ಗಾಲೆ: ಕಳೆದ 2 ವರ್ಷಗಳಲ್ಲಿ ಭಾರತ ತಂಡ ತವರು ನೆಲದಲ್ಲೇ ಪ್ರವಾಸಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೆ ಮುಗ್ಗರಿಸಿತ್ತು. ಇದೀಗ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿ ಆಡಲು ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಆತಿಥೇಯರ ಪ್ರಮುಖ ಸ್ಪಿನ್ ಅಸ್ತ್ರದ ಸವಾಲು ಎದುರಾಗುವ ಸಾಧ್ಯತೆ ಇದೆ.
ಲಂಕಾ ಸ್ಪಿನ್ ವಿಭಾಗದ ಪ್ರಮುಖ ಬೌಲರ್ ಪ್ರಭಾತ್ ಜಯಸೂರ್ಯ (
Prabath Jayasuriya
) ಗಾಲೆಯಲ್ಲಿ ಬಲಿಷ್ಠವಾದ ದಾಖಲೆ ಹೊಂದಿದ್ದು, "ಕಿಂಗ್ ಆಫ್ ಗಾಲೆ' (
King of Galle
) ಎಂಬ ಬಣ್ಣನೆಗೂ ಒಳಗಾಗಿದ್ದಾರೆ. 2022ರ ಜುಲೈನಲ್ಲಿ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪ್ರಭಾತ್, ಇಲ್ಲಿ ಇದುವರೆಗೆ ಆಡಿರುವ 11 ಟೆಸ್ಟ್ಗಳಲ್ಲಿ 81 ವಿಕೆಟ್ ಕಬಳಿಸಿ, ಪ್ರವಾಸಿ ತಂಡಗಳನ್ನು ಕಾಡಿದ್ದಾರೆ. 34 ವರ್ಷದ ಪ್ರಭಾತ್ ಒಟ್ಟಾರೆ 23 ಟೆಸ್ಟ್ಗಳಲ್ಲಿ 125 ವಿಕೆಟ್ ಕಬಳಿಸಿದ್ದಾರೆ. ಅಂದರೆ ಅವರು ಬೇರೆಡೆ ಆಡಿದ 12 ಟೆಸ್ಟ್ಗಳಲ್ಲಿ 44 ವಿಕೆಟ್ ಮಾತ್ರ ಪಡೆದಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲೂ ಪ್ರಭಾತ್ ಲಂಕಾದ ಗರಿಷ್ಠ ವಿಕೆಟ್ ಸಾಧಕರಾಗಿದ್ದು, 20 ಟೆಸ್ಟ್ಗಳಲ್ಲಿ 100 ವಿಕೆಟ್ ಗಳಿಸಿದ್ದಾರೆ. ಪ್ರಭಾತ್ಗೆ ಭಾರತದ ವಿರುದ್ಧ ಇದು ಮೊದಲ ಟೆಸ್ಟ್ ಆಗಿರಲಿದೆ.