IPL-2026: ಇಂದು ಆರ್​ಸಿಬಿ-ಗುಜರಾತ್​ ಟೈಟಾನ್ಸ್​ ಫೈನಲ್​; ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್​! 
ಕ್ರಿಕೆಟ್

IPL-2026: ಇಂದು ಆರ್​ಸಿಬಿ-ಗುಜರಾತ್​ ಟೈಟಾನ್ಸ್​ ಫೈನಲ್​; ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್​!

ಅಹಮದಾಬಾದ್​: ವಿಶ್ವದ ಶ್ರೀಮಂತ ಟಿ20 ಲೀಗ್​ ಐಪಿಎಲ್​ನಲ್ಲಿ (IPL) ಮೊದಲ ಕಪ್​ ಗೆಲ್ಲಲು ಬರೋಬ್ಬರಿ 18 ವರ್ಷಗಳ ಕಾಲ ಕಾದಿದ್ದ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಇದೀಗ ಒಂದೇ ವರ್ಷದ ಅಂತರದಲ್ಲಿ ಎರಡನೇ ಚಾಂಪಿಯನ್​ ಪಟ್ಟಕ್ಕೇರುವ ಹೊಸ್ತಿಲಲ್ಲಿ ಬಂದು ನಿಂತಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಐಪಿಎಲ್​ 19ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ತಂಡ ಗುಜರಾತ್​ ಟೈಟಾನ್ಸ್​ ಎದುರು ಸೆಣಸಾಡಲಿದೆ. ಈ ಕಾದಾಟದಲ್ಲಿ ಯಾರೇ ಗೆದ್ದರೂ 2ನೇ ಬಾರಿ ಐಪಿಎಲ್​ ಕಿರೀಟ ಒಲಿಸಿಕೊಳ್ಳಲಿದ್ದಾರೆ. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಮತ್ತು ಟೂರ್ನಿಯುದ್ದಕ್ಕೂ ಸ್ಥಿರ ನಿರ್ವಹಣೆ ತೋರುತ್ತ ಬಂದಿರುವ ರಜತ್​ ಪಾಟೀದಾರ್​ ಪಡೆ ಈ ಪಂದ್ಯದಲ್ಲಿ ಫೇವರಿಟ್​ ತಂಡವಾಗಿ ಕಣಕ್ಕಿಳಿಯಲಿದ್ದು, ಸತತ 2ನೇ ಬಾರಿ ಕಪ್​ ಗೆದ್ದು ಹೊಸ ಇತಿಹಾಸ ನಿರ್ಮಿಸುವ ಹಂಬಲದಲ್ಲಿದೆ. "ಈ ಸಲ ಕಪ್​ ನಮ್ದೇ' ಎಂಬ ಅಭಿಮಾನಿಗಳ ಆಸೆಯನ್ನು ಕೊನೆಗೂ ಕಳೆದ ವರ್ಷ ಈಡೇರಿಸಿದ್ದ ಆರ್​ಸಿಬಿ, "ಈ ಸಲ ಕೂಡ ಕಪ್​ ನಮ್ದೇ' ಎಂಬ ಈ ಬಾರಿಯ ಪರಿಷ್ಕೃತ ಘೋಷವಾಕ್ಯವನ್ನೂ ನನಸಾಗಿಸಲು ಸರ್ವಸನ್ನದ್ಧವಾಗಿದೆ. ಮತ್ತೊಂದೆಡೆ ಭಾರತ ಟೆಸ್ಟ್​-ಏಕದಿನ ತಂಡದ ಸಾರಥಿ ಶುಭಮಾನ್​ ಗಿಲ್​, "ಐಪಿಎಲ್​ ಟ್ರೋಫಿ' ಗೆದ್ದ ನಾಯಕರ ಪಟ್ಟಿಗೆ ಸೇರುವ ತವಕದಲ್ಲಿದ್ದಾರೆ.
ಹಾಲಿ ಆವೃತ್ತಿಯಲ್ಲಿ ಉಭಯ ಫೈನಲಿಸ್ಟ್​ಗಳ ಹಾದಿ ಬಹುತೇಕ ಭಿನ್ನ ರೀತಿಯಲ್ಲಿ ಸಾಗಿ ಬಂದಿದೆ. ರಜತ್​ ಪಾಟೀದಾರ್​ ಪಡೆ ಆರಂಭದಿಂದಲೇ ಬಲಿಷ್ಠ ನಿರ್ವಹಣೆ ತೋರುತ್ತ ಮೊದಲ ತಂಡವಾಗಿ ಪ್ಲೇಆಫ್​ ಹಂತಕ್ಕೇರಿತ್ತು ಮತ್ತು ಲೀಗ್​ ಹಂತದ ಅಂಕಪಟ್ಟಿಯಲ್ಲೂ ಅಗ್ರಸ್ಥಾನ ಅಲಂಕರಿಸಿತ್ತು. ಬಹುತೇಕ ಎಲ್ಲ ವಿಭಾಗಗಳಲ್ಲೂ ಆರ್​ಸಿಬಿ ಹೆಚ್ಚಿನ ಲೋಪದೋಷಗಳಿಲ್ಲದೆ ಪ್ರಾಬಲ್ಯ ಮೆರೆದಿದೆ. ಅತ್ತ ಗುಜರಾತ್​ ತಂಡ ಟೂರ್ನಿಯ ಆರಂಭಿಕ 2 ಪಂದ್ಯ ಸೋತು ಆಘಾತಕಾರಿ ಆರಂಭವನ್ನೇ ಕಂಡಿತ್ತು. ಆದರೆ ಬಳಿಕ ಸತತ 3 ಜಯದೊಂದಿಗೆ ಲಯಕ್ಕೆ ಮರಳಿತ್ತು. ಅದರಲ್ಲೂ ಆಲ್ರೌಂಡರ್​ ಜೇಸನ್​ ಹೋಲ್ಡರ್​ ಸೇರ್ಪಡೆಯ ಬಳಿಕ ಹೆಚ್ಚಿನ ಸಮತೋಲನ ಕಂಡಿದ್ದ ಶುಭಮಾನ್​ ಗಿಲ್​ ಪಡೆ, ಸತತ 5 ಜಯದೊಂದಿಗೆ ಪ್ಲೇಆಫ್​ ರೇಸ್​ನಲ್ಲಿ ಮುಂಚೂಣಿಗೆ ಬಂದಿತ್ತು. ಕೊನೇ ಲೀಗ್​ ಪಂದ್ಯದಲ್ಲಿ ಸಿಎಸ್​ಕೆ ಎದುರು ಬೃಹತ್​ ಜಯದೊಂದಿಗೆ ಅಗ್ರ 2ರೊಳಗೂ ಸ್ಥಾನ ಭದ್ರಪಡಿಸಿಕೊಂಡಿತ್ತು. ಬಳಿಕ ಮೊದಲ ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ ಎದುರು ಸೋತರೂ, 2ನೇ ಕ್ವಾಲಿಫೈಯರ್​ನಲ್ಲಿ ರಾಜಸ್ಥಾನದ ಯುವ ಬ್ಯಾಟಿಂಗ್​ ಸೆನ್ಸೇಶನ್​ ವೈಭವ್​ ಸೂರ್ಯವಂಶಿ ಪ್ರತಿರೋಧದ ನಡುವೆಯೂ ಗೆದ್ದು ಫೈನಲ್​ ಟಿಕೆಟ್​ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಟೀಮ್​ ಇಂಡಿಯಾದ "ಕಿಂಗ್​' ವಿರಾಟ್​ ಕೊಹ್ಲಿ ಮತ್ತು "ಪ್ರಿನ್ಸ್​' ಶುಭಮಾನ್​ ಗಿಲ್​ ಪೈಕಿ ಭಾನುವಾರ ಒಬ್ಬರಿಗೆ ಮಾತ್ರ ಟ್ರೋಫಿಯೊಂದಿಗೆ ಸಂಭ್ರಮಿಸುವ ಅವಕಾಶವಿದೆ.
ಸಾಲ್ಟ್​, ಸಿರಾಜ್​ ಫಿಟ್ನೆಸ್​ ಕಳವಳ
ಕೈಬೆರಳು ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಫಿಲ್​ ಸಾಲ್ಟ್​ ಈಗಾಗಲೆ ಆರ್​ಸಿಬಿ ತಂಡವನ್ನು ಮರಳಿ ಕೂಡಿಕೊಂಡಿದ್ದರೂ, ಮೊದಲ ಕ್ವಾಲಿಫೈಯರ್​ನಲ್ಲಿ ಆಡಿರಲಿಲ್ಲ. ಫೈನಲ್​ನಲ್ಲಿ ಅವರು ಆಡುವ ಬಗ್ಗೆಯೂ ಸ್ಪಷ್ಟತೆ ಇಲ್ಲ. ಅತ್ತ ಗುಜರಾತ್​ ವೇಗಿ ಮೊಹಮದ್​ ಸಿರಾಜ್​ ಕೂಡ ಫಿಟ್ನೆಸ್​ ಕಳವಳ ಹೊಂದಿದ್ದಾರೆ. 2ನೇ ಕ್ವಾಲಿಫೈಯರ್​ ವೇಳೆ ಅವರು ಭುಜ ನೋವಿನ ನಡುವೆ 4 ಓವರ್​ಗಳ ಕೋಟಾ ಮುಗಿಸಿದರೂ, ಬೇಗನೆ ಮೈದಾನ ತೊರೆದಿದ್ದರು.
ಆರ್​ಸಿಬಿ-ಬೆಂಗಳೂರು
ಟಾಪ್​ ಬ್ಯಾಟರ್ಸ್​: ವಿರಾಟ್​ ಕೊಹ್ಲಿ (600), ರಜತ್​ ಪಾಟೀದಾರ್​ (486), ದೇವದತ್​ ಪಡಿಕ್ಕಲ್​ (463).
ಟಾಪ್​ ಬೌಲರ್ಸ್​: ಭುವನೇಶ್ವರ್​ (26), ರಸಿಕ್​ ದಾರ್​ (16), ಜೋಶ್​ ಹ್ಯಾಸಲ್​ವುಡ್​ (13).
ಬಲ: 
*ಎಲ್ಲ ವಿಭಾಗಗಳಲ್ಲೂ ಬಲಿಷ್ಠ.
*ಕೊಹ್ಲಿ, ಪಾಟೀದಾರ್​ ಬ್ಯಾಟಿಂಗ್​.
*ಭುವನೇಶ್ವರ್​ ಭರ್ಜರಿ ಫಾರ್ಮ್​
ದೌರ್ಬಲ್ಯ: 
*ಟಿಮ್​ ಡೇವಿಡ್​, ಜಿತೇಶ್​ ರನ್​ಬರ.
*ಫಿಲ್​ ಸಾಲ್ಟ್​ ಫಿಟ್ನೆಸ್​ ಕಳವಳ.
*ರೊಮಾರಿಯೊ ಶೆಫರ್ಡ್​ ದುಬಾರಿ.
ಟೂರ್ನಿ ನಿರ್ವಹಣೆ: ಪಂದ್ಯ: 15, ಜಯ: 10, ಸೋಲು: 5.
*ಗುಜರಾತ್​ ಟೈಟಾನ್ಸ್​
ಟಾಪ್​ ಬ್ಯಾಟರ್ಸ್​: ಶುಭಮಾನ್​ ಗಿಲ್​ (722), ಸಾಯಿ ಸುದರ್ಶನ್​ (507), ಜೋಸ್​ ಬಟ್ಲರ್​ (507).
ಟಾಪ್​ ಬೌಲರ್ಸ್​: ಕಗಿಸೊ ರಬಾಡ (28), ರಶೀದ್​ ಖಾನ್​ (19), ಮೊಹಮದ್​ ಸಿರಾಜ್​ (18).
ಬಲ: 
*ಗಿಲ್​-ಸುದರ್ಶನ್​ ಜತೆಯಾಟ.
*ರಬಾಡ, ಹೋಲ್ಡರ್​ ಬಿಗಿ ಬೌಲಿಂಗ್​.
*ತವರು ಅಂಗಣದಲ್ಲೇ ಫೈನಲ್​.
ದೌರ್ಬಲ್ಯ: 
*ಅಗ್ರ ಕ್ರಮಾಂಕದ ಅವಲಂಬನೆ.
*ಮಧ್ಯಮ ಕ್ರಮಾಂಕ ಅಸ್ಥಿರ.
*ಎರಡನೇ ಸ್ಪಿನ್ನರ್​ ವೈಫಲ್ಯ.
ಟೂರ್ನಿ ನಿರ್ವಹಣೆ: ಪಂದ್ಯ: 16, ಜಯ: 10, ಸೋಲು: 6.
ಮುಖಾಮುಖಿ: 9
ಆರ್​ಸಿಬಿ: 5
ಗುಜರಾತ್​: 4
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.