T20 Cricket: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಮಹಿಳೆಯರಿಗೆ ಮತ್ತೆ ಸೋಲು
ಬೆನೋನಿ: ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಭಾರತ ತಂಡ ಮಹಿಳೆಯರ ಟಿ20 ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಹಾಗೂ ಅಂತಿಮ ಪಂದ್ಯದಲ್ಲೂ 23 ರನ್ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಭಾರತದ ಸರಣಿ ಸೋಲಿನ ಅಂತರ 1-4ಕ್ಕೆ ಹಿಗ್ಗಿದೆ.
ವಿಲ್ಲೋಮೂರ್ ಪಾರ್ಕ್ನಲ್ಲಿ ಸೋಮವಾರ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ದ. ಆಫ್ರಿಕಾ ತಂಡ ನಾಯಕಿ ಲಾರಾ ವೊಲ್ವಾರ್ಡ್ (92*ರನ್, 56 ಎಸೆತ, 11 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ 6 ವಿಕೆಟ್ಗೆ 155 ರನ್ ಕಲೆಹಾಕಿತು. ರೇಣುಕಾ ಸಿಂಗ್ (21ಕ್ಕೆ 2), ಶ್ರೀಚರಣಿ (22ಕ್ಕೆ 2), ದೀಪ್ತಿ ಶರ್ಮ (37ಕ್ಕೆ 2) ಹರಿಣಗಳಿಗೆ ನಿಯಂತ್ರಣ ಹೇರಿದರು. ಪ್ರತಿಯಾಗಿ ಭಾರತ 38 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ ನಾಯಕಿ (Harmanpreet Kaur) ಹರ್ಮಾನ್ಪ್ರೀತ್ ಕೌರ್ (22), ಭಾರತಿ ಫುಲ್ಮಲಿ (40), ರಿಚಾ ಘೋಷ್ (25*) ಹೋರಾಟದ ಹೊರತಾಗಿಯೂ 8 ವಿಕೆಟ್ಗೆ 132 ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಸರಣಿಯಲ್ಲಿ ಒಟ್ಟು 330 ರನ್ ಬಾರಿಸಿದ ವೊಲ್ವಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಸ್ಮೃತಿ ಮಂದನಾ ಕೊನೇ ಪಂದ್ಯದಿಂದಲೂ ವಿಶ್ರಾಂತಿ ಪಡೆದರು. ಭಾರತದ ಮಹಿಳೆಯರು ಇನ್ನು ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ಮೇ 28ರಿಂದ ಇಂಗ್ಲೆಂಡ್ನಲ್ಲಿ 3 ಪಂದ್ಯಗಳ ಟಿ20 ಸರಣಿ ಆಡಲಿದ್ದಾರೆ.
ದ. ಆಫ್ರಿಕಾ: 6 ವಿಕೆಟ್ಗೆ 155 (ವೊಲ್ವಾರ್ಡ್ 92*, ಲುಸ್ 23, ಬ್ರಿಟ್ಸ್ 2, ಟೆಯಾನ್ 12, ಸಿನಾಲೊ 16*, ರೇಣುಕಾ 21ಕ್ಕೆ 2, ಶ್ರೀಚರಣಿ 22ಕ್ಕೆ 2, ದೀಪ್ತಿ 37ಕ್ಕೆ 2). ಭಾರತ: 8 ವಿಕೆಟ್ಗೆ 132(ಶೆಫಾಲಿ 4, ಅನುಷ್ಕಾ 17, ಜೆಮೀಮಾ 1, ಹರ್ಮಾನ್ಪ್ರೀತ್ 22, ಭಾರತಿ 40, ದೀಪ್ತಿ 8, ರಿಚಾ 25*, ಡಿ ಕ್ಲರ್ಕ್ 26ಕ್ಕೆ 2, ಮ್ಲಾಬಾ 15ಕ್ಕೆ 2).