IPL-2026: ಫೈನಲ್ನಲ್ಲಿ ಆರ್ಸಿಬಿ ಅಥವಾ ಗುಜರಾತ್ ಗೆದ್ದರೆ ಬರೆಯುವ ದಾಖಲೆಗಳು ಹೀಗಿವೆ...
ಅಹಮದಾಬಾದ್: ಭಾನುವಾರ ನಡೆಯಲಿರುವ ಆರ್ಸಿಬಿ-ಗುಜರಾತ್ ತಂಡಗಳ ನಡುವಿನ ಐಪಿಎಲ್ (IPL) 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ, 2ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಲದೆ ಐಪಿಎಲ್ನಲ್ಲಿ ಒಂದಕ್ಕಿಂತ ಹೆಚ್ಚು ಟ್ರೋಫಿ ಗೆದ್ದ 4ನೇ ತಂಡವೆನಿಸಲಿದೆ. ಸಿಎಸ್ಕೆ, ಮುಂಬೈ (ತಲಾ 5), ಕೆಕೆಆರ್ (3) ಹಿಂದಿನ ತಂಡಗಳಾಗಿವೆ.
ಸತತ 2ನೇ ಕಪ್ ದಾಖಲೆ ಚಾನ್ಸ್
ಆರ್ಸಿಬಿ (RCB) ಗೆದ್ದರೆ ಐಪಿಎಲ್ನಲ್ಲಿ ಸತತ 2 ಬಾರಿ ಕಪ್ ಗೆದ್ದ 3ನೇ ತಂಡವೆನಿಸಲಿದೆ. ಈ ಹಿಂದೆ ಸಿಎಸ್ಕೆ (2010, 2011) ಮತ್ತು ಮುಂಬೈ ಇಂಡಿಯನ್ಸ್ (2019, 2020) ತಂಡಗಳಷ್ಟೇ ಈ ಸಾಧನೆ ಮಾಡಿವೆ. ಜತೆಗೆ ರಜತ್ ಪಾಟೀದಾರ್ ಅವರು ಎಂಎಸ್ ಧೋನಿ, ರೋಹಿತ್ ಶರ್ಮ ಬಳಿಕ ಸತತ 2 ಐಪಿಎಲ್ ಟ್ರೋಫಿ ಗೆದ್ದ 3ನೇ ನಾಯಕ ಎನಿಸಲಿದ್ದಾರೆ.
20: ಐಪಿಎಲ್-19ರ ಚಾಂಪಿಯನ್ ತಂಡ 20 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್ಅಪ್ ತಂಡ 12.5 ಕೋಟಿ ರೂ. ಗಳಿಸಲಿದೆ.
*5: ಆರ್ಸಿಬಿ ಮತ್ತು ವಿರಾಟ್ ಕೊಹ್ಲಿಗೆ ಇದು 5ನೇ ಐಪಿಎಲ್ ಫೈನಲ್. 2009, 2011, 2016ರಲ್ಲಿ ರನ್ನರ್ಅಪ್ ಆಗಿದ್ದರೆ, 2025ರಲ್ಲಿ ಚಾಂಪಿಯನ್ ಎನಿಸಿತ್ತು.
3: ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ಗೆ ಪದಾರ್ಪಣೆ ಮಾಡಿದ 5 ವರ್ಷಗಳಲ್ಲೇ 3ನೇ ಫೈನಲ್ ಆಡಲಿದೆ. ಈ ಮುನ್ನ 2022ರ ಪದಾರ್ಪಣೆ ಆವೃತ್ತಿಯಲ್ಲೇ ಚಾಂಪಿಯನ್ ಮತ್ತು 2023ರಲ್ಲಿ ರನ್ನರ್ಅಪ್ ಆಗಿತ್ತು.
*12: ಐಪಿಎಲ್ನಲ್ಲಿ 2011ರಲ್ಲಿ ಪ್ಲೇಆಫ್ ಪದ್ಧತಿ ಶುರುವಾದ ನಂತರದ 15 ಆವೃತ್ತಿಗಳಲ್ಲಿ 12ರಲ್ಲಿ ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡವೇ ಪ್ರಶಸ್ತಿ ಜಯಿಸಿದೆ. 3 ಬಾರಿ ಮಾತ್ರ (2013, 2016, 2017) ಕ್ವಾಲಿಫೈಯರ್-2ರಲ್ಲಿ ಗೆದ್ದ ತಂಡ ಪ್ರಶಸ್ತಿ ಒಲಿಸಿಕೊಂಡಿದೆ. ಅದಲ್ಲೂ ಕೊನೇ 8 ಆವೃತ್ತಿಗಳಲ್ಲಿ ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡವೇ ಚಾಂಪಿಯನ್ ಆಗಿದೆ.