2026ರ ಕಿರಿಯರ ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಅಮೆರಿಕ ಮೊದಲ ಎದುರಾಳಿ 
ಕ್ರಿಕೆಟ್

2026ರ ಕಿರಿಯರ ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಅಮೆರಿಕ ಮೊದಲ ಎದುರಾಳಿ

ನವದೆಹಲಿ: ಮುಂದಿನ ವರ್ಷ ನಮೀಬಿಯಾ-ಜಿಂಬಾಬ್ವೆ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 16ನೇ ಆವೃತ್ತಿಯ 19 ವಯೋಮಿತಿ ಪುರುಷರ ಏಕದಿನ ವಿಶ್ವಕಪ್​ ಟೂರ್ನಿಯ (Under 19 cricket world cup) ವೇಳಾಪಟ್ಟಿಯನ್ನು ಐಸಿಸಿ ಬುಧವಾರ ಪ್ರಕಟಿಸಿದೆ. ಜನವರಿ 15ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್​ ಭಾರತ ತಂಡ ಅಮೆರಿಕ ವಿರುದ್ಧ ಉದ್ಘಾಟನಾ ಪಂದ್ಯ ಆಡಲಿದೆ.

ಒಟ್ಟು 16 ತಂಡಗಳು ಆಡಲಿರುವ ಟೂರ್ನಿಯ ಸ್ವರೂಪ ಹಿಂದಿನ ಆವೃತ್ತಿಗಳಂತೆಯೇ ಇರಲಿದ್ದು, ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-6 ಹಂತಕ್ಕೇರಲಿದ್ದು, ಇಲ್ಲೂ ತಲಾ 6 ತಂಡಗಳ 2 ಗುಂಪುಗಳು ಇರಲಿವೆ. ಸೂಪರ್​-6 ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಜನವರಿ 24ರಿಂದ ಫೆಬ್ರವರಿ 1ರವರೆಗೆ ಸೂಪರ್​-6 ಹಂತದ ಪಂದ್ಯಗಳು ನಡೆದರೆ, ಫೆಬ್ರವರಿ 3 ಮತ್ತು 4ರಂದು ಸೆಮಿಫೈನಲ್​ ಮತ್ತು ಫೆಬ್ರವರಿ 6ರಂದು ಫೈನಲ್​ ನಡೆಯಲಿದೆ. ನಾಕೌಟ್​ ಪಂದ್ಯಗಳಿಗೆ ಮಾತ್ರ ಮರುದಿನ ಮೀಸಲು ದಿನವಾಗಿರುತ್ತದೆ.

23 ದಿನಗಳ ಅಂತರದಲ್ಲಿ ಜಿಂಬಾಬ್ವೆಯ 3 ಮತ್ತು ನಮೀಬಿಯಾದ 2 ತಾಣಗಳಲ್ಲಿ ಒಟ್ಟಾರೆ 41 ಪಂದ್ಯಗಳು ನಡೆಯಲಿವೆ. ಪೂರ್ವ ಆಫ್ರಿಕಾದ ತಂಜಾನಿಯಾ ದೇಶ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡಲಿದೆ. ಆಸ್ಟ್ರೆಲಿಯಾ ತಂಡ ಟೂರ್ನಿಯ ಹಾಲಿ ಚಾಂಪಿಯನ್​ ಎನಿಸಿದೆ.

"19 ವಯೋಮಿತಿಯ ವಿಶ್ವಕಪ್​ ಭವಿಷ್ಯದ ತಾರೆಯರನ್ನು ಪರಿಚಯಿಸುವ ಟೂರ್ನಿಯಾಗಿದೆ. ಬ್ರಿಯಾನ್​ ಲಾರಾ, ಸನತ್​ ಜಯಸೂರ್ಯ, ವಿರಾಟ್​ ಕೊಹ್ಲಿ, ಕೇನ್​ ವಿಲಿಯಮ್ಸನ್​, ಸ್ಟೀವನ್​ ಸ್ಮಿತ್​ ಮತ್ತು ಶುಭಮಾನ್​ ಗಿಲ್​ ಇಲ್ಲಿಂದಲೇ ಬೆಳಕಿಗೆ ಬಂದವರು. 2026ರ ಆವೃತ್ತಿಯಲ್ಲಿ ಮತ್ತಷ್ಟು ಯುವ ಕ್ರಿಕೆಟಿಗರನ್ನು ಜಗತ್ತಿಗೆ ಪರಿಚಯಿಸಲು ಸಜ್ಜಾಗಿದ್ದೇವೆ' ಎಂದು ಐಸಿಸಿ ಚೇರ್ಮನ್​ ಜಯ್​ ಷಾ ತಿಳಿಸಿದ್ದಾರೆ.

ಜಿಂಬಾಬ್ವೆಯ ಹರಾರೆಯ ಹರಾರೆ ಸ್ಪೋರ್ಟ್ಸ್​ ಕ್ಲಬ್​, ತಕಶಿಂಗ ಸ್ಪೋರ್ಟ್ಸ್​ ಕ್ಲಬ್​, ಬುಲವಾಯೊದ ಕ್ವೀನ್ಸ್​ ಸ್ಪೋರ್ಟ್ಸ್​ ಕ್ಲಬ್​, ನಮೀಬಿಯಾದ ವಿಂಡೋಕ್​ ಕ್ರಿಕೆಟ್​ ಗ್ರೌಂಡ್​, ಎಚ್​ಪಿ ಓವಲ್​ಗಳಲ್ಲಿ ಪಂದ್ಯಗಳು ನಡೆಯಲಿವೆ.
ಎಲ್ಲ ತಂಡಗಳು ಜನವರಿ 8ರಂದು ಆತಿಥೇಯ ದೇಶವನ್ನು ತಲುಪಲಿದ್ದು, ಜನವರಿ 9ರಿಂದ 14ರವರೆಗೆ ಅಭ್ಯಾಸ ಪಂದ್ಯಗಳನ್ನು ಆಡಲಿವೆ.
ಗುಂಪುಗಳು:
ಎ: ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್​, ಅಮೆರಿಕ.
ಬಿ: ಇಂಗ್ಲೆಂಡ್​, ಪಾಕಿಸ್ತಾನ, ಸ್ಕಾಟ್ಲೆಂಡ್​, ಜಿಂಬಾಬ್ವೆ.
ಸಿ: ಆಸ್ಟ್ರೆಲಿಯಾ, ಐರ್ಲೆಂಡ್​, ಜಪಾನ್​, ಶ್ರೀಲಂಕಾ.
ಡಿ: ದ. ಆಫ್ರಿಕಾ, ಅಫ್ಘಾನಿಸ್ತಾನ, ತಂಜಾನಿಯಾ, ವೆಸ್ಟ್​ ಇಂಡೀಸ್​.
ಭಾರತದ ಲೀಗ್​ ಪಂದ್ಯ
ದಿನಾಂಕ ಎದುರಾಳಿ
ಜ.15 ಅಮೆರಿಕ
ಜ. 17 ಬಾಂಗ್ಲಾದೇಶ
ಜ. 24 ನ್ಯೂಜಿಲೆಂಡ್​
ಸ್ಥಳ: ಬುಲವಾಯೊ