ಟಿ20 ವಿಶ್ವಕಪ್: ಭಾರತಕ್ಕೆ ಇಂದು ಚೆನ್ನೈನಲ್ಲಿ ಜಿಂಬಾಬ್ವೆ ಸವಾಲು; ಗೆದ್ದರಷ್ಟೇ ಉಳಿಗಾಲ!
ಚೆನ್ನೈ: ತವರಿನ ಟಿ20 ವಿಶ್ವಕಪ್ನಲ್ಲಿ (T20 World Cup) ಸತತ 4 ಗೆಲುವಿನೊಂದಿಗೆ ಲೀಗ್ ಹಂತದಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ, ಸೂಪರ್-8 ಹಂತದ ಮೊದಲ ಪಂದ್ಯದಲ್ಲೇ ಎಡವಿತು. ಇದರಿಂದಾಗಿ ಭಾರತ ತಂಡಕ್ಕೆ ಇದೀಗ ಮಾಡು ಇಲ್ಲವೆ ಮಡಿ ಸವಾಲು ಎದುರಾಗಿದ್ದು, ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಟೂರ್ನಿಯಲ್ಲಿ ಇದುವರೆಗೆ ನಿರೀಕ್ಷಿತ ನಿರ್ವಹಣೆ ತೋರಿಸದಿರುವ ಭಾರತೀಯ ಬ್ಯಾಟಿಂಗ್ ವಿಭಾಗ ಈ ಬಾರಿ ಸಿಡಿದೆದ್ದು ನಿಲ್ಲುವ ಹಂಬಲದಲ್ಲಿದೆ.
ದ. ಆಫ್ರಿಕಾ ಎದುರು ಅಹಮದಾಬಾದ್ನಲ್ಲಿ ಸೋತಿದ್ದಕ್ಕಿಂತ ಹೆಚ್ಚಾಗಿ 76 ರನ್ಗಳ ಭಾರಿ ಅಂತರದಿಂದ ಸೋತಿರುವುದು ಸೂರ್ಯಕುಮಾರ್ ಯಾದವ್ ಬಳಗವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಇದು ಭಾರತ ತಂಡ ಉಳಿದೆರಡು ಪಂದ್ಯಗಳನ್ನು ಗೆದ್ದರೂ, ಸೆಮಿಫೈನಲ್ ಟಿಕೆಟ್ ಕೈತಪ್ಪಬಹುದಾದ ಸ್ಥಿತಿಯಲ್ಲಿ ತಂದು ನಿಲ್ಲಿಸಿದೆ. ಹೀಗಾಗಿ ಜಯದೊಂದಿಗೆ ರನ್ರೇಟ್ ಸುಧಾರಣೆಯೂ ಅಗತ್ಯವೆನಿಸಿದೆ.
ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿ, ಸೂಪರ್-8 ಹಂತಕ್ಕೇರಿರುವ ಜಿಂಬಾಬ್ವೆ ತಂಡವನ್ನು ಲಘುವಾಗಿ ಪರಿಗಣಿಸುವುದು ಭಾರತಕ್ಕೆ ಅಪಾಯಕಾರಿ ಎನಿಸಿದೆ. ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯವಾಗಿ ಸೋತಿದ್ದರೂ, ಲೀಗ್ ಹಂತದಲ್ಲಿ ಮಾಜಿ ಚಾಂಪಿಯನ್ಗಳಾದ ಆಸ್ಟ್ರೆಲಿಯಾ, ಶ್ರೀಲಂಕಾ ತಂಡಗಳನ್ನು ಜಿಂಬಾಬ್ವೆ ಸೋಲಿಸಿತ್ತು. ಲಂಬೂ ವೇಗಿ ಬ್ಲೆಸಿಂಗ್ ಮುಜರಬಾನಿ ಒಳಗೊಂಡ ಜಿಂಬಾಬ್ವೆ ತಂಡದ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಸ್ಪಿನ್ ಬೌಲಿಂಗ್ ವಿಭಾಗ ಭಾರತಕ್ಕೆ ಸವಾಲೆನಿಸುವ ಸಾಧ್ಯತೆ ಇಲ್ಲ. ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಒಳಗೊಂಡ ಭಾರತೀಯ ಬೌಲಿಂಗ್ ವಿಭಾಗವೂ ಜಿಂಬಾಬ್ವೆ ಕಠಿಣ ಸತ್ವಪರೀಕ್ಷೆ ಒಡ್ಡಲಿದೆ. ಟೂರ್ನಿಯಲ್ಲಿ ಇದುವರೆಗೆ ಭಾರತ ಪರ ಸರ್ವಾಧಿಕ 10 ವಿಕೆಟ್ ಕಬಳಿಸಿರುವ ವರುಣ್ ಚಕ್ರವರ್ತಿ, ತವರಿನ ಪಿಚ್ನಲ್ಲಿ ಇನ್ನಷ್ಟು ಪರಿಣಾಮಕಾರಿ ಎನಿಸುವ ನಿರೀೆ ಇದೆ.
ಟೂರ್ನಿಯ ಆರಂಭದಿಂದಲೂ ಉತ್ತಮ ಆರಂಭದ ಕೊರತೆ ಭಾರತೀಯ ಬ್ಯಾಟಿಂಗ್ ವಿಭಾಗವನ್ನು ಕಾಡುತ್ತಿದೆ. ನಮೀಬಿಯಾ ಎದುರು ಮೊದಲ ವಿಕೆಟ್ಗೆ 25 ರನ್ ಸೇರಿಸಿದ್ದೇ ಗರಿಷ್ಠವೆನಿಸಿದೆ. ಎಡಗೈ ಆರಂಭಿಕರಲ್ಲಿ ಅಭಿಷೇಕ್ ಸತತ 3 ಸೊನ್ನೆ ಸುತ್ತಿದ್ದರೆ, ದ. ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಇಶಾನ್ ಕಿಶನ್ ಶೂನ್ಯಕ್ಕೆ ಔಟಾಗಿ ಭಾರತವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಪಾಕ್ ವಿರುದ್ಧ ಸಿಡಿದಿದ್ದ ಕಿಶನ್ ಸದ್ಯ ಉತ್ತಮ ಲಯದಲ್ಲೇ ಇದ್ದರೂ, ಅಭಿಷೇಕ್ ಆಫ್ ಸ್ಪಿನ್ನರ್ಗಳ ಎದುರು ದೌರ್ಬಲ್ಯ ಪ್ರದರ್ಶಿಸುತ್ತಿದ್ದಾರೆ. ಟೂರ್ನಿಗೆ ಮುನ್ನ ಗರಿಷ್ಠ ರನ್ಸ್ಕೋರರ್ ಎನಿಸುವ ನಿರೀಕ್ಷೆ ಮೂಡಿಸಿದ್ದ ಅಭಿಷೇಕ್, ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 15 ರನ್ ಮಾತ್ರ ಗಳಿಸಿದ್ದಾರೆ. ಹೊಟ್ಟೆ ನೋವು ಕಾಡಿದ ಬಳಿಕ ಅವರು ನೈಜ ಆಟವಾಡಿಲ್ಲ. ಪ್ರಮುಖವಾಗಿ ಆರಂಭದಲ್ಲೇ ಸ್ಫೋಟಿಸುವ ಆತುರವನ್ನು ಅವರು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ.
ಬ್ಯಾಟಿಂಗ್ ಸುಧಾರಿಸಲು ಅವಕಾಶ
ಜಿಂಬಾಬ್ವೆ ತಂಡ ವಿಶ್ವದರ್ಜೆಯ ಸ್ಪಿನ್ನರ್ ಹೊಂದಿಲ್ಲ. ಇದು ಭಾರತಕ್ಕೆ ತನ್ನ ಬ್ಯಾಟಿಂಗ್ ನಿರ್ವಹಣೆ ಸುಧಾರಿಸಲು ಉತ್ತಮ ವೇದಿಕೆ ಎನಿಸಿದೆ. 3ನೇ ಕ್ರಮಾಂಕದಲ್ಲಿ ಆಡುವ ತಿಲಕ್ ವರ್ಮ ಕೂಡ ಇದುವರೆಗೆ ನೈಜ ಆಟವಾಡಿಲ್ಲ. ಪ್ರಮುಖವಾಗಿ ಪವರ್ಪ್ಲೇನಲ್ಲಿ ತಿಣುಕಾಡುತ್ತಿದ್ದಾರೆ. ನಾಯಕ ಸೂರ್ಯಕುಮಾರ್ ಇದುವರೆಗೆ ಭಾರತ ಪರ ಸರ್ವಾಧಿಕ 180 ರನ್ ಗಳಿಸಿದ್ದರೂ, ಅವರ ಸ್ಟ್ರೆಕ್ರೇಟ್ ಸಮಾಧಾನಕರವಾಗಿಲ್ಲ. ಆಲ್ರೌಂಡರ್ಗಳಾದ ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಉಪಯುಕ್ತ ಕೊಡುಗೆಯನ್ನೇ ನೀಡುತ್ತಿದ್ದಾರೆ. ರಿಂಕು ಸಿಂಗ್ ಆಫ್ರಿಕಾ ವಿರುದ್ಧ ಸಿಕ್ಕ ಉತ್ತಮ ಅವಕಾಶವನ್ನು ಕೈಚೆಲ್ಲಿದ್ದರು.
ಭಾರತ: ರಿಂಕು ಸಿಂಗ್ ತಂಡವನ್ನು ಮರಳಿ ಕೂಡಿಕೊಂಡಿರುವುದರಿಂದ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಆದರೆ ರಿಂಕು ಅಥವಾ ತಿಲಕ್ ವರ್ಮ, ಸಂಜು ಸ್ಯಾಮ್ಸನ್ಗೆ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ. ಸ್ಯಾಮ್ಸನ್ ಕೂಡ ಇತ್ತೀಚೆಗೆ ರನ್ಬರ ಎದುರಿಸಿದ್ದರೂ, ತಂಡದಲ್ಲಿ ಎಡಗೈ ಬ್ಯಾಟರ್ಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಇನ್ನು ಉಪನಾಯಕ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಬದಲಿಗೆ ಆಡುವ 11ರ ಬಳಗಕ್ಕೆ ಮರಳುವ ನಿರೀಕ್ಷೆ ಇದೆ. ಅರ್ಷದೀಪ್ ಬದಲಿಗೆ ಮತ್ತೆ ಕುಲದೀಪ್ ಯಾದವ್ ಅವಕಾಶ ಪಡೆದರೂ ಅಚ್ಚರಿ ಇಲ್ಲ.
ಜಿಂಬಾಬ್ವೆ: ಭಾರತ ತಂಡದಲ್ಲಿ ಎಡಗೈ ಬ್ಯಾಟರ್ಗಳ ಸಂಖ್ಯೆ ಹೆಚ್ಚಿರುವುದರಿಂದ ಜಿಂಬಾಬ್ವೆಯ ಎಡಗೈ ಸ್ಪಿನ್ನರ್ ವೆಲ್ಲಿಂಗ್ಟನ್ ಮಸಕಜ ಆಡುವ 11ರ ಬಳಗದಿಂದ ಮತ್ತೆ ಹೊರಗುಳಿಯುವ ನಿರೀಕ್ಷೆ ಇದೆ. ನಾಯಕ ಸಿಕಂದರ್ ರಾಜಾ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಎಡಗೈಗೆ ಗಾಯ ಮಾಡಿಕೊಂಡಿದ್ದರು. ಆದರೆ ಅವರು ಭಾರತ ವಿರುದ್ಧದ ಪಂದ್ಯಕ್ಕೆ ಫಿಟ್ ಆಗುವುದು ಖಚಿತ ಎನ್ನಲಾಗಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ದಣ ಆಫ್ರಿಕಾ ವಿರುದ್ಧದ ಸೂಪರ್-8 ಹಂತದ ಮೊದಲ ಪಂದ್ಯದ ಭಾರಿ ಸೋಲು ಭಾರತ ತಂಡದ ರನ್ರೇಟ್ಗೆ (-3.80) ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಭಾರತ ತಂಡ ಈಗ ಉಪಾಂತ್ಯಕ್ಕೇರಲು ಉಳಿದೆರಡು ಪಂದ್ಯಗಳಲ್ಲಿ ಜಯಿಸುವ ಜತೆಗೆ ರನ್ರೇಟ್ ಕೂಡ ಸುಧಾರಿಸಬೇಕಾಗಿದೆ. ಅಂದರೆ ಉಳಿದೆರಡು ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ (ಮಾ.1) ವಿರುದ್ಧ ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡ ಗುರುವಾರದ ಮೊದಲ ಪಂದ್ಯದಲ್ಲಿ ದ. ಆಫ್ರಿಕಾ ಎದುರು ಸೋತರೆ ಭಾರತ ತಂಡ ರನ್ರೇಟ್ ಅವಲಂಬಿಸದೆ, ಉಳಿದೆರಡು ಪಂದ್ಯಗಳಲ್ಲಿ ಕೇವಲ 1 ರನ್ನಿಂದ ಗೆದ್ದರೂ ಸೆಮಿಫೈನಲ್ಗೇರಲಿದೆ. ಆದರೆ ದ. ಆಫ್ರಿಕಾ ತಂಡ ವಿಂಡೀಸ್ ವಿರುದ್ಧ ಸೋತು ಜಿಂಬಾಬ್ವೆ ವಿರುದ್ಧ ಗೆದ್ದರೆ ಆಗ ದ. ಆಫ್ರಿಕಾ, ವಿಂಡೀಸ್ ಮತ್ತು ಭಾರತ ತಲಾ 4 ಅಂಕಗಳ ಸಮಬಲ ಸಾಧಿಸುವ ಸಾಧ್ಯತೆ ಇರುತ್ತದೆ ಮತ್ತು ಆಗ ಭಾರತ ರನ್ರೇಟ್ನಲ್ಲಿ ದ.ಆಫ್ರಿಕಾ ಅಥವಾ ವಿಂಡೀಸ್ ತಂಡವನ್ನು ಹಿಂದಿಕ್ಕಿದರೆ ಉಪಾಂತ್ಯಕ್ಕೇರಬಹುದು. ಭಾರತ ತಂಡ ಜಿಂಬಾಬ್ವೆ ವಿರುದ್ಧ ಸೋತು ವಿಂಡೀಸ್ ವಿರುದ್ಧ ಮಾತ್ರ ಗೆದ್ದರೂ ಉಪಾಂತ್ಯಕ್ಕೇರುವ ಅವಕಾಶವಿದೆ. ಆದರೆ ಇದಕ್ಕೆ ದ. ಆಫ್ರಿಕಾ ತನ್ನ ಎಲ್ಲ 3 ಪಂದ್ಯ ಗೆಲ್ಲಬೇಕಾಗುತ್ತದೆ ಮತ್ತು ಭಾರತ ತಂಡ ರನ್ರೇಟ್ನಲ್ಲಿ ವಿಂಡೀಸ್, ಜಿಂಬಾಬ್ವೆ ತಂಡಗಳನ್ನು ಹಿಂದಿಕ್ಕಬೇಕಾಗುತ್ತದೆ.
ದ. ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋತು, ಜಿಂಬಾಬ್ವೆ ವಿರುದ್ಧ ಗೆದ್ದರೆ ಮತ್ತು ಭಾರತ ತನ್ನ ಉಳಿದೆರಡೂ ಪಂದ್ಯ ಗೆದ್ದರೆ ಆಗ ಗ್ರೂಪ್-2ರಿಂದ ಉಪಾಂತ್ಯಕ್ಕೇರುವ 2 ತಂಡಗಳನ್ನು ನಿರ್ಧರಿಸುವಲ್ಲಿ ರನ್ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಭಾರತ ತಂಡ ಸದ್ಯ ಮೈನಸ್ನಲ್ಲಿರುವ ತನ್ನ ರನ್ರೇಟ್ಅನ್ನು ಪ್ಲಸ್ ಮಾಡಿಕೊಳ್ಳಲು ಜಿಂಬಾಬ್ವೆ ವಿರುದ್ಧ ಕನಿಷ್ಠ 77 ರನ್ ಅಂತರದಿಂದ ಗೆಲ್ಲಬೇಕಾಗಿದೆ. 150 ರನ್ ಸವಾಲನ್ನು 11-12 ಓವರ್ಗಳಲ್ಲಿ ಬೆನ್ನಟ್ಟಿದರೂ ಭಾರತದ ರನ್ರೇಟ್ ಪ್ಲಸ್ ಆಗಲಿದೆ. ಭಾರತ ತಂಡ ಜಿಂಬಾಬ್ವೆ ವಿರುದ್ಧ 60 ರನ್ಗಳಿಂದಷ್ಟೇ ಗೆದ್ದರೆ, ವಿಂಡೀಸ್ ವಿರುದ್ಧವೂ ಕನಿಷ್ಠ 64 ರನ್ ಅಂತರದಿಂದ ಗೆಲ್ಲಬೇಕಾಗುತ್ತದೆ.
ತಂದೆಯ ಗಂಭೀರ ಅನಾರೋಗ್ಯದಿಂದಾಗಿ ಮಂಗಳವಾರ ತುರ್ತಾಗಿ ಗ್ರೇಟರ್ ನೋಯ್ಡಾಗೆ ನಿರ್ಗಮಿಸಿದ್ದ ಎಡಗೈ ಬ್ಯಾಟರ್ ರಿಂಕು ಸಿಂಗ್, ಬುಧವಾರ ಸಂಜೆ ಚೆನ್ನೈನಲ್ಲಿ ಭಾರತ ತಂಡವನ್ನು ಮರಳಿ ಕೂಡಿಕೊಂಡಿದ್ದಾರೆ. ಇದರಿಂದ ಅವರು ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಗೈರಾಗುವ ಸಾಧ್ಯತೆ ದೂರವಾಗಿದೆ.
*24: ಜಿಂಬಾಬ್ವೆ ತಂಡ 24 ವರ್ಷಗಳ ಬಳಿಕ ಭಾರತವನ್ನು ಅದರದೇ ನೆಲದಲ್ಲಿ ಎದುರಿಸಲಿದೆ ಮತ್ತು ಭಾರತದಲ್ಲಿ ಭಾರತದ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. 2002ರ ಮಾರ್ಚ್ನಲ್ಲಿ ಕೊನೆಯದಾಗಿ ಏಕದಿನದಲ್ಲಿ ಭಾರತವನ್ನು ಭಾರತದಲ್ಲಿ ಎದುರಿಸಿತ್ತು.
*2: ಟಿ20 ವಿಶ್ವಕಪ್ನಲ್ಲಿ ಭಾರತ&ಜಿಂಬಾಬ್ವೆ ತಂಡಗಳು ಕೇವಲ ಎರಡನೇ ಬಾರಿ ಮುಖಾಮುಖಿ ಆಗುತ್ತಿವೆ. 2022ರ ಮೊದಲ ಮುಖಾಮುಖಿಯಲ್ಲಿ ಭಾರತ 71 ರನ್ಗಳಿಂದ ಗೆದ್ದಿತ್ತು.
ಚೆಪಾಕ್ನಲ್ಲಿ ನ್ಯೂಜಿಲೆಂಡ್-ಅಫ್ಘಾನಿಸ್ತಾನ ನಡುವಿನ ಪಂದ್ಯ ನಡೆದಿದ್ದ ಪಿಚ್ಅನ್ನೇ ಈ ಪಂದ್ಯಕ್ಕೆ ಬಳಸಲಾಗುತ್ತಿದೆ. ಆ ಪಂದ್ಯದಲ್ಲಿ ಅಫ್ಘಾನಿಸ್ತಾನ 180 ಪ್ಲಸ್ ಮೊತ್ತ ಪೇರಿಸಿದ್ದರೂ, ಕಿವೀಸ್ ಸರಾಗವಾಗಿಯೇ ಅದನ್ನು ಬೆನ್ನಟ್ಟಿತ್ತು. ಹೀಗಾಗಿ ಈ ಬಾರಿ ಭಾರತ ತಂಡವೂ ರನ್ಮಳೆ ಹರಿಸುವ ನಿರೀಕ್ಷೆ ಇಡಲಾಗಿದೆ. ದ. ಆಫ್ರಿಕಾ ಎದುರು ಮೊದಲ 3 ವಿಕೆಟ್ಗಳನ್ನು ಬೇಗನೆ ಕಬಳಿಸಿದರೂ, 187 ರನ್ಗಳ ಸವಾಲಿನ ಮೊತ್ತ ದಾಖಲಿಸಲು ಅವಕಾಶ ಬಿಟ್ಟುಕೊಟ್ಟ ತಪ್ಪನ್ನು ಭಾರತ ಮತ್ತೆ ಮರುಕಳಿಸಬಾರದು.