IPL-2026: ಆರ್​ಸಿಬಿ-ಗುಜರಾತ್​ ನಡುವಿನ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನಾಗಲಿದೆ ಗೊತ್ತೇ? 
ಕ್ರಿಕೆಟ್

IPL-2026: ಆರ್​ಸಿಬಿ-ಗುಜರಾತ್​ ನಡುವಿನ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನಾಗಲಿದೆ ಗೊತ್ತೇ?

ಅಹಮದಾಬಾದ್: ಐಪಿಎಲ್ (IPL)​ 19ನೇ ಆವೃತ್ತಿಯ ಫೈನಲ್​ ಪಂದ್ಯಕ್ಕೆ ಅಹಮದಾಬಾದ್​ನಲ್ಲಿ ಮಳೆ ಅಡಚಣೆಯ ಭೀತಿ ಇಲ್ಲ. ಆದರೆ ಒಂದು ವೇಳೆ ಮಳೆ ಅಡ್ಡಿಪಡಿಸಿದರೆ, ಭಾನುವಾರವೇ ಫೈನಲ್​ ಪೂರ್ಣಗೊಳಿಸಲು ಎರಡು ಗಂಟೆ ಹೆಚ್ಚುವರಿ ಅವಧಿ ಕಾಯಲಾಗುವುದು. ಈ ವೇಳೆ ಕನಿಷ್ಠ 5 ಓವರ್​ಗಳ ಪಂದ್ಯ ಅಥವಾ ಸೂಪರ್​ ಓವರ್​ ಆಡಿಸಲು ಪ್ರಯತ್ನಿಸಲಾಗುವುದು. ಇದು ಸಾಧ್ಯವಾಗದಿದ್ದರೆ, ಮೀಸಲು ದಿನವಾದ ಸೋಮವಾರಕ್ಕೆ (ಜೂನ್​ 1) ಫೈನಲ್​ ಪಂದ್ಯ ಮುಂದೂಡಲ್ಪಡಲಿದೆ. ಮೀಸಲು ದಿನವೂ ಮಳೆ ಅಡಚಣೆಯಿಂದ ಫಲಿತಾಂಶ ಬಾರದಿದ್ದರೆ, ಲೀಗ್​ ಹಂತದ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದ ತಂಡಕ್ಕೆ ಅಂದರೆ ಈ ಬಾರಿ ಅಗ್ರಸ್ಥಾನ ಅಲಂಕರಿಸಿದ್ದ ಆರ್​ಸಿಬಿಗೆ (RCB) ಟ್ರೋಫಿ ವಿತರಿಸಲಾಗುವುದು.
ಪಿಚ್​ ರಿಪೋರ್ಟ್​ 
ಕಳೆದ ವರ್ಷದ ಫೈನಲ್​ ನಡೆದ ಪಿಚ್​ನಲ್ಲೇ ಈ ಸಲದ ಪ್ರಶಸ್ತಿ ಕಾದಾಟವೂ ನಡೆಯಲಿದೆ. ಲೀಗ್​ ಹಂತದಲ್ಲೂ 2 ಬಾರಿ ಈ ಪಿಚ್​ ಬಳಕೆಯಾಗಿದೆ. ಈ ಪೈಕಿ ಆರ್​ಸಿಬಿ-ಗುಜರಾತ್​ ನಡುವಿನ ಲೀಗ್​ ಪಂದ್ಯವೂ ಸೇರಿದೆ. ನಮೋ ಸ್ಟೇಡಿಯಂ ಪಿಚ್​ ಸಾಮಾನ್ಯವಾಗಿ ಚೇಸಿಂಗ್​ ತಂಡಕ್ಕೆ ಸಹಕಾರಿ ಎನಿಸಿದೆ. ಇಲ್ಲಿ ನಡೆದ 6 ಫೈನಲ್​ಗಳಲ್ಲಿ 4ರಲ್ಲಿ ಚೇಸಿಂಗ್​ ಮಾಡಿದ ತಂಡವೇ ಜಯಿಸಿದೆ. 
ಈ ಸಲ ಒಬ್ಬ ಕನ್ನಡಿಗನಿಗೆ ಕಪ್​!
ಈ ಸಲ ಐಪಿಎಲ್​ನಲ್ಲಿ ಒಟ್ಟ 12 ಕನ್ನಡಿಗರು ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಈ ಪೈಕಿ ಓರ್ವ ಅದೃಷ್ಟಶಾಲಿ ಕನ್ನಡಿಗನಿಗೆ ಮಾತ್ರ ಈ ಬಾರಿ ಐಪಿಎಲ್​ ಟ್ರೋಫಿಗೆ ಮುತ್ತಿಡುವ ಅವಕಾಶ ಲಭಿಸಲಿದೆ. ಯಾಕೆಂದರೆ ಫೈನಲ್​ನಲ್ಲಿ ಆಡಲಿರುವ ಆರ್​ಸಿಬಿ-ಗುಜರಾತ್​ ತಂಡಗಳು ಕರ್ನಾಟಕದ ತಲಾ ಓರ್ವ ಆಟಗಾರನನ್ನು ಮಾತ್ರ ಹೊಂದಿವೆ. ಎಡಗೈ ಬ್ಯಾಟರ್​ ಹಾಗೂ ರಾಜ್ಯ ತಂಡದ ನಾಯಕ ದೇವದತ್​ ಪಡಿಕ್ಕಲ್​ ಆರ್​ಸಿಬಿ ತಂಡದಲ್ಲಿ ಮತ್ತು ವೇಗಿ ಪ್ರಸಿದ್ಧಕೃಷ್ಣ ಗುಜರಾತ್​ ತಂಡದಲ್ಲಿರುವ ಕನ್ನಡಿಗರಾಗಿದ್ದಾರೆ.