ಐಸಿಸಿ ಬಳಿ ಒಂದು ಮನವಿ ಮಾಡಿದ ಇಂಜಮಾಮ್-ಉಲ್-ಹಕ್
- ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ದಾಖಲೆ
- ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚಂಡಮಾರುತವನ್ನೇ ಸೃಷ್ಟಿಸಿದ ಅಭಿಷೇಕ್
- ಅಭಿಷೇಕ್ ಶರ್ಮಾ ಬಳಸಿದ ಬ್ಯಾಟ್‌ನಲ್ಲಿ ಚಿಪ್‌ಗಳಿವೆ ಎಂದು ಇಂಜಮಾಮ್ ಅನುಮಾನ
Abhishek Sharma : ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿ ಬೊಬ್ಬಿರಿದಿದ್ದು ಇದೀಗ ಎಲ್ಲೆಡೆ ಮನೆ ಮಾತಾಗಿದೆ. ಅಭಿಷೇಕ್ ಅವರು ತಮ್ಮ ವಿಧ್ವಂಸಕ ಬ್ಯಾಟಿಂಗ್‌ನಿಂದ ಕೇವಲ 10 ಓವರ್‌ಗಳಲ್ಲಿ ಪಂದ್ಯವನ್ನು ಗೆಲ್ಲಿಸಿದರು. ಅಭಿಷೇಕ್ ಅವರು ವೈಯಕ್ತಿಕವಾಗಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಭಿಷೇಕ್ ಆರ್ಭಟ ನೋಡಿದ ನ್ಯೂಜಿಲೆಂಡ್ ಕ್ರಿಕೆಟಿಗರು, ಅವರ ಬ್ಯಾಟ್ ಅನ್ನು ಪರಿಶೀಲಿಸಿದರು. ಅಲ್ಲದೆ, ಬ್ಯಾಟ್‌ನಲ್ಲಿ ನಿಜವಾಗಿ ಏನಿದೆ? ಎಂದು ಪಂದ್ಯ ಮುಗಿದ ನಂತರ ನ್ಯೂಜಿಲೆಂಡ್ ಕ್ರಿಕೆಟಿಗರು ಅಭಿಷೇಕ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ಸಂಚಲನಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಅಭಿಷೇಕ್ ಶರ್ಮಾ ಬಳಸಿದ ಬ್ಯಾಟ್‌ನಲ್ಲಿ ಚಿಪ್‌ಗಳಿವೆ ಎಂದು ಇಂಜಮಾಮ್ ಅನುಮಾನಿಸಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಅಂತಾನೂ ಒತ್ತಾಯಿಸಿದ್ದಾರೆ. ಅಭಿಷೇಕ್ ಅವರು ನ್ಯೂಜಿಲೆಂಡ್‌ನಂತಹ ಭಯಾನಕ ಬೌಲರ್‌ಗಳನ್ನು ಅದು ಹೇಗೆ ಇಷ್ಟರಮಟ್ಟಿಗೆ ಧೂಳಿಪಟ ಮಾಡುತ್ತಿದ್ದಾರೆ? ಅಭಿಷೇಕ್ ಏಕೆ ಭಯಾನಕ ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದಾರೆ? ಇದು ನಿಜಕ್ಕೂ ನಂಬಲಾಗದ ಸಂಗತಿ ಎಂದು ಇಂಜಮಾಮ್-ಉಲ್-ಹಕ್ ಟೀಕಿಸಿದ್ದಾರೆ.
ಐಸಿಸಿ ಖಂಡಿತವಾಗಿಯೂ ಇದರ ಬಗ್ಗೆ ತನಿಖೆ ನಡೆಸಬೇಕು. ಇಲ್ಲದಿದ್ದರೆ, ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಇನ್ನಷ್ಟು ಭಯಾನಕವಾಗಿ ಆಡುತ್ತಾರೆ ಎಂದು ಇಂಜಮಾಮ್ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಅಭಿಮಾನಿಗಳು ಪ್ರತಿವಾದ ಮಂಡನೆ ಮಾಡುತ್ತಿದ್ದಾರೆ. ನೀವು ಹೇಳಿದಂತೆ ಬ್ಯಾಟ್‌ನಲ್ಲಿ ಯಾವುದೇ ಚಿಪ್ ಇಲ್ಲ. ಅಭಿಷೇಕ್ ಆರ್ಭಟ ನೋಡಿ ಪಾಕ್ ಹೆದರಿದೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಅಂ0ದಹಾಗೆ, ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂಡ್ಯದಲ್ಲಿ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದರೊಂದಿಗೆ, ಟೀಮ್ ಇಂಡಿಯಾ ಪರ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಷೇಕ್ ಗಿಂತ ಮುಂದಿದ್ದು, ಕೇವಲ 12 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಗ್ಲೆನ್ ಫಿಲಿಪ್ಸ್ (48) ಮತ್ತು ಮಾರ್ಕ್ ಚಾಪ್ಮನ್ (32) ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿತು. ಟೀಮ್ ಇಂಡಿಯಾ ಪರ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್, ರವಿ ಬಿಷ್ಣೋಯ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಮತ್ತು ಹರ್ಷಿತ್ ರಾಣಾ ಒಂದು ವಿಕೆಟ್ ಪಡೆದರು.
ಆ ನಂತರ, ಅಭಿಷೇಕ್ ಶರ್ಮಾ (ಅಜೇಯ 68 ರನ್, 20 ಎಸೆತ, 7 ಬೌಂಡರಿ, 5 ಸಿಕ್ಸರ್) ಮತ್ತು ಸೂರ್ಯಕುಮಾರ್ (ಅಜೇಯ 57 ರನ್, 26 ಎಸೆತ, 6 ಬೌಂಡರಿ, 3 ಸಿಕ್ಸರ್) ವಿಧ್ವಂಸಕ ಇನ್ನಿಂಗ್ಸ್ ಆಡಿದರು. ಭಾರತ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 154 ರನ್‌ಗಳ ಗುರಿಯನ್ನು ತಲುಪಿತು, (ಏಜೆನ್ಸೀಸ್).