ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
- ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜಿನ ಸಮಯ ಬಂದೇ ಬಿಟ್ಟಿದೆ
- ಇಂದು ಮಧ್ಯಾಹ್ನ 2.30ಕ್ಕೆ ಅಬುಧಾಬಿಯಲ್ಲಿ ಹರಾಜು ಆರಂಭವಾಗಲಿದೆ
- ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಪವರ್ ಹಿಟ್ಟರ್‌ಗಳ ಮೇಲೆ ಕಣ್ಣಿಟ್ಟಿದೆ
IPL 2026 Auction : ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜಿನ ಸಮಯ ಬಂದೇ ಬಿಟ್ಟಿದೆ. ಇಂದು (ಡಿಸೆಂಬರ್ 16) ಅಬುಧಾಬಿಯಲ್ಲಿ ಈ ಈವೆಂಟ್ ನಡೆಯಲಿದ್ದು, ಹರಾಜಿಗೆ ನೋಂದಣಿ ಮಾಡಿಕೊಂಡಿರುವ ಆಟಗಾರರ ಪಟ್ಟಿಯಿಂದ ಬಿಸಿಸಿಐ 1005 ಆಟಗಾರರ ಹೆಸರುಗಳನ್ನು ತೆಗೆದುಹಾಕಿದೆ. ಅದೇ ಸಮಯದಲ್ಲಿ, 35 ಹೊಸ ಆಟಗಾರರ ಹೆಸರುಗಳನ್ನು ಬಿಸಿಸಿಐ ಸೇರಿಸಿದೆ.
ಒಟ್ಟು 350 ಆಟಗಾರರ ಕಿರುಪಟ್ಟಿಯನ್ನು ಮಿನಿ ಹರಾಜಿಗಾಗಿ ಬಿಸಿಸಿಐ ಸಿದ್ಧಪಡಿಸಿದೆ. ಇದರಲ್ಲಿ 240 ಭಾರತೀಯ ಆಟಗಾರರು ಮತ್ತು 110 ವಿದೇಶಿ ಆಟಗಾರರಿದ್ದಾರೆ. ಒಟ್ಟು ಆಟಗಾರರಲ್ಲಿ 224 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಮತ್ತು 14 ವಿದೇಶಿ ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಎಲ್ಲ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿ ಇದ್ದು, ಅವುಗಳ ಪೈಕಿ 31 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. 40 ಆಟಗಾರರು ಗರಿಷ್ಠ ಮೂಲ ಬೆಲೆ 2 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ರೀತಿ ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ.
ಅಂದಹಾಗೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪವರ್ ಹಿಟ್ಟರ್‌ಗಳ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಆರ್‌ಸಿಬಿ ಜೇಬಿನಲ್ಲಿ 16.4 ಕೋಟಿ ರೂ. ಇದೆ ಮತ್ತು ಎಂಟು ಆಟಗಾರರನ್ನು ತೆಗೆದುಕೊಳ್ಳಬೇಕಾಗಿದೆ. ಈ ಪೈಕಿ ಇಬ್ಬರು ವಿದೇಶಿ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಕೆಲವು ಸ್ಟಾರ್ ಆಟಗಾರರನ್ನು ಬಿಟ್ಟಿದ್ದರೂ, ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡವಾಗಿದೆ. ಆರ್‌ಸಿಬಿ, ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬಿಡುಗಡೆ ಮಾಡಿದೆ. ಅದಕ್ಕಾಗಿಯೇ ಹಿಟ್ಟರ್‌ಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಆರ್‌ಸಿಬಿ, ಲಿವಿಂಗ್‌ಸ್ಟೋನ್ ಅವರನ್ನು ಮತ್ತೆ ಕಡಿಮೆ ಬೆಲೆಗೆ ಖರೀದಿ ಮಾಡಿದರು ಅಚ್ಚರಿಪಡಬೇಕಿಲ್ಲ.
ಲಿವಿಂಗ್‌ಸ್ಟೋನ್ ಅಲ್ಲದೆ, ಮ್ಯಾಥ್ಯೂ ಶಾರ್ಟ್ ಮತ್ತು ಡೇವಿಡ್ ಮಿಲ್ಲರ್‌ರಂತಹ ಹಿಟ್ಟರ್‌ಗಳ ಮೇಲೂ ಆರ್‌ಸಿಬಿ ಕಣ್ಣಿಟ್ಟಿದೆ. ಆರ್‌ಸಿಬಿಗೆ ವಿದೇಶಿ ವೇಗದ ಬೌಲರ್‌ರನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ, ಲುಂಗಿ ಎನ್‌ಗಿಡಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅಲ್ಲದೆ, ಜೋಶ್ ಹ್ಯಾಜಲ್‌ವುಡ್ ಅವರ ಫಿಟ್‌ನೆಸ್ ಇದೀಗ ಪ್ರಶ್ನಾರ್ಹವಾಗಿದೆ. ಹೀಗಾಗಿ, ಮಥೀಶಾ ಪತಿರಾಣ, ಮ್ಯಾಟ್ ಹೆನ್ರಿ, ಮುಸ್ತಾಫಿಜುರ್ ರೆಹಮಾನ್, ಅನ್ರಿಚ್ ನಾರ್ಗೆ, ಒ'ರೂರ್ಕೆ ಅವರಲ್ಲಿ ಒಬ್ಬರನ್ನು ಆರ್‌ಸಿಬಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಇನ್ನು ಯಶ್ ದಯಾಳ್ ಅವರ ಲಭ್ಯತೆ ಕೂಡ ಅನಿಶ್ಚಿತವಾಗಿದೆ. ಏಕೆಂದರೆ, ಐಪಿಎಲ್ 2025ರ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಈ ಕಾರಣ ಬೆಂಗಳೂರು ತಂಡವು ಭಾರತೀಯ ವೇಗದ ಬೌಲರ್‌ನನ್ನು ಸಹ ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿದೆ. ಆಕಾಶ್ ದೀಪ್ ಅವರನ್ನು ಕರೆತರಲು ಆರ್‌ಸಿಬಿ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಅಕಿಬ್ ದಾರ್, ಅಶೋಕ್ ಶರ್ಮಾ ಮತ್ತು ಕೆಎಂ ಆಸಿಫ್ ಅವರಂತಹ ಅನ್‌ಕ್ಯಾಪ್ಡ್ ಆಟಗಾರರೂ ಇದ್ದಾರೆ.
ಇದಿಷ್ಟೇ ಅಲ್ಲದೆ, ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌ಗೆ ಬ್ಯಾಕಪ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ ಪ್ರಮುಖ ಆಯ್ಕೆಗಳಾಗಿವೆ. ಕಾರ್ತಿಕ್ ಶರ್ಮ ಮತ್ತು ಅಥರ್ವ ತ್ಯಾಡೆ ಅವರಂತಹ ಅನ್‌ಕ್ಯಾಪ್ಡ್ ಆಟಗಾರರನ್ನು ಸಹ ಆರ್‌ಸಿಬಿ ಪರಿಗಣಿಸಬಹುದು. ಆರ್‌ಸಿಬಿ ತಂಡದಲ್ಲಿ ಸುಯಾಶ್ ಶರ್ಮ ಮಾತ್ರ ರಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಆದ್ದರಿಂದ ಅವರು ಬ್ಯಾಕಪ್ ಸ್ಪಿನ್ನರ್ ಅನ್ನು ಕೂಡ ಸೇರಿಸಿಕೊಳ್ಳಬೇಕಾಗಿದೆ. ಹೀಗಾಗಿ, ರಾಹುಲ್ ಚಾಹರ್, ಕರ್ಣ್ ಶರ್ಮಾ, ವಿಘ್ನೇಶ್ ಪುತೂರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
RCB ಉಳಿಸಿಕೊಂಡ ಆಟಗಾರರು
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ತುಷಾರ, ರಸಿಖ್ನಾ ಸಲಾಂ, (ಏಜೆನ್ಸೀಸ್).