ಭಾರತ-ಜಿಂಬಾಬ್ವೆ ಟಿ20 ಫೈಟ್ಗೆ ವೇದಿಕೆ ಸಜ್ಜು;
ಹರಾರೆ: ಶ್ರೇಯಸ್ ಅಯ್ಯರ್ ಟಿ20 ನಾಯಕರಾದ ಬಳಿಕ ಬರೀ ಟಾಸ್ ಮಾತ್ರ ಗೆದ್ದು, ಎಲ್ಲ ಪಂದ್ಯಗಳನ್ನು ಸೋತಿರುವ ಭಾರತ ತಂಡ ಗುರುವಾರದಿಂದ ಆತಿಥೇಯ ಜಿಂಬಾಬ್ವೆ (India vs Zimbabwe) ವಿರುದ್ಧ 3 ಪಂದ್ಯಗಳ ಸರಣಿ ಆಡಲಿದ್ದು, ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದೆ. ಸತತ 2ನೇ ಬಾರಿ ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಯುಕೆಯಲ್ಲಿ ಆಡಿರುವ 2 ಸರಣಿಗಳಲ್ಲೂ ಸೋತಿರುವ ಭಾರತ ತಂಡ, ಜಿಂಬಾಬ್ವೆಯಲ್ಲಿ ಬಲಿಷ್ಠವಾಗಿ ಪುಟಿದೇಳುವ ನಿರೀಕ್ಷೆ ಹೊಂದಿದೆ.
ಸೂರ್ಯಕುಮಾರ್ ಯಾದವ್ರನ್ನು ಹೊರಗಿಟ್ಟು, ಶ್ರೇಯಸ್ ಅಯ್ಯರ್ಗೆ ಟಿ20 ನಾಯಕನ ಪಟ್ಟ ಕಟ್ಟಿದ ಪ್ರಯೋಗ ಇಷ್ಟರವರೆಗೆ ಸಂಪೂರ್ಣ ವೈಫಲ್ಯ ಕಂಡಿದೆ. ಟಿ20 ತಂಡದ ನಾಯಕರನ್ನಾಗಿ ಶ್ರೇಯಸ್ರನ್ನು ಮುಂದುವರಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ಈ ಸರಣಿ ನಿರ್ಣಾಯಕವೆನಿಸಲಿದೆ.
ಕ್ರಿಕೆಟ್ ಶಿಶು ಐರ್ಲೆಂಡ್ನಲ್ಲಿ ಎರಡೂ ಪಂದ್ಯ ಸೋತ ಬಳಿಕ ಇಂಗ್ಲೆಂಡ್ನಲ್ಲೂ 5 ಪಂದ್ಯಗಳ ಪೈಕಿ ಭಾರತ 4ರಲ್ಲಿ ಸೋತಿತ್ತು. 1 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಜಿಂಬಾಬ್ವೆಯಲ್ಲಿ ಸಮರ್ಥ ತಂಡ ಸಂಯೋಜನೆ ರೂಪಿಸದಿದ್ದರೆ ಟಿ20 ಕ್ರಿಕೆಟ್ನಲ್ಲಿ ಭಾರತದ ಸಮಸ್ಯೆ ಹೆಚ್ಚಾಗಲಿದೆ. ಗಂಭೀರ್ ಹೆಚ್ಚಿನ ಪ್ರಯೋಗಗಳಿಗೆ ಪ್ರಯತ್ನಿಸಿ ಕೈಸುಟ್ಟುಕೊಂಡಿದ್ದರೆ, ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಸರಣಿಯಲ್ಲಿ ಅನುಸರಿಸಲಿರುವ ಕಾರ್ಯತಂತ್ರ ಕುತೂಹಲ ಕೆರಳಿಸಿದೆ. ಗಂಭೀರ್ ಹೆಚ್ಚಿನ ಆಲ್ರೌಂಡರ್ಗಳನ್ನು ಆಡಿಸಿದ್ದರೆ, ಲಕ್ಷ್ಮಣ್ ತಜ್ಞ ಬ್ಯಾಟರ್-ಬೌಲರ್ಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ.
ಸರಣಿಯ ಕೊನೇ 2 ಪಂದ್ಯಗಳು ಶನಿವಾರ ಮತ್ತು ಭಾನುವಾರ ಸತತ 2 ದಿನಗಳಲ್ಲಿ ನಡೆಯಲಿವೆ. ಸರಣಿಯ ಎಲ್ಲ ಪಂದ್ಯಗಳು ಹೊಸದಾಗಿ ಆರಂಭಗೊಂಡಿರುವ ಯುನೈಟ್8 ಸ್ಪೋರ್ಟ್ಸ್ ಚಾನಲ್ನಲ್ಲಿ ಮತ್ತು ಫ್ಯಾನ್ಕೋಡ್ ಆ್ಯಪ್, ವೆಬ್ಸೈಟ್ನಲ್ಲಿ ನೇರಪ್ರಸಾರ ಕಾಣಲಿದೆ.
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದ್ದು, ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆ ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ಮತ್ತು ಬೌಲಿಂಗ್ ಕೋಚ್ ಆಗಿ ಕನ್ನಡಿಗ ಸುನೀಲ್ ಜೋಶಿ ನೆರವಾಗಲಿದ್ದಾರೆ.
ವೈಭವ್, ತಿಲಕ್ ಮೇಲೆ ನಿರೀಕ್ಷೆ
ಐಪಿಎಲ್ ಮಿಂಚಿದ ಬೆನ್ನಲ್ಲೇ ಇಂಗ್ಲೆಂಡ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದ 15 ವರ್ಷದ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ ಆಡಿದ 3 ಪಂದ್ಯಗಳಲ್ಲೂ ತನ್ನ ವಯಸ್ಸಿಗಿಂತ ಹೆಚ್ಚು ರನ್ ಗಳಿಸಿರಲಿಲ್ಲ. ಪ್ರತಿ ಎಸೆತಕ್ಕೂ ಸಿಕ್ಸರ್ ಸಿಡಿಸುವುದಕ್ಕೆ ಹಪಹಪಿಸುತ್ತಿದ್ದ ವೈಭವ್, ಜಿಂಬಾಬ್ವೆಯಲ್ಲಿ ಪಕ್ವ ಆಟವಾಡಿದರಷ್ಟೇ ತಂಡದಲ್ಲಿ ಉಳಿದುಕೊಳ್ಳಲು ಸಾಧ್ಯ. ವೈಭವ್ ವರ್ಷಾರಂಭದಲ್ಲಿ 19 ವಯೋಮಿತಿ ವಿಶ್ವಕಪ್ ಫೈನಲ್ನಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದರು. ಅದೇ ಈ ಬಾರಿ ಅವರಿಗೆ ಸ್ಫೂರ್ತಿ ತುಂಬಲಿದೆ. ಇನ್ನು ಉಪನಾಯಕ ತಿಲಕ್ ವರ್ಮ ರನ್ಬರದ ಬಗ್ಗೆಯೂ ಕಳವಳ ಎದ್ದಿದೆ.
ಭಾರತ: ಸಂಜು ಸ್ಯಾಮ್ಸನ್ಗೆ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ನೀಡಿರುವುದದರಿಂದ ಅಭಿಷೇಕ್ ಶರ್ಮ ಜತೆ ಮತ್ತೆ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸುವುದು ಖಚಿತವೆನಿಸಿದೆ. ತಿಲಕ್ ವರ್ಮ ಇತ್ತೀಚೆಗೆ 5ನೇ ಕ್ರಮಾಂಕದಲ್ಲಿ ಆಡಿದ್ದು, ರಿಂಕು ಸಿಂಗ್ ಮರಳಿದಾಗಲೂ ಅವರು ಅದೇ ಕ್ರಮಾಂಕದಲ್ಲಿ ಮುಂದುವರಿಯುವರೇ ಎಂಬ ಗೊಂದಲವಿದೆ. ಆಲ್ರೌಂಡರ್ಗಳಾದ ಹರ್ಷ್ ದುಬೆ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ ಪೈಕಿ ಇಬ್ಬರಷ್ಟೇ ಆಡಬಹುದು. ಪ್ರಿನ್ಸ್ ಯಾದವ್ ಜತೆಗೆ ಮಯಾಂಕ್ ಯಾದವ್ ಪ್ರಮುಖ ವೇಗಿಯಾಗಿದ್ದರೆ, 3ನೇ ವೇಗಿಯ ಸ್ಥಾನಕ್ಕೆ ಅಶೋಕ್ ಶರ್ಮ&ಯಶ್ ಠಾಕೂರ್ ನಡುವೆ ಪೈಪೋಟಿ ಇದೆ.
ಜಿಂಬಾಬ್ವೆ: ಐರ್ಲೆಂಡ್ ತಂಡದ ಸ್ಫೂರ್ತಿಯಲ್ಲಿ ಜಿಂಬಾಬ್ವೆ ಕೂಡ ಭಾರತಕ್ಕೆ ಆಘಾತ ನೀಡಲು ಪ್ರಯತ್ನಿಸಲಿದ್ದು, ರಯಾನ್ ರ್ಬಲ್, ಮುಜರಬಾನಿ, ಎನ್ಗರವ, ಬ್ರಿಯಾನ್ ಬೆನ್ನೆಟ್ ಪ್ರಮುಖ ಆಟಗಾರರಾಗಿದ್ದಾರೆ. ಆಲ್ರೌಂಡರ್ ಸಿಕಂದರ್ ರಾಜಾ ನಾಯಕತ್ವದಲ್ಲಿ ತವರಿನ ಲಾಭ ಪಡೆಯಲು ಜಿಂಬಾಬ್ವೆ ತಂಡ ಬಯಸಿದೆ.
ನೇರಪ್ರಸಾರ: ಯುನೈಟ್8 ಸ್ಪೋರ್ಟ್ಸ್, ಫ್ಯಾನ್ಕೋಡ್
ಸ್ಥಳಿಯ ಕಾಲಮಾನ ಪ್ರಕಾರ ಮಧ್ಯಾಹ್ನದ ನಂತರ ಪಂದ್ಯ ನಡೆಯಲಿದ್ದು, ಹರಾರೆ ಸ್ಪೋರ್ಟ್ಸ್ ಕ್ಲಬ್ನ ಬೌನ್ಸಿ ಪಿಚ್ ಭಾರತೀಯ ಬ್ಯಾಟರ್ಗಳಿಗೆ ಸವಾಲೊಡ್ಡುವ ನಿರೀಕ್ಷೆ ಇದೆ. ಬ್ಲೆಸಿಂಗ್ ಮುಜರಬಾನಿ ಮತ್ತು ರಿಚರ್ಡ್ ಎನ್ಗರವ ಅವರಂಥ ಲಂಬೂ ವೇಗಿಗಳು ಈ ಪಿಚ್ನಲ್ಲಿ ಭಾರತೀಯ ಬ್ಯಾಟರ್ಗಳಿಗೆ ಸತ್ವಪರೀಕ್ಷೆ ಒಡ್ಡಬಲ್ಲರು.
*ಉಭಯ ತಂಡಗಳು ಸರಣಿಯಲ್ಲಿ ಗೆಲುವಿನ ಸಮಾನ ಅವಕಾಶವನ್ನು ಹೊಂದಿವೆ. ನಾವು ಇತ್ತೀಚೆಗೆ ಸ್ಥಿರ ನಿರ್ವಹಣೆ ತೋರುತ್ತ ಬಂದಿದ್ದೇವೆ. ಭಾರತ ತಂಡ ಈಗ ಸ್ಥಿತ್ಯಂತರದಲ್ಲಿದೆ. ಹೀಗಾಗಿ ಈ ಸರಣಿ ಏಕಪಯವಾಗಿ ಇರುವುದಿಲ್ಲ.
| ಸಿಕಂದರ್ ರಾಜಾ, ಜಿಂಬಾಬ್ವೆ ನಾಯಕ
*ಕಳೆದ 4 ತಿಂಗಳಲ್ಲಿ ಹಲವು ಏಳು&ಬೀಳುಗಳನ್ನು ಕಂಡಿರುವೆ. ಆದರೆ ನನ್ನ ಆತ್ಮವಿಶ್ವಾಸ ಈಗಲೂ ಅಚಲವಾಗಿದೆ. ತಂಡಕ್ಕಾಗಿ ಶೇ. 100 ನಿರ್ವಹಣೆ ತೋರುವ ಹಂಬಲವಿದೆ. 19 ವಯೋಮಿತಿ ವಿಶ್ವಕಪ್ ಗೆದ್ದ ಮೈದಾನದಲ್ಲೇ ಮತ್ತೆ ಆಡಲಿರುವೆ. ಆದರೆ ಇದು ಸಂಪೂರ್ಣ ಭಿನ್ನ ಅನುಭವ.