ಅಂಧರ ಟಿ20 ವಿಶ್ವಕಪ್​: ಪ್ರಶಸ್ತಿ ಸುತ್ತಿಗೇರಿದ ಭಾರತದ ಮಹಿಳೆಯರು 
ಕ್ರಿಕೆಟ್

ಅಂಧರ ಟಿ20 ವಿಶ್ವಕಪ್​: ಪ್ರಶಸ್ತಿ ಸುತ್ತಿಗೇರಿದ ಭಾರತದ ಮಹಿಳೆಯರು

ಬೆಂಗಳೂರು: ಕನ್ನಡತಿ ದೀಪಿಕಾ ಟಿ.ಸಿ. ಸಾರಥ್ಯದ ಭಾರತ ತಂಡ ಚೊಚ್ಚಲ ಆವೃತಿಯ ಮಹಿಳಾ ಅಂಧರ ಟಿ20 ವಿಶ್ವಕಪ್​ (Women’s T20 World Cup Cricket) ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿದೆ. ಶ್ರೀಲಂಕಾದ ಕೊಲಂಬೊದಲ್ಲಿ ಶನಿವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೆಲಿಯಾ ವಿರುದ್ಧ 9 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸುವ ಮೂಲಕ ಈ ಸಾಧನೆ ಮಾಡಿದೆ. ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್​ ಗೆದ್ದಿದ್ದ ಭಾರತದ ಮಹಿಳೆಯರು ಕ್ರಿಕೆಟ್​ನಲ್ಲಿ ಇನ್ನೊಂದು ವಿಶ್ವ ಕಿರೀಟ ಜಯಿಸುವ ಸನಿಹ ತಲುಪಿದ್ದಾರೆ.
ಪಿ. ಸಾರಾ ಓವಲ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡ ಭಾರತ ತಂಡ, ಚುರುಕಿನ ಫೀಲ್ಡಿಂಗ್​ ಮತ್ತು ಬಿಗಿ ಬೌಲಿಂಗ್​ ನಿರ್ವಹಣೆಯ ಮೂಲಕ ಆಸ್ಟ್ರೆಲಿಯಾವನ್ನು 9 ವಿಕೆಟ್​ಗೆ 109 ರನ್​ಗಳಿಗೆ ನಿಯಂತ್ರಿಸಿತು. ಆಸೀಸ್​ ಪರ ಜೂಲಿ ನ್ಯೂಮನ್​ (25), ಚನಕನ್​ ಬುವಾಖಾವೊ (34) ಮತ್ತು ಕರ್ಟ್ನಿ ಲೆವಿಸ್​ (14) ಉಪಯುಕ್ತ ಕೊಡುಗೆ ನೀಡಿ ಮೊತ್ತವನ್ನು 100ರ ಗಡಿ ದಾಟಿಸಿದರು. ಪ್ರತಿಯಾಗಿ ಭಾರತ ತಂಡ 11.5 ಓವರ್​ಗಳಲ್ಲೇ 1 ವಿಕೆಟ್​ಗೆ 112 ರನ್​ ಗಳಿಸಿ ಜಯಭೇರಿ ಬಾರಿಸಿತು.

ಬಿ3 ಆಟಗಾರ್ತಿ ಗಂಗಾ ಕದಂ ಅಜೇಯ 41 ರನ್​ (31 ಎಸೆತ) ಬಾರಿಸಿದರು. ಭಾರತಕ್ಕೆ ಬಿರುಸಿನ ಆರಂಭ ಒದಗಿಸಿ ಗೆಲುವು ಖಾತ್ರಿಪಡಿಸಿದ ಬಸಂತಿ ಹನ್ಸದಾ (45 ರನ್​, 39 ಎಸೆತ) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದಿನದ ಇನ್ನೊಂದು ಸೆಮಿೈನಲ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನೇಪಾಳ 7 ವಿಕೆಟ್​ಗಳಿಂದ ಜಯ ಸಾಧಿಸಿತು.

ಆಸ್ಟ್ರೆಲಿಯಾ: 9 ವಿಕೆಟ್​ಗೆ 109 (ಬುವಾಖಾವೊ 34, ನ್ಯೂಮನ್​ 25, ಜಮುನಾ ರಾಣಿ 30ಕ್ಕೆ 1, ಅನು ಕುಮಾರಿ 21ಕ್ಕೆ 1, ಸಿಮ್ರನ್​ಜೀತ್​ 6ಕ್ಕೆ 1), ಭಾರತ: 11.5 ಓವರ್​ಗಳಲ್ಲಿ 1 ವಿಕೆಟ್​ಗೆ 112 (ಬಸಂತಿ ಹನ್ಸದಾ 45, ಗಂಗಾ ಕದಂ 41*, ಕರುಣಾ 16*).

ಭಾನುವಾರ ಫೈನಲ್​

ಭಾರತ-ನೇಪಾಳ
ಆರಂಭ: ಬೆಳಗ್ಗೆ 11.30
ಎಲ್ಲಿ: ಕೊಲಂಬೊ