ಆಸ್ಟ್ರೇಲಿಯಾ ನೆಲದಲ್ಲಿ 10 ವರ್ಷಗಳ ಬಳಿಕ ಟಿ20 ಸರಣಿ ಗೆದ್ದ ಭಾರತದ ಮಹಿಳೆಯರು
ಅಡಿಲೇಡ್: ಎಡಗೈ ಆರಂಭಿಕ ಬ್ಯಾಟುಗಾರ್ತಿ (Smriti Mandhana) ಸ್ಮೃತಿ ಮಂದನಾ (82 ರನ್, 55 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮತ್ತು ಕನ್ನಡತಿ (Shreyanka Patil) ಶ್ರೇಯಾಂಕಾ ಪಾಟೀಲ್ (22ಕ್ಕೆ 3) ಬಿಗಿ ಬೌಲಿಂಗ್ ಬಲದಿಂದ ಭಾರತ ತಂಡ ಮಹಿಳೆಯರ ಟಿ20 ಸರಣಿಯ 3ನೇ ಹಾಗೂ ಕೊನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೆಲಿಯಾ ಎದುರು 17 ರನ್ಗಳಿಂದ ಜಯ ಸಾಧಿಸಿದೆ. ಈ ಮೂಲಕ ಹರ್ಮಾನ್ಪ್ರೀತ್ ಕೌರ್ ಪಡೆ 2-1ರಿಂದ ಸರಣಿ ವಶಪಡಿಸಿಕೊಂಡಿದೆ. ಇದು ಆಸೀಸ್ಗೆ 2017ರ ಬಳಿಕ ತವರಿನಲ್ಲಿ ಯಾವುದೇ ಕ್ರಿಕೆಟ್ ಪ್ರಕಾರದಲ್ಲಿ ಮೊದಲ ಸರಣಿ ಸೋಲಾಗಿದ್ದರೆ, ಭಾರತ ತಂಡ 10 ವರ್ಷಗಳ ಬಳಿಕ ಕಾಂಗರೂ ನೆಲದಲ್ಲಿ ಸರಣಿ ಗೆದ್ದ ಸಾಧನೆ ಮಾಡಿದೆ.
ಅಡಿಲೇಡ್ ಓವಲ್ನಲ್ಲಿ ಶನಿವಾರ ನಡೆದ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ 6 ವಿಕೆಟ್ಗೆ 176 ರನ್ ಪೇರಿಸಿತು. ಇದು ಅಡಿಲೇಡ್ನಲ್ಲಿ ನಡೆದ ಮಹಿಳಾ ಟಿ20ಯಲ್ಲಿ ಗರಿಷ್ಠ ಮೊತ್ತವೆನಿಸಿದೆ. ಪ್ರತಿಯಾಗಿ ಆರಂಭಿಕ ಆಘಾತದಿಂದ ತತ್ತರಿಸಿದ ಆಸೀಸ್, ಆಶ್ಲೇ ಗಾರ್ಡ್ನರ್ (57) ಹೋರಾಟದ ನಡುವೆಯೂ 9 ವಿಕೆಟ್ಗೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಶ್ರೇಯಾಂಕಾ ಜತೆಗೆ ಎಡಗೈ ಸ್ಪಿನ್ನರ್ ಶ್ರೀ ಚರಣಿ (32ಕ್ಕೆ 3) ಮತ್ತು ವೇಗಿ ಅರುಂಧತಿ ರೆಡ್ಡಿ (35ಕ್ಕೆ 2) ಕೂಡ ಕಾಂಗರೂಗಳಿಗೆ ಕಡಿವಾಣ ಹೇರಿದರು. ಬೆತ್ ಮೂನಿ (6), ಎಲ್ಲಿಸ್ ಪೆರ್ರಿ (1) ವೈಲ್ಯ ಆಸೀಸ್ಗೆ ಹೊಡೆತ ನೀಡಿತು.
ಏಕದಿನ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಈ ಗೆಲುವು ಮುಂಬರುವ ಮಹಿಳಾ ಟಿ20 ವಿಶ್ವಕಪ್ಗೆ ಮುನ್ನ ಆತ್ಮವಿಶ್ವಾಸ ತುಂಬಿದೆ. ಇನ್ನು ಫೆ.24ರಿಂದ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಭಾರತ: 6 ವಿಕೆಟ್ಗೆ 176 (ಸ್ಮೃತಿ 82, ಶೆಾಲಿ 7, ಜೆಮೀಮಾ 59, ರಿಚಾ 18, ಹರ್ಮಾನ್ಪ್ರೀತ್ 2*, ಸುದರ್ಲ್ಯಾಂಡ್ 34ಕ್ಕೆ 2, ಮೊಲಿನೆಕ್ಸ್ 34ಕ್ಕೆ 1, ಗಾರ್ತ್ 25ಕ್ಕೆ 1), ಆಸ್ಟ್ರೆಲಿಯಾ: 9 ವಿಕೆಟ್ಗೆ 159 (ವೊಲ್ 10, ಮೂನಿ 6, ಲಿಚ್ಫೀಲ್ಡ್ 26, ಪೆರ್ರಿ 1, ಗಾರ್ಡ್ನರ್ 57, ವೇರ್ಹ್ಯಾಂ 12, ಸುದರ್ಲ್ಯಾಂಡ್ 14, ಹ್ಯಾರಿಸ್ 1, ಮೊಲಿನೆಕ್ಸ್ 6, ಶ್ರೇಯಾಂಕಾ 22ಕ್ಕೆ 3, ಶ್ರೀ ಚರಣಿ 32ಕ್ಕೆ 3, ಅರುಂಧತಿ 35ಕ್ಕೆ 2, ರೇಣುಕಾ 29ಕ್ಕೆ 1), ಪಂದ್ಯಶ್ರೇಷ್ಠ: ಸ್ಮೃತಿ ಮಂದನಾ.