ಟೀಮ್ ಇಂಡಿಯಾ ಆಟಗಾರರಾದ 'ರೋಕೊ' ಜೋಡಿ 
ಕ್ರಿಕೆಟ್

ಈ ವರ್ಷ 'ರೋಕೊ' ಜತೆ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಟೀಮ್ ಇಂಡಿಯಾದ ಸ್ಟಾರ್​ ಆಟಗಾರರಿವರು...

ಪ್ರಮುಖ ಮುಖ್ಯಾಂಶಗಳು

  • 2025ರಲ್ಲಿ ಟೆಸ್ಟ್​ಗೆ ನಿವೃತ್ತಿ ನೀಡಿದ ರೋಕೊ ಜೋಡಿ
  • ಈ ವರ್ಷ ಹಲವಾರು ಸ್ಟಾರ್​ ಕ್ರಿಕೆಟಿಗರ ವಿದಾಯ
  • ಯಾರೆಲ್ಲ, ಯಾವೆಲ್ಲ ಫಾರ್ಮೆಟ್​ಗೆ ಗುಡ್​ಬೈ? ಇಲ್ಲಿದೆ ನೋಡಿ ಪಟ್ಟಿ
ಮುಂಬೈ: ಭಾರತದಲ್ಲಿ ಕ್ರಿಕೆಟ್ ಒಂದು ಭಾವನೆ ಮಾತ್ರವಲ್ಲ, ಅದೊಂದು ಸಂಭ್ರಮದ ಛಾಯೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಲಿ ಬಣ್ಣದ ಜೆರ್ಸಿಯನ್ನು ತೊಟ್ಟು ನಮ್ಮ ದೇಶವನ್ನು ಪ್ರತಿನಿಧಿಸುವ ಆಟಗಾರರನ್ನು ಮೈದಾನದಲ್ಲಿ ನೋಡಿದಾಗ, ಅದೇನೋ ವಿಶೇಷ ಕ್ಷಣ ಹಾಗೂ ಸಂತಸ. ಕ್ರಿಕೆಟ್ ಒಂದು ಧರ್ಮ ಎಂದೇ ಇಂದಿಗೂ ಅನೇಕರು ಭಾವಿಸಿದ್ದಾರೆ ಹಾಗೂ ನಂಬಿದ್ದಾರೆ ಎನ್ನಬಹುದು. ವಿಶೇಷವಾಗಿ ಈ ಕ್ರೀಡೆಗಿರುವ ಅಭಿಮಾನ, ಪ್ರೀತಿ, ಸಂಭ್ರಮ ಮತ್ತೊಂದು ಆಟಕ್ಕಿಲ್ಲ ಎಂದರೆ ಖಂಡಿತ ತಪ್ಪಾಗಲಾರದು.
ಕ್ರಿಕೆಟ್​ ಪ್ರಿಯರು ಈ ಆಟವನ್ನು ಪೂಜಿಸುತ್ತಾರೆ. ಮತ್ತು ತಮ್ಮ ನೆಚ್ಚಿನ ಆಟಗಾರರನ್ನು ಮುಗಿಲೆತ್ತರಕ್ಕೆ ಪ್ರೀತಿಸುತ್ತಾರೆ. ಅದರಲ್ಲಿ, ಕಿಂಚಿತ್ತು ಅನುಮಾನವಿಲ್ಲ. 50 ಓವರ್​ನ ಏಕದಿನ ಪಂದ್ಯಗಳಿರಲಿ, ಟಿ20 ಆಗಿರಲಿ ಅಥವಾ ಟೆಸ್ಟ್​ ಆಗಲಿ ಟೀಮ್ ಇಂಡಿಯಾ ಆಟಗಾರರನ್ನು ಹುರಿದುಂಬಿಸುವಲ್ಲಿ ಭಾರತೀಯರು ಎಂದಿಗೂ ಹಿಂದುಳಿದಿಲ್ಲ. ಪ್ರಸ್ತುತ, ವರ್ಷದ ಕೊನೆಯಲ್ಲಿರುವ ನಾವು, 2025ರಲ್ಲಿ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಪೈಕಿ ಕೆಲವರು ಮೂರು ಫಾರ್ಮೆಟ್​ಗೆ ವಿದಾಯ ಹೇಳಿದರೆ, ಇನ್ನೂ ಕೆಲವರು ಟೆಸ್ಟ್​, ಏಕದಿನಕ್ಕೆ ಮಾತ್ರ ಬಾಯ್​ ಹೇಳಿದ್ದಾರೆ.

'ರೋಕೊ' ಟೆಸ್ಟ್ ನಿವೃತ್ತಿ

ಈ ವರ್ಷ ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್-ಕೊಹ್ಲಿ ಯುಗಾಂತ್ಯ ಕಂಡಿದ್ದು ಅದೆಷ್ಟೋ ಹೃದಯಗಳಿಗೆ ನೋವು ನೀಡಿತು. ಮೇ 7, 2025ರಂದು, ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿರಾಟ್​ ಈ ನಿರ್ಧಾರಕ್ಕೆ ಮುಂದಾದರು. ರೋಹಿತ್ ನೀಡಿದ ಮೂರು ದಿನಗಳ ಬಳಿಕ, ಮೇ 10ರಂದು ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದರು.
ಇನ್ನು 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರದಲ್ಲಿ ಈ ಇಬ್ಬರು ದಿಗ್ಗಜ ಕ್ರಿಕೆಟಿಗರು ಆ ಫಾರ್ಮೆಟ್​ನಿಂದ ನಿವೃತ್ತಿ ಪಡೆದರು. ಪ್ರಸ್ತುತ, ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ 'ರೋಕೊ', ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿ, ಎಲ್ಲರನ್ನೂ ಬೆರಗಾಗಿಸಿದರು.

ಚೇತೇಶ್ವರ್​ ಪೂಜಾರ, ವೃದ್ಧಿಮಾನ್ ಸಹಾ...

ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಭದ್ರವಾದ ಗೋಡೆಯಂತೆ ನಿಂತಿದ್ದ ಚೇತೇಶ್ವರ ಪೂಜಾರ, ಆಗಸ್ಟ್ 24ರಂದು ಎಲ್ಲಾ ಫಾರ್ಮೆಟ್​ಗೂ ನಿವೃತ್ತಿ ಘೋಷಿಸಿದರು. 2010ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪೂಜಾರ, 103 ಟೆಸ್ಟ್ ಪಂದ್ಯಗಳಲ್ಲಿ 19 ಶತಕ ಮತ್ತು 35 ಅರ್ಧಶತಕ ಸೇರಿ ಒಟ್ಟು 7,195 ರನ್ ಗಳಿಸಿದ್ದಾರೆ. ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಹಲವು ರೋಮಾಂಚಕಾರಿ ನಿರ್ಣಾಯಕ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದ ಪೂಜಾರ. ಮೂರು ಫಾರ್ಮೆಟ್​ಗೂ ಗುಡ್​ಬೈ ಹೇಳಿದ್ದು ಹಲವರ ಅಚ್ಚರಿಗೂ ಕಾರಣವಾಯಿತು.
ಇನ್ನು ದೀರ್ಘಕಾಲದಿಂದ ಕ್ರಿಕೆಟ್​ನಿಂದ ದೂರವಿದ್ದ ವೃದ್ಧಿಮಾನ್ ಸಹಾ, ಈ ವರ್ಷದ ಎರಡನೇ ತಿಂಗಳ ಮೊದಲ ದಿನದಂದೇ ಕ್ರಿಕೆಟ್‌ನ ಮೂರು ಸ್ವರೂಪಗಳಿಂದ ನಿವೃತ್ತಿ ಹೊಂದಿದರು. ಸಹಾ ನಿವೃತ್ತಿಯ ಸಮಯದಲ್ಲಿ, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡರು. ಈ ಸ್ಟಾರ್ ಆಟಗಾರ ಡಿಸೆಂಬರ್ 2021ರಲ್ಲಿ ಟೀಮ್ ಇಂಡಿಯಾ ಪರ ತಮ್ಮ ಕಡೆಯ ಟೆಸ್ಟ್ ಪಂದ್ಯವನ್ನಾಡಿದರು. ಅವರು ಕೊನೆಯ ಬಾರಿಗೆ 2014ರಲ್ಲಿ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದು. ಅಂದಿನಿಂದ, ಸಹಾಗೆ ಯಾವುದೇ ಅವಕಾಶಗಳು ಸಿಗಲಿಲ್ಲ. ಇದರಿಂದಾಗಿ, ಈ ಆಟಗಾರ ನಿವೃತ್ತಿ ಪಡೆಯಬೇಕಾಯಿತು.

ಈ ವರ್ಷ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಆಟಗಾರರಿವರು

1. ರೋಹಿತ್ ಶರ್ಮಾ - ಮೇ 7, 2025, ಟೆಸ್ಟ್ ಕ್ರಿಕೆಟ್‌
2. ವಿರಾಟ್ ಕೊಹ್ಲಿ - ಮೇ 10, 2025, ಟೆಸ್ಟ್ ಕ್ರಿಕೆಟ್‌
3. ಚೇತೇಶ್ವರ ಪೂಜಾರ - ಆಗಸ್ಟ್ 24, 2025 ಮೂರು ಸ್ವರೂಪ
4. ವೃದ್ಧಿಮಾನ್ ಸಹಾ - ಫೆಬ್ರವರಿ 1, 2025, ಮೂರು ಸ್ವರೂಪ
5. ಪಿಯೂಷ್ ಚಾವ್ಲಾ - ಜೂನ್ 6 2025, ಮೂರು ಸ್ವರೂಪ
6. ಆರ್ ಅಶ್ವಿನ್ - ಆಗಸ್ಟ್ 27 2025, ಐಪಿಎಲ್​
7. ಅಮಿತ್ ಮಿಶ್ರಾ - ಸೆಪ್ಟೆಂಬರ್ 4 2025, ಮೂರು ಸ್ವರೂಪ
8. ಮೋಹಿತ್ ಶರ್ಮಾ - ಡಿಸೆಂಬರ್ 3, 2025, ಮೂರು ಸ್ವರೂಪ
9. ವರುಣ್ ಆರನ್ - ಜನವರಿ 10, 2025
10. ರಿಷಿ ಧವನ್ - ಜನವರಿ 5, 2025