ವಿರಾಟ್​ ಕೊಹ್ಲಿ  
ಕ್ರಿಕೆಟ್

ಬಂತು ಮತ್ತೊಂದು ಸೆಂಚುರಿ: 53ನೇ ಶತಕ, ಕಿಂಗ್​ ಕೊಹ್ಲಿಯ 'ವಿರಾಟ'ರೂಪಕ್ಕೆ ತಲೆಬಾಗಿದ ಕ್ರೀಡಾ ಜಗತ್ತು! Virat Kohli

ಪ್ರಮುಖ ಮುಖ್ಯಾಂಶಗಳು

  • ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ರಾಯ್​ಪುರದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯ
  • ಮತ್ತೊಂದು ಶತಕ ಬಾರಿಸಿದ ದಾಖಲೆಗಳ ಸರದಾರ, ರನ್​ ಮೆಷಿನ್​, ಕ್ರಿಕೆಟ್​ ಲೋಕದ ಕಿಂಗ್​ ವಿರಾಟ್​ ಕೊಹ್ಲಿ
  • ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿಯಿಂದ ರಾಯ್​ಪುರದಲ್ಲಿ ಮತ್ತೊಂದು ಸೆಂಚುರಿ
  • ಏಕದಿನ ವೃತ್ತಿಜೀವನದ 53ನೇ ಶತಕ ಬಾರಿಸಿದ ವಿರಾಟ್​ ಕೊಹ್ಲಿಗೆ ತಲೆಬಾಗಿದ ಕ್ರೀಡಾ ಜಗತ್ತು
ರಾಯ್​ಪುರ​: ಇಲ್ಲಿನ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ದಾಖಲೆಗಳ ಸರದಾರ, ರನ್​ ಮೆಷಿನ್​, ಕ್ರಿಕೆಟ್​ ಲೋಕದ ಕಿಂಗ್​ ವಿರಾಟ್​ ಕೊಹ್ಲಿ ( Virat Kohli ) ಶತಕ ಬಾರಿಸಿದ್ದಾರೆ.
ಸದ್ಯ ಸೂಪರ್​ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ತಮ್ಮ ಶತಕಗಳ ಸಂಖ್ಯೆಯನ್ನು ಹೆಚ್ಚಿಕೊಂಡಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶತಕ (135) ಬಾರಿಸಿದ್ದ ಕೊಹ್ಲಿ, ಇದೀಗ ರಾಯ್​ಪುರದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಮೂರು ಅಂಕಿಯ ಸ್ಕೋರ್ ಗಳಿಸಿದ್ದಾರೆ.
ಮಾರ್ಕೊ ಯಾನ್ಸನ್ ಬೌಲಿಂಗ್‌ನಲ್ಲಿ ಕೊಹ್ಲಿ 90 ಎಸೆತಗಳಲ್ಲಿ ಸಿಂಗಲ್ ಪಡೆದು ಶತಕ ಗಳಿಸಿದರು. ಇದರಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿವೆ. ಇದು ಕೊಹ್ಲಿ ಅವರ 53ನೇ ಏಕದಿನ ಶತಕವಾಗಿದೆ. ಕೊಹ್ಲಿ ಪ್ರಸ್ತುತ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಕ್ರಿಕೆಟಿಗನೆಂಬ ದಾಖಲೆ ಹೊಂದಿದ್ದಾರೆ.
ಅಂದಹಾಗೆ, 2016 ಮತ್ತು 2018ರ ನಡುವಿನ ಅವಧಿಯಲ್ಲಿ ಕೊಹ್ಲಿ ಸತತ ಏಕದಿನ ಶತಕಗಳನ್ನು ಸಿಡಿಸಿದ್ದರು. ಇದಾದ ಬಳಿಕ ಅವರ ಬ್ಯಾಟ್​ನಿಂದ ಸತತವಾಗಿ ಶತಕಗಳು ಬಂದಿರಲಿಲ್ಲ. ಇದೀಗ ಬ್ಯಾಕ್​ ಟು ಬ್ಯಾಕ್​ 2 ಶತಕಗಳನ್ನು ಗಳಿಸಿದ್ದು, 11ನೇ ಬಾರಿ ಇದು ಮರುಕಳಿಸಿದೆ. ಏಕದಿನ ಸ್ವರೂಪದ ಇತಿಹಾಸದಲ್ಲೇ ಯಾವುದೇ ಓರ್ವ ಆಟಗಾರ ಇಷ್ಟೊಂದು ಶತಕಗಳನ್ನು ಗಳಿಸಿಲ್ಲ. ಏಕದಿನ ಶತಕಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್‌ಗಿಂತ ನಾಲ್ಕು ಶತಕಗಳಲ್ಲಿ ಮುಂದಿದ್ದಾರೆ.

ಹರಿಣರ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಈಗ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಡೇವಿಡ್ ವಾರ್ನರ್ ಅವರನ್ನು ವಿರಾಟ್​ ಹಿಂದಿಕ್ಕಿದ್ದಾರೆ. ಇನ್ನು 2025ರಲ್ಲಿ ಐಪಿಎಲ್​ ನಂತರ ತವರಿನಲ್ಲಿ ಇದೇ ಮೊದಲ ಬಾರಿಗೆ ಆಡಿದ ಕೊಹ್ಲಿ, ರಾಂಚಿ ಅಂಗಳದಲ್ಲಿ 6ನೇ ಹಾಗೂ ರಾಯ್​ಪುರದಲ್ಲಿ ತಮ್ಮ ಏಳನೇ ಶತಕ ದಾಖಲಿಸಿದರು.

ರುತುರಾಜ್​ ಮೊದಲ ಶತಕ

ಮತ್ತೊಂದೆಡೆ ಹರಿಣಗಳ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಕೂಡ ಅದ್ಭುತ ಆಟವಾಡಿದರು. ಮೊದಲ ಪಂದ್ಯದಲ್ಲಿ (8 ರನ್) ನಿರಾಶಾದಾಯಕ ಪ್ರದರ್ಶನ ನೀಡಿದರೂ, ಈ ಪಂದ್ಯದಲ್ಲಿ ರುತುರಾಜ್​ ಸೂಪರ್ ಶತಕ ಬಾರಿಸಿದರು. ಕೇವಲ 77 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿ ಮೊದಲ ಏಕದಿನ ಶತಕ ಗಳಿಸಿದರು.