಪೀಟ್​, ಆರ್​ಸಿಬಿ ಟಾರ್ಗೆಟ್​; ಈ ಸಲ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ!

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಪಾಲಿಗೆ ಈ ಸಲದ ಐಪಿಎಲ್​ (IPL) ಟೂರ್ನಿ ಅತ್ಯಂತ ವಿಶೇಷವಾದುದು. ಯಾಕೆಂದರೆ ಈ ಬಾರಿ "ಹಾಲಿ ಚಾಂಪಿಯನ್​' ಪಟ್ಟದೊಂದಿಗೆ ಆರ್​ಸಿಬಿ ತಂಡ ಅಭಿಯಾನ ಆರಂಭಿಸಲಿದೆ. ಸತತ 18 ವರ್ಷಗಳ ಪಟ್ಟು ಬಿಡದ ಹೋರಾಟದೊಂದಿಗೆ ಕೊನೆಗೂ ಕಪ್​ ಕನಸು ನನಸಾಗಿಸಿ ದೊಡ್ಡ ಭಾರವೊಂದನ್ನು ಇಳಿಸಿಕೊಂಡಿರುವ ಆರ್​ಸಿಬಿ ತಂಡ ಈ ಬಾರಿ ಟ್ರೋಫಿ ಉಳಿಸಿಕೊಳ್ಳುವ ಹೊಸ ಸವಾಲಿನೊಂದಿಗೆ  ಕಣಕ್ಕಿಳಿಯಲಿದೆ. "ಈ ಸಲ ಕಪ್​ ನಮ್ದೇ' (E sala cup namde) ಎಂಬ ಅಭಿಮಾನಿಗಳ ಘೋಷವಾಕ್ಯ ಈ ಬಾರಿ "ಈ ಸಲ ಕೂಡ ಕಪ್​ ನಮ್ದೇ' ಎಂದು ಬದಲಾಗಲಿದೆ.

ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿದ ಬಳಿಕ  ಬಳಿಕ ಇದು ಮೊದಲ ಟೂರ್ನಿಯಾಗಿದ್ದು, ಇನ್ನಷ್ಟು ಉತ್ಸಾಹದೊಂದಿಗೆ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ರಜತ್​ ಪಾಟೀದಾರ್​ ನಾಯಕತ್ವದ ಮೊದಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಕೊಟ್ಟಿದ್ದು, ಈ ಬಾರಿ ಹೆಚ್ಚಿನ ಅನುಭವದ ಬಲ ಹೊಂದಿದ್ದಾರೆ. ಆರ್​ಸಿಬಿ ಕಳೆದ ಆವೃತ್ತಿಯ ಬಹುತೇಕ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಸೇರ್ಪಡೆಯಾಗಿರುವ ಕೆಲ ಆಟಗಾರರು ತಂಡಕ್ಕೆ ಇನ್ನಷ್ಟು ಬಲ ತುಂಬುವ ನಿರೀಕ್ಷೆ ಇದೆ. ಕರ್ನಾಟಕ ತಂಡದ ನಾಯಕ ದೇವದತ್​ ಪಡಿಕ್ಕಲ್​ ಈ ಬಾರಿ ಆರ್​ಸಿಬಿ ತಂಡದಲ್ಲಿರುವ ಏಕೈಕ ಕನ್ನಡಿಗರಾಗಿದ್ದಾರೆ.

ಶನಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಉದ್ಘಾಟನಾ ಪಂದ್ಯದೊಂದಿಗೆ 19ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲಿರುವ ಆರ್​ಸಿಬಿ, ಶುಭಾರಂಭ ಕಾಣುವ ತವಕದಲ್ಲಿದೆ. ಕಳೆದ ವರ್ಷದ ಮೇ 3ರ ನಂತರ ಆರ್​ಸಿಬಿ ತಂಡ ತನ್ನ ತವರಿನಲ್ಲಿ ಮೊದಲ ಪಂದ್ಯ ಆಡಲಿದೆ. ಕಳೆದ ವರ್ಷ ಮೇ 17ಕ್ಕೆ ಇಲ್ಲಿ ನಿಗದಿಯಾಗಿದ್ದ ಕೆಕೆಆರ್​ ವಿರುದ್ಧದ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಕಳೆದ ವರ್ಷದ ವಿಜಯೋತ್ಸವ ಸಂದರ್ಭದ ಕಾಲ್ತುಳಿತ ದುರಂತದ ಕಹಿಯನ್ನು ಮರೆಸುವ ಅವಕಾಶವೂ ಈಗ ಆರ್​ಸಿಬಿ ಮುಂದಿದೆ. ಈಗಾಗಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೂರ್ವಸಿದ್ಧತೆ ನಡೆಸುತ್ತಿರುವ ಆರ್​ಸಿಬಿ ತಂಡ ಈ ಬಾರಿ "ಅನ್​ಬಾಕ್ಸ್​' ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಜತೆ ಸೇರದೆ, ನೇರವಾಗಿ ಉದ್ಘಾಟನಾ ಪಂದ್ಯ ದಲ್ಲೇ "12ಥ್​ ಮ್ಯಾನ್​ ಆರ್ಮಿ' ಎದುರು ಹಾಜರಾಗಲಿದೆ.
ಡಿಯಾಜಿಯೋ ಪರ ಕೊನೇ ಬಾರಿ ಆಟ
ಆರ್​ಸಿಬಿ ತಂಡದ ಹಾಲಿ ಮಾಲೀಕರಾಗಿರುವ ಡಿಯಾಜಿಯೋ ಪರ ಇದು ಕೊನೇ ಆವೃತ್ತಿ ಆಗಿರಲಿದೆ. ಯಾಕೆಂದರೆ ಆರ್​ಸಿಬಿ ತಂಡ ಮಾರಾಟ ಪ್ರಕ್ರಿಯೆ ಈಗಾಗಲೆ ಅಂತಿಮ ಹಂತ ತಲುಪಿದ್ದು, ಮುಂದಿನ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಹೊಸ ಮಾಲೀಕರ ಮೇಲ್ವಿಚಾರಣೆಯಲ್ಲಿ ಕಣಕ್ಕಿಳಿಯಲಿದೆ.
ವೆಂಕಟೇಶ್​ ಅಯ್ಯರ್​ ಬಲ
ಕಳೆದ 5 ವರ್ಷಗಳಿಂದ ಕೆಕೆಆರ್​ ತಂಡದ ಪ್ರಮುಖ ಭಾಗವಾಗಿದ್ದ ಆಲ್ರೌಂಡರ್​ ವೆಂಕಟೇಶ್​ ಅಯ್ಯರ್​ ಈ ಬಾರಿ ಆರ್​ಸಿಬಿ ಪರ ಆಡಲಿದ್ದಾರೆ. ಕಳೆದ ಮಿನಿ ಹರಾಜಿನಲ್ಲಿ ಅವರು 7 ಕೋಟಿ ರೂ.ಗೆ ಆರ್​ಸಿಬಿ ಪಾಲಾಗಿದ್ದರು. ಇವರೊಂದಿಗೆ ಕಿವೀಸ್​ ವೇಗಿ ಜೇಕಬ್​ ಡಫಿ, ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್​-ವಿಕೆಟ್​ ಕೀಪರ್​ ಜೋರ್ಡನ್​ ಕಾಕ್ಸ್​, 19 ವಯೋಮಿತಿ ವಿಶ್ವಕಪ್​ ವಿಜೇತ ಭಾರತ ತಂಡದ ಆಲ್ರೌಂಡರ್​ ವಿಹಾನ್​ ಮಲ್ಹೋತ್ರಾ, ಮಿನಿ ಹರಾಜಿನಲ್ಲಿ 5.2 ಕೋಟಿ ರೂ. ಮೌಲ್ಯ ಪಡೆದ ಮಧ್ಯಪ್ರದೇಶದ ಯುವ ಎಡಗೈ ವೇಗದ ಬೌಲಿಂಗ್​ ಆಲ್ರೌಂಡರ್​ ಮಂಗೇಶ್​ ಯಾದವ್​ ಈ ಸಲದ ಪ್ರಮುಖ ಹೊಸ ಸೇರ್ಪಡೆಯಾಗಿದ್ದಾರೆ. 
ಕೊಹ್ಲಿಗೆ ದಾಖಲೆಗಳ ತವಕ
ಐಪಿಎಲ್​ ಟ್ರೋಫಿ ಕನಸು ನನಸಾಗಿಸಿಕೊಂಡಿರುವ ವಿರಾಟ್​ ಕೊಹ್ಲಿ ಈ ಬಾರಿಯ ಆವೃತ್ತಿಯಲ್ಲಿ ಕೆಲವು ವಿಶೇಷ ಮೈಲಿಗಲ್ಲುಗಳನ್ನು ನೆಡುವ ಅವಕಾಶ ಹೊಂದಿದ್ದಾರೆ. ಆರ್​ಸಿಬಿ ಪರ ಇದುವರೆಗೆ ಆಡಿರುವ 267 ಪಂದ್ಯಗಳಲ್ಲಿ 8,661 ರನ್​ ಗಳಿಸಿರುವ ಕೊಹ್ಲಿ, ಈ ಬಾರಿ 339 ರನ್​ ಗಳಿಸಿದರೆ ಐಪಿಎಲ್​ನಲ್ಲಿ 9 ಸಾವಿರ ರನ್​ ಗಳಿಸಿದ ಮೊದಲ ಬ್ಯಾಟರ್​ ಎನಿಸಲಿದ್ದಾರೆ. ಕೊಹ್ಲಿ ಐಪಿಎಲ್​ನಲ್ಲಿ ಇದುವರೆಗೆ 291 ಸಿಕ್ಸರ್​ ಸಿಡಿಸಿದ್ದು, ಈ ಬಾರಿ 9 ಸಿಕ್ಸರ್​ ಸಿಡಿಸಿದರೆ ಒಂದೇ ಫ್ರಾಂಚೈಸಿ ಪರ (ಆರ್​ಸಿಬಿ) 300 ಸಿಕ್ಸರ್​ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್​ ಎನಿಸಲಿದ್ದಾರೆ. ಆರ್​ಸಿಬಿ, ಟೀಮ್​ ಇಂಡಿಯಾ, ದೆಹಲಿ ಪರ ಭಾರತದಲ್ಲಿ ಇದುವರೆಗೆ 284 ಪಂದ್ಯ ಆಡಿ 9,704 ರನ್​ ಗಳಿಸಿರುವ ಕೊಹ್ಲಿ, ಈ ಬಾರಿ 296 ರನ್​ ಗಳಿಸಿದರೆ ಒಂದೇ ದೇಶದಲ್ಲಿ 10 ಸಾವಿರ ಟಿ20 ರನ್​ ಗಳಿಸಿದ ಮೊದಲ ಸಾಧಕ ಎನಿಸಲಿದ್ದಾರೆ. 
ವಿಶೇಷ ಸಾಧನೆ ಅವಕಾಶ
ಆರ್​ಸಿಬಿ ಈ ಬಾರಿಯೂ ಕಪ್​ ಗೆದ್ದರೆ ಐಪಿಎಲ್​ನಲ್ಲಿ ಸತತ 2 ಬಾರಿ ಚಾಂಪಿಯನ್​ ಪಟ್ಟಕ್ಕೇರಿದ 3ನೇ ತಂಡ ಎನಿಸಲಿದೆ. ಇದುವರೆಗೆ ಚೆನ್ನೈ ಸೂಪರ್​ಕಿಂಗ್ಸ್​ (2010, 2011) ಮತ್ತು ಮುಂಬೈ ಇಂಡಿಯನ್ಸ್​ (2019, 2020) ತಂಡಗಳು ಮಾತ್ರ ಈ ಸಾಧನೆ ಮಾಡಿವೆ. ಇನ್ನು ಆರ್​ಸಿಬಿ ಈ ಸಲವೂ ಗೆದ್ದರೆ ಒಂದಕ್ಕಿಂತ ಹೆಚ್ಚು ಬಾರಿ ಐಪಿಎಲ್​ ಟ್ರೋಫಿ ಗೆದ್ದ 4ನೇ ತಂಡ ಎನಿಸಲಿದೆ. ಸಿಎಸ್​ಕೆ, ಮುಂಬೈ (ತಲಾ 5) ಮತ್ತು ಕೆಕೆಆರ್​ (3) ತಂಡಗಳು ಮಾತ್ರ ಇದುವರೆಗೆ ಈ ಸಾಧನೆ ಮಾಡಿವೆ.
ಯಶ್​ ದಯಾಳ್​ಗೆ ಗೇಟ್​ಪಾಸ್​?
ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ವೇಗಿ ಯಶ್​ ದಯಾಳ್​ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯುವುದು ಅನುಮಾನವೆನಿಸಿದೆ. ಅವರಿನ್ನೂ ತಂಡದ ಶಿಬಿರವನ್ನು ಕೂಡಿಕೊಂಡಿಲ್ಲ. ಜತೆಗೆ ಆರ್​ಸಿಬಿ ತಂಡದ ಬಸ್​ನಲ್ಲೂ ಅವರ ಚಿತ್ರವಿಲ್ಲ. ಆದರೆ ಆರ್​ಸಿಬಿ ತಂಡ ದಯಾಳ್​ರನ್ನು ಕೈಬಿಟ್ಟಿರುವ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಜತೆಗೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುವುದೇ ಎಂಬುದು ಕೂಡ ಸ್ಪಷ್ಟವಾಗಿಲ್ಲ.    
ರಾಯ್ಪುರದಲ್ಲೂ ತವರಿನ ಪಂದ್ಯ
ಚುನಾವಣೆಯ ಸಮಯದ ಭದ್ರತಾ ತಾಪತ್ರಯ ಮತ್ತು ಕರೊನಾ ಕಾಲವನ್ನು ಹೊರತುಪಡಿಸಿ ಆರ್​ಸಿಬಿ ತಂಡ ಇದುವರೆಗೆ ತನ್ನ ತವರಿನ ಎಲ್ಲ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಡುತ್ತ ಬಂದಿತ್ತು. ಆದರೆ ಈ ಬಾರಿ ತನ್ನ 7 ಲೀಗ್​ ಪಂದ್ಯಗಳ ಪೈಕಿ ಎರಡನ್ನು ಛತ್ತೀಸ್​ಗಢದ ರಾಯ್ಪುರದಲ್ಲಿ ಆಡಲಿದೆ. ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿಯ ಪಂದ್ಯಗಳು ಪುಣೆ, ಇಂದೋರ್​ಗೆ ಸ್ಥಳಾಂತರವಾಗುವ ಸಾಧ್ಯತೆ ಸೃಷ್ಟಿಯಾಗಿದ್ದರೂ, ಕೆಎಸ್​ಸಿಎ ಹೊಸ ಆಡಳಿತ ಮಂಡಳಿಯ ಪರಿಶ್ರಮದಿಂದಾಗಿ ರಾಜ್ಯದ ಕ್ರಿಕೆಟ್​ ಪ್ರೇಮಿಗಳಿಗೆ ಆರ್​ಸಿಬಿ ಪಂದ್ಯಗಳನ್ನು ಆನಂದಿಸುವ ಅವಕಾಶ ಲಭಿಸಿದೆ.
ಗೋಲ್ಡನ್​ ಬ್ಯಾಡ್ಜ್​, ಸ್ಟಾರ್​!
ಎಂದಿನಂತೆ ಆರ್​ಸಿಬಿ ತಂಡ ಹೊಸ ಆವೃತ್ತಿಯಲ್ಲಿ ಜೆರ್ಸಿ ವಿನ್ಯಾಸದಲ್ಲಿ ಅಲ್ಪ ಬದಲಾವಣೆ ಮತ್ತು ಹೊಸ ಪ್ರಾಯೋಜಕತ್ವದೊಂದಿಗೆ (ನಥಿಂಗ್​) ಕಣಕ್ಕಿಳಿಯಲಿದೆ. ಇದರೊಂದಿಗೆ ಇನ್ನೂ 2 ಪ್ರಮುಖ ಬದಲಾವಣೆಗಳು ಆರ್​ಸಿಬಿ ಜೆರ್ಸಿಯಲ್ಲಿ ಆಗಿವೆ. ಆರ್​ಸಿಬಿ ತಂಡ ಈ ಬಾರಿ ಹಾಲಿ ಚಾಂಪಿಯನ್​ ತಂಡವಾಗಿ ಕಣಕ್ಕಿಳಿಯಲಿದೆ. ಹೀಗಾಗಿ ಬಿಸಿಸಿಐ ನಿಯಮಾವಳಿ ಪ್ರಕಾರ, ಆರ್​ಸಿಬಿ ತಂಡ ಈ ಬಾರಿ, ತೋಳಿನಲ್ಲಿ "ಗೋಲ್ಡನ್​ ಬ್ಯಾಡ್ಜ್​' ಲಾಂಛನ ಹೊಂದಿರುವ ವಿಶೇಷ ಜೆರ್ಸಿ ಧರಿಸಿ ಆಡಲಿದೆ. ಕಳೆದ ವರ್ಷದ ಹಾಲಿ ಚಾಂಪಿಯನ್​ ಕೆಕೆಆರ್​ ತಂಡ ಮೊದಲ ಬಾರಿ ಈ ರೀತಿಯ ಜೆರ್ಸಿ ಧರಿಸಿತ್ತು. ಇದಲ್ಲದೆ ಆರ್​ಸಿಬಿ ಮೊದಲ ಐಪಿಎಲ್​ ಟ್ರೋಫಿ ಗೆದ್ದಿರುವ ಪ್ರತಿಕವಾಗಿ ಈ ಬಾರಿ ಜೆರ್ಸಿಯ ಎದೆಭಾಗದಲ್ಲಿನ ತಂಡದ ಲಾಂಛನದ ಮೇಲೆ ಒಂದು ಸ್ಟಾರ್​ ಕೂಡ ಮುದ್ರಿಸಲಾಗಿದೆ.  
ಐಪಿಎಲ್​ ಸಾಧನೆ
ಚಾಂಪಿಯನ್​: 2025
ರನ್ನರ್​ಅಪ್​: 2009, 2011, 2016
3ನೇ ಸ್ಥಾನ: 2010, 2015, 2022
4ನೇ ಸ್ಥಾನ: 2020, 2021, 2024
5ನೇ ಸ್ಥಾನ: 2012, 2013
6ನೇ ಸ್ಥಾನ: 2018, 2023
7ನೇ ಸ್ಥಾನ: 2008, 2014
8ನೇ ಸ್ಥಾನ: 2017, 2019
ಐಪಿಎಲ್​ ನಿರ್ವಹಣೆ
ಪಂದ್ಯ: 271
ಜಯ: 134
ಸೋಲು: 133
ರದ್ದು: 4
ತಂಡ: 
ಪ್ಲೇಯಿಂಗ್​ 11: ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ದೇವದತ್​ ಪಡಿಕ್ಕಲ್​/ವೆಂಕಟೇಶ್​ ಅಯ್ಯರ್​/ಜೇಕಬ್​ ಬೆಥೆಲ್​, ರಜತ್​ ಪಾಟೀದಾರ್​ (ನಾಯಕ), ಟಿಮ್​ ಡೇವಿಡ್​/ರೊಮಾರಿಯೊ ಶೆರ್ಡ್​, ಜಿತೇಶ್​ ಶರ್ಮ (ವಿ.ಕೀ), ಕೃನಾಲ್​ ಪಾಂಡ್ಯ, ಭುವನೇಶ್ವರ್​, ರಸಿಕ್​ ಸಲಾಂ ದಾರ್​, ಜೋಶ್​ ಹ್ಯಾಸಲ್​ವುಡ್​/ಜೇಕಬ್​ ಡಫಿ, ಸುಯಶ್​ ಶರ್ಮ/ಸ್ವಪ್ನಿಲ್​ ಸಿಂಗ್​.
ಇಂಪ್ಯಾಕ್ಟ್​ ಪ್ಲೇಯರ್ಸ್​: ವೆಂಕಟೇಶ್​ ಅಯ್ಯರ್​, ಮಂಗೇಶ್​ ಯಾದವ್​.
ಮೀಸಲು: ವಿಹಾನ್​ ಮಲ್ಹೋತ್ರಾ, ನುವಾನ್​ ತುಷಾರ, ಜೋರ್ಡನ್​ ಕಾಕ್ಸ್​, ಕನಿಷ್ಕ್​ ಚೌಹಾಣ್​, ವಿಕಿ ಒಸ್ತ್​ವಾಲ್​, ಸತ್ವಿಕ್​ ದೇಸ್ವಾಲ್​, ಅಭಿನಂದನ್​ ಸಿಂಗ್​, ಯಶ್​ ದಯಾಳ್​.
ಆರಂಭಿಕ 4 ಪಂದ್ಯಗಳು
ದಿನಾಂಕ ಎದುರಾಳಿ ಸ್ಥಳ
ಮಾ.28 ಸನ್​ರೈಸರ್ಸ್​ ಬೆಂಗಳೂರು
ಏ. 5 ಸಿಎಸ್​ಕೆ ಬೆಂಗಳೂರು
ಏ.10 ರಾಜಸ್ಥಾನ ಗುವಾಹಟಿ
ಏ.12 ಮುಂಬೈ ಮುಂಬೈ
*ಎಲ್ಲ ಪಂದ್ಯ ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​