ವಿಂಡೀಸ್ ವಿರುದ್ಧ ಏಕದಿನ ಸರಣಿಗೆ ಕನ್ನಡಿಗ ಕೆಎಲ್ ರಾಹುಲ್ ಉಪನಾಯಕ?
ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಟಿ20 ತಂಡದ ನಾಯಕರಾಗಿ ಏಷ್ಯನ್ ಗೇಮ್ಸ್ನಲ್ಲಿ ಆಡಲಿರುವುದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಸೆಪ್ಟೆಂಬರ್ 27ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (K L Rahul) ಉಪನಾಯಕರಾಗಿ ನಾಯಕ ಶುಭಮಾನ್ ಗಿಲ್ಗೆ ನೆರವಾಗುವ ಸಾಧ್ಯತೆ ಇದೆ. ರಾಹುಲ್ ಈಗಾಗಲೆ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ತಂಡದಲ್ಲಿ ಶ್ರೇಯಸ್ ಸ್ಥಾನವನ್ನು ಋತುರಾಜ್ ಗಾಯಕ್ವಾಡ್ ತುಂಬುವ ನಿರೀಕ್ಷೆ ಇದೆ.
ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಸೆ.16ರಂದು ಅಂದರೆ ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದ ಬಳಿಕ ಭಾರತ ತಂಡದ ಆಯ್ಕೆ ನಡೆಯಲಿದೆ. ಅ.4ರಂದು ಅವಧಿ ಮುಗಿಸಲಿರುವ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಕೊನೇ ಸಭೆ ಇದಾಗಿರಲಿದೆ. ಬಳಿಕ ಅಗರ್ಕರ್ ಅವಧಿ ವಿಸ್ತರಣೆಯ ಬಗ್ಗೆ ಸೆ.18ರ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಸ್ಪಷ್ಟ ಉತ್ತರ ಲಭಿಸಲಿದೆ.
ಇರಾನಿ ಕಪ್ನಲ್ಲಿ ಆಡಲಿರುವ ಶೇಷ ಭಾರತ ತಂಡವನ್ನು ಇದೇ ದಿನ ಆಯ್ಕೆ ಮಾಡಲಾಗುವುದು. ಹಾಲಿ ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ವಿರುದ್ಧದ ಇರಾನಿ ಕಪ್ ಪಂಧ್ಯ ಅಕ್ಟೋಬರ್ 1ರಿಂದ 5ರವರೆಗೆ ಶ್ರೀನಗರದಲ್ಲಿ ನಡೆಯಲಿದೆ.
ಏಷ್ಯನ್ ಗೇಮ್ಸ್ಗೆ ಭಾರತ ಟಿ20 ತಂಡದಲ್ಲಿರುವ ಇಶಾನ್ ಕಿಶನ್ ಕೂಡ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ 2ನೇ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮತ್ತು ಧ್ರುವ ಜುರೆಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಪಂತ್ ಮತ್ತು ಜುರೆಲ್ ಅವರಲ್ಲಿ ಭಾರತ ತಂಡಕ್ಕೆ ಆಯ್ಕೆ ಆಗದವರು ಇರಾನಿ ಕಪ್ನಲ್ಲಿ ಶೇಷ ಭಾರತ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ವಿಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳು ಸೆ.27 (ತಿರುವನಂತಪುರ), 30 (ಗುವಾಹಟಿ) ಮತ್ತು ಅ.3ರಂದು (ಮುಲ್ಲನ್ಪುರ) ನಡೆಯಲಿವೆ. ಇದೇ ಸಮಯದಲ್ಲಿ ಅಂದರೆ ಸೆ.28ರಿಂದ ಅ.3ರವರೆಗೆ ಭಾರತ ಟಿ20 ತಂಡ ಏಷ್ಯಾಡ್ನಲ್ಲಿ ಆಡಲಿದೆ. ಭಾರತ ಟಿ20 ತಂಡದಲ್ಲಿರುವ ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್ ಕೂಡ ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ.