ಹಮ್ಜಾ ಜಹೂರ್ ಶತಕದಾಟ! ಅಂಡರ್​-19 ಏಷ್ಯಾಕಪ್​ ಪಂದ್ಯದಲ್ಲಿ ಪಾಕ್​​ ಎದುರು ಸೋಲುಂಡ ಭಾರತ | IND vs PAK U-19  
ಕ್ರಿಕೆಟ್

ಹಮ್ಜಾ ಜಹೂರ್ ಶತಕದಾಟ! ಅಂಡರ್​-19 ಏಷ್ಯಾಕಪ್​ ಪಂದ್ಯದಲ್ಲಿ ಪಾಕ್​​ ಎದುರು ಸೋಲುಂಡ ಭಾರತ | IND vs PAK U-19

IND vs PAK U-19: ಇಂದು ಒಮಾನ್‌ನ ಅಲ್ ಅಮರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ 'ಅಂಡರ್-19 ಏಷ್ಯಾಕಪ್ 2026'ರ ಪಂದ್ಯದಲ್ಲಿ ಪಾಕ್​ ಮೂರು ವಿಕೆಟ್‌ಗಳ ಜಯ ಸಾಧಿಸಿತು.

ಭಾರತದ ಬ್ಯಾಟ್ಸ್‌ಮನ್ ಅರ್ಜುನ್ ರಜಪೂತ್ ಸಿಡಿಸಿದ ಶತಕ ಕೊನೆಗೂ ವ್ಯರ್ಥವಾಯಿತು. ಪಾಕಿಸ್ತಾನ ಪರ ಅಮೋಘ ಬ್ಯಾಟಿಂಗ್ ನಡೆಸಿದ ಹಮ್ಜಾ ಜಹೂರ್, ಸೆಂಚುರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಈ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಇದು ಸತತ ಎರಡನೇ ಗೆಲುವಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 46.3 ಓವರ್‌ಗಳಲ್ಲಿ 208 ರನ್‌ಗೆ ಆಲೌಟ್ ಆಯಿತು. ಆರಂಭದಲ್ಲೇ ವಿಕೆಟ್‌ಗಳು ಪತನಗೊಂಡಿದ್ದರಿಂದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ಲಕ್ಷ್ಯ ರೈಚಂದಾನಿ (0), ಆರ್ಯವೀರ್ ಸೆಹ್ವಾಗ್ (22), ವಿ.ಕೆ. ವಿನೀತ್ (8) ಮತ್ತು ಯಶವರ್ಧನ್ ಚೌಹಾಣ್ (1) ಬೇಗನೇ ಪೆವಿಲಿಯನ್‌ ಹಾದಿ ಹಿಡಿದ ಪರಿಣಾಮ, ಟೀಮ್ ಇಂಡಿಯಾ 42 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಕಠಿಣ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಬಂದ ಅರ್ಜುನ್ ರಜಪೂತ್, ಅದ್ಭುತ ಹೋರಾಟ ಮನೋಭಾವವನ್ನು ಪ್ರದರ್ಶಿಸಿದರು. ಕೇವಲ 85 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 107 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಐದನೇ ವಿಕೆಟ್‌ಗೆ ಅನ್ವಿ ದ್ರಾವಿಡ್ (10) ಅವರೊಂದಿಗೆ 44 ರನ್‌ಗಳನ್ನು ಮತ್ತು ಆರನೇ ವಿಕೆಟ್‌ಗೆ ಮನಾಲಾ ಚೌಹಾಣ್ ಅವರೊಂದಿಗೆ ನಿರ್ಣಾಯಕ 64 ರನ್‌ಗಳನ್ನು ಸೇರಿಸಿದರು. ಅಂತಿಮವಾಗಿ, ಕಾವ್ಯ ಪ್ರಸಾದ್ ಪಟೇಲ್ (23) ಮತ್ತು ಇಶಾನ್ ಸೂದ್ (2) ಅವರ ರನ್​ ಕೊಡುಗೆಯೊಂದಿಗೆ ಭಾರತವು 208 ರನ್‌ಗಳ ಒಟ್ಟು ಮೊತ್ತವನ್ನು ಕಲೆಹಾಕಲು ಶಕ್ತವಾಯಿತು. ಪಾಕಿಸ್ತಾನದ ಬೌಲರ್‌ಗಳ ಪೈಕಿ ಅಲಿ ರಜಾ, ರಿಜ್ವಾನುಲ್ಲಾ ಮತ್ತು ನಿಕಾಬ್ ಶಫೀಕ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಟೀಮ್ ಇಂಡಿಯಾ ನೀಡಿದ 209 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭದಲ್ಲಿ ಸಂಕಷ್ಟ ಎದುರಾಯಿತು. ಭಾರತದ ಬೌಲರ್ ಮನಲ್ ಚೌಹಾಣ್ ಅವರ ವೇಗದ ದಾಳಿಯಿಂದಾಗಿ, ಪಾಕಿಸ್ತಾನವು 14.4 ಓವರ್‌ಗಳಲ್ಲಿ 61 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರರಾದ ಜಹಾಂಗೀರ್ ಬಿಲಾಲ್ (5), ಉಸ್ಮಾನ್ ಖಾನ್ (16) ಮತ್ತು ಅಬ್ದುಲ್ ಖಾದಿರ್ (20) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಭಾರತದ ಪರವಾಗಿ ಮನಲ್ ಚೌಹಾಣ್ 3 ವಿಕೆಟ್‌, ಮೋಹಿತ್ ಉಲ್ವಾ 2 ವಿಕೆಟ್‌ ಹಾಗೂ ಇಶಾನ್ ಸೂದ್ ಮತ್ತು ಕಾವ್ಯ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಪಾಕಿಸ್ತಾನ ಸೋಲುವ ಹಂತದಲ್ಲಿದೆ ಎನ್ನುವಾಗಲೇ ಕ್ರೀಸ್​ಗೆ ಅಂಟಿ ನಿಂತ ಹಮ್ಜಾ ಜಹೂರ್, ತಂಡದ ಪರ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರಿಗೆ ಹಸ್ನೈನ್ ಅಬ್ಬಾಸ್ (38) ಉತ್ತಮ ಸಾಥ್ ನೀಡಿದರು. ಈ ಜೋಡಿಯು ಆರನೇ ವಿಕೆಟ್‌ಗೆ ನಿರ್ಣಾಯಕ 107 ರನ್‌ಗಳ ಜತೆಯಾಟವನ್ನು ನೀಡಿ ಪಂದ್ಯದ ಗತಿಯನ್ನೇ ಬದಲಿಸಿತು. ಹಮ್ಜಾ ಜಹೂರ್ ಅತ್ಯಂತ ಜಾಣ್ಮೆಯಿಂದ ಆಡಿ, 108 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 100 ರನ್‌ಗಳನ್ನು ಬಾರಿಸಿದರು.

ಅಂತಿಮವಾಗಿ, ಪಾಕಿಸ್ತಾನವು 7 ವಿಕೆಟ್‌ಗಳನ್ನು ಕಳೆದುಕೊಂಡು 48.1 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲಬಹುದು ಎಂದು ಭಾವಿಸಿದ್ದ ಟೀಮ್ ಇಂಡಿಯಾಗೆ, ಹಮ್ಜಾ ಅವರ ಅದ್ಭುತ ಬ್ಯಾಟಿಂಗ್​ ಅನಿರೀಕ್ಷಿತ ಸೋಲನ್ನು ಎದುರಿಸುವಂತೆ ಮಾಡಿತು. ಇದು ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಭಾರಿ ಬೇಸರ ಮೂಡಿಸಿದೆ,(ಏಜೆನ್ಸೀಸ್).