IPL-2026: ಫೈನಲ್ ವೇಳೆ ಆರೆಂಜ್, ಪರ್ಪಲ್ ಕ್ಯಾಪ್ ವಿಜೇತರ ಕುತೂಹಲ
ಅಹಮದಾಬಾದ್: ಈ ಬಾರಿ ಟೂರ್ನಿಯ ಗರಿಷ್ಠ ರನ್ ಮತ್ತು ವಿಕೆಟ್ ಸಾಧಕರಿಗೆ ನೀಡಲಾಗುವ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಯಾರಿಗೆ ಒಲಿಯಲಿದೆ ಎಂಬುದು ಐಪಿಎಲ್ (IPL) ಫೈನಲ್ ಪಂದ್ಯದವರೆಗೂ ಕುತೂಹಲ ಉಳಿಸಿಕೊಂಡಿದೆ.
ಸದ್ಯ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ (776) ಬಳಿ ಆರೆಂಜ್ ಕ್ಯಾಪ್ ಇದೆ. ಆದರೆ ಫೈನಲ್ನಲ್ಲಿ ಆಡಲಿರುವ ಗುಜರಾತ್ ತಂಡದ ಶುಭಮಾನ್ ಗಿಲ್ (722) ಮತ್ತು ಸಾಯಿ ಸುದರ್ಶನ್ (710) ಇದನ್ನು ಕಿತ್ತುಕೊಳ್ಳುವ ಅವಕಾಶ ಹೊಂದಿದ್ದಾರೆ. ಫೈನಲ್ನಲ್ಲಿ ಗಿಲ್ 55 ಮತ್ತು ಸುದರ್ಶನ್ 67 ರನ್ ಗಳಿಸಿದರೆ ವೈಭವ್ರನ್ನು ಹಿಂದಿಕ್ಕಲಿದ್ದಾರೆ. ಅಲ್ಲದೆ ಗಿಲ್-ಸುದರ್ಶನ್ ನಡುವೆಯೇ ಫೈನಲ್ನಲ್ಲಿ ಆರೆಂಜ್ ಕ್ಯಾಪ್ಗೆ ಪೈಪೋಟಿ ಏರ್ಪಡಬಹುದು.
ಆರ್ಸಿಬಿ ತಂಡದ ಗರಿಷ್ಠ ರನ್ ಸ್ಕೋರರ್ ವಿರಾಟ್ ಕೊಹ್ಲಿ (600) ವೈಭವ್ಗಿಂತ 176 ರನ್ ಹಿಂದಿದ್ದಾರೆ. ಹೀಗಾಗಿ ಅವರಿಗೆ ಆರೆಂಜ್ ಕ್ಯಾಪ್ ಒಲಿಯುವುದು ಕಠಿಣ. ಇನ್ನು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಕಗಿಸೊ ರಬಾಡ (28) ಮತ್ತು ಭುವನೇಶ್ವರ್ ಕುಮಾರ್ (26) ನಡುವೆ ಫೈನಲ್ನಲ್ಲಿ ನಿಕಟ ಪೈಪೋಟಿ ನಡೆಯಲಿದೆ. ರಬಾಡರಿಂದ ಪರ್ಪಪ್ ಕ್ಯಾಪ್ ಕಸಿದುಕೊಳ್ಳಲು ಭುವಿ ಫೈನಲ್ನಲ್ಲಿ ಅವರಿಗಿಂತ 2 ವಿಕೆಟ್ ಅಧಿಕ ಪಡೆಯಬೇಕಾಗಿದೆ. ಆಗ ವಿಕೆಟ್ ಬೇಟೆ ಸಮಬಲವಾದರೂ, ಉತ್ತಮ ಸರಾಸರಿ ಆಧಾರದಲ್ಲಿ ಭುವಿಗೆ ಪರ್ಪಲ್ ಕ್ಯಾಪ್ ಒಲಿಯಲಿದೆ.