ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್, ಏಕದಿನ ಸರಣಿಗೆ ಮೇ 19ರಂದು ಭಾರತ ತಂಡ ಆಯ್ಕೆ
ನವದೆಹಲಿ: ಐಪಿಎಲ್ ನಂತರ ಜೂನ್ನಲ್ಲಿ ನಡೆಯಲಿರುವ ಪ್ರವಾಸಿ ಅಫ್ಘಾನಿಸ್ತಾನ (Afghanistan series) ವಿರುದ್ಧದ ಏಕೈಕ ಟೆಸ್ಟ್ ಮತ್ತು 3 ಪಂದ್ಯಗಳ ಏಕದಿನ ಸರಣಿಗೆ ಮೇ 19ರಂದು ಭಾರತ ತಂಡವನ್ನು (Team India) ಆಯ್ಕೆ ಮಾಡುವ ನಿರೀಕ್ಷೆ ಇದೆ.
ಜೂನ್ 6ರಿಂದ ಮುಲ್ಲನ್ಪುರದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ವೇಗಿ ಜಸ್ಪ್ರೀತ್ ಬುಮ್ರಾ ಹೊರತಾಗಿ ಇತರ ಎಲ್ಲ ಪ್ರಮುಖ ಆಟಗಾರರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಪಂದ್ಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಭಾಗವಾಗಿಲ್ಲ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಶುಭಮಾನ್ ಗಿಲ್ ಸಹಿತ ಎಲ್ಲ ಪ್ರಮುಖ ಆಟಗಾರರು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಬುಮ್ರಾಗೆ ಮಾತ್ರ ವಿಶ್ರಾಂತಿ ಸಿಗಲಿದೆ ಎನ್ನಲಾಗಿದೆ. ವೇಗಿ ಗುರ್ನೂರ್ ಬ್ರಾರ್ ಸಹಿತ ಕೆಲ ಹೊಸಬರಿಗೂ ಸ್ಥಾನ ಒಲಿಯುವ ನಿರೀಕ್ಷೆ ಇದೆ.
ಜೂನ್ 14, 17, 20ರಂದು ಕ್ರಮವಾಗಿ ಧರ್ಮಶಾಲಾ, ಲಖನೌ, ಚೆನ್ನೈನಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಲ್ಲೂ ಬಲಿಷ್ಠ ತಂಡವೇ ಕಣಕ್ಕಿಳಿಯಲಿದ್ದು, 2ನೇ ವಿಕೆಟ್ ಕೀಪರ್ ಯಾರೆಂಬುದು ಕುತೂಹಲ ಸೃಷ್ಟಿಸಿದೆ. ರಿಷಭ್ ಪಂತ್ ಹೊರಬೀಳುವ ಸಾಧ್ಯತೆ ಇದ್ದು, ಅವರ ಬದಲಿಗೆ ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕನ್ನಡಿಗ ಕೆಎಲ್ ರಾಹುಲ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ.
ಏಕದಿನ ತಂಡದಲ್ಲಿ ಗೊಂದಲದಲ್ಲಿರುವ ಮತ್ತೊಂದು ಪ್ರಮುಖ ಪಾತ್ರವೆಂದರೆ ಸ್ಪಿನ್ ಬೌಲಿಂಗ್ ಆಲ್ರೌಂಡರ್. ಅನುಭವಿ ರವೀಂದ್ರ ಜಡೇಜಾ, ಫಾರ್ಮ್ನಲ್ಲಿಲ್ಲದ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಜತೆಗೆ ಇತರರ ಆಯ್ಕೆ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವ ನಿರೀಕ್ಷೆ ಇದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವ ಕಾರ್ಯ ಈ ಸರಣಿಯಿಂದ ಶುರುವಾಗಲಿದೆ.