- ಧೋನಿಗೆ ಸ್ನಾಯು ಸೆಳೆತದ ಸಮಸ್ಯೆ ಎರಡು ವಾರ ಮೈದಾನಕ್ಕಿಳಿಯಲ್ಲ MSD
- ಧೋನಿ ಅಲಭ್ಯತೆ ಬೆನ್ನಲ್ಲೇ ಸಿಎಸ್‌ಕೆಗೆ ಸಂಕಷ್ಟ
- ವಿಕೆಟ್ ಹಿಂದೆ ನಿಲ್ಲುವ 'ಸಂಜು ಸ್ಯಾಮ್ಸನ್' ಪ್ಲಾನ್ ರೆಡಿ!
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಆಧಾರಸ್ತಂಭ, ದಿಗ್ಗಜ ಕ್ರಿಕೆಟಿಗ ಎಂ.ಎಸ್. ಧೋನಿ ಅವರು ಸ್ನಾಯು ಸೆಳೆತದ (Calf Strain) ಕಾರಣದಿಂದಾಗಿ ಟೂರ್ನಿಯ ಆರಂಭಿಕ ಎರಡು ವಾರಗಳ ಕಾಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಶನಿವಾರ ಮುಂಜಾನೆ ಚೆನ್ನೈ ಸೂಪರ್ ಕಿಂಗ್ಸ್ ಈ ವಿಚಾರವನ್ನು ಅಧಿಕೃತವಾಗಿ ಖಚಿತಪಡಿಸಿದೆ. "ಎಂ.ಎಸ್. ಧೋನಿ ಪ್ರಸ್ತುತ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಅವರು ಐಪಿಎಲ್ 2026ರ ಮೊದಲ ಎರಡು ವಾರಗಳ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಥಲಾ ಶೀಘ್ರವಾಗಿ ಗುಣಮುಖರಾಗಲಿ," ಎಂದು ಸಿಎಸ್‌ಕೆ ತನ್ನ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿದೆ.
ಮೊದಲ ಪಂದ್ಯಕ್ಕೆ ಅಲಭ್ಯ!
ಮಾರ್ಚ್ 30ರ ಸೋಮವಾರದಂದು ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಸಿಎಸ್‌ಕೆಯ ಉದ್ಘಾಟನಾ ಪಂದ್ಯದಲ್ಲಿ ಧೋನಿ ಆಡುವುದಿಲ್ಲ ಎಂಬುದು ಈಗ ಖಚಿತವಾಗಿದೆ. 44 ವರ್ಷದ ಧೋನಿ ಅಲಭ್ಯತೆಯು ತಂಡದ ನಾಯಕತ್ವದ ಸಲಹೆ ಮತ್ತು ಫಿನಿಶಿಂಗ್ ಜವಾಬ್ದಾರಿಯ ಮೇಲೆ ಪರಿಣಾಮ ಬೀರಲಿದೆ.
ವಿಕೆಟ್ ಕೀಪರ್ ಸ್ಥಾನಕ್ಕೆ ಯಾರಿದ್ದಾರೆ?
ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರು ಹೊರಲಿದ್ದಾರೆ ಎಂಬ ಕುತೂಹಲಕ್ಕೆ ಸಿಎಸ್‌ಕೆ ಪಾಳಯದಲ್ಲಿ ಉತ್ತರ ಸಿದ್ಧವಿದೆ. ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ತಂಡದಲ್ಲಿ ಇರುವುದರಿಂದ ವಿಕೆಟ್ ಹಿಂದೆ ಅವರು ಜವಾಬ್ದಾರಿ ನಿಭಾಯಿಸಲಿದ್ದಾರೆ. ಇವರ ಜೊತೆಗೆ ಉರ್ವಿಲ್ ಪಟೇಲ್ ಮತ್ತು ಭಾರಿ ಮೊತ್ತಕ್ಕೆ (14 ಕೋಟಿ ರೂ.) ಹರಾಜಾದ ಕಾರ್ತಿಕ್ ಶರ್ಮಾ ಕೂಡ ತಂಡದಲ್ಲಿದ್ದು, ಇಬ್ಬರಲ್ಲಿ ಒಬ್ಬರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 19ನೇ ಆವೃತ್ತಿಗೆ (IPL) ಇಂದು ಅದ್ಧೂರಿ ಚಾಲನೆ ಸಿಗಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.
ಕಳೆದ ಬಾರಿಯ ಚಾಂಪಿಯನ್ ಆಗಿರುವ ಆರ್‌ಸಿಬಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಂಬಲದಲ್ಲಿದ್ದರೆ, ಇಶಾನ್ ಕಿಶನ್ ನೇತೃತ್ವದ ಹೈದರಾಬಾದ್ ಪಡೆ ಶುಭಾರಂಭದ ನಿರೀಕ್ಷೆಯಲ್ಲಿದೆ,(ಏಜೆನ್ಸೀಸ್).