IPL-2026: ಭುವನೇಶ್ವರ್, ಫಿಲ್ ಸಾಲ್ಟ್, ಸುಯಶ್ಗೆ ಹ್ಯಾಟ್ರಿಕ್ ಫೈನಲ್!
ಅಹಮದಾಬಾದ್: ಆರ್ಸಿಬಿ (RCB) ತಂಡದಲ್ಲಿರುವ ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್ ಮತ್ತು ಸುಯಶ್ ಶರ್ಮಗೆ ಇದು ಐಪಿಎಲ್ನಲ್ಲಿ ಸತತ 3ನೇ ಫೈನಲ್ ಪಂದ್ಯವಾಗಿದೆ. ಅದರಲ್ಲೂ ಆರ್ಸಿಬಿ (RCB) ಗೆದ್ದರೆ ಸಾಲ್ಟ್ ಮತ್ತು ಸುಯಶ್ ಸತತ 3ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದಂತಾಗಲಿದೆ. ಯಾಕೆಂದರೆ ಇವರಿಬ್ಬರು 2024ರಲ್ಲಿ ಐಪಿಎಲ್ ಗೆದ್ದ ಕೆಕೆಆರ್ ತಂಡದಲ್ಲಿದ್ದರು ಮತ್ತು ಕಳೆದ ವರ್ಷವೂ ಆರ್ಸಿಬಿ ಪರ ಕಪ್ ಗೆದ್ದಿದ್ದರು. ಇನ್ನು ಭುವನೇಶ್ವರ್ 2024ರಲ್ಲಿ ರನ್ನರ್ಅಪ್ ಸನ್ರೈಸರ್ಸ್ ತಂಡದಲ್ಲಿದ್ದರೆ, ಕಳೆದ ವರ್ಷದಿಂದ ಆರ್ಸಿಬಿ ಭಾಗವಾಗಿದ್ದಾರೆ.
ಕೃನಾಲ್ಗೆ 5ನೇ ಕಪ್ ನಿರೀಕ್ಷೆ
ಆರ್ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಐಪಿಎಲ್ನಲ್ಲಿ 5 ಟ್ರೋಫಿ ಗೆದ್ದ ಎಂಎಸ್ ಧೋನಿ ಸಾಧನೆ ಸರಿಗಟ್ಟುವ ತವಕದಲ್ಲಿದ್ದಾರೆ. 2017, 2019, 2020ರಲ್ಲಿ ಮುಂಬೈ ಪರ ಟ್ರೋಫಿ ಗೆದ್ದಿದ್ದ ಅವರು, ಕಳೆದ ವರ್ಷ ಆರ್ಸಿಬಿ ಪರ ಈ ಸಾಧನೆ ಮಾಡಿದ್ದರು. ಅಲ್ಲದೆ, ಕೃನಾಲ್ ಪಾಂಡ್ಯ ಈ ಹಿಂದೆ ಆಡಿದ 4 ಫೈನಲ್ನಲ್ಲೂ ಗೆದ್ದ ತಂಡದ ಭಾಗವಾಗಿರುವ ಅಜೇಯ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮ 6 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವುದು ದಾಖಲೆಯಾಗಿದೆ.
5: ಜೋಶ್ ಹ್ಯಾಸಲ್ವುಡ್ ಈ ಹಿಂದೆ ಆಡಿರುವ 5 ಐಪಿಎಲ್ ಟೂರ್ನಿಗಳ ಫೈನಲ್ನಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿದ್ದಾರೆ.
8: ಆರ್ಸಿಬಿ ತಂಡ ಟೂರ್ನಿಯಲ್ಲಿ ಇದುವರೆಗೆ ಗೆದ್ದ 10 ಪಂದ್ಯಗಳಲ್ಲಿ 8 ಭಿನ್ನ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.