ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ದ. ಆಫ್ರಿಕಾ ಸವಾಲು; ಗೆದ್ದರೆ ಸೆಮೀಸ್ ಹಾದಿ ಸುಗಮ!
ಮ್ಯಾಂಚೆಸ್ಟರ್: ಸತತ ಎರಡು ಜಯದೊಂದಿಗೆ 10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ನಲ್ಲಿ (ICC Women''s T20 World Cup) ಭರ್ಜರಿ ಆರಂಭ ಕಂಡಿರುವ ಭಾರತ ತಂಡ, ಕಳೆದ 2 ಆವೃತ್ತಿಯ ರನ್ನರ್ಅಪ್ ದ. ಆಫ್ರಿಕಾ ವಿರುದ್ಧ ಭಾನುವಾರ ಓಲ್ಡ್ ಟ್ರಾಫರ್ಡ್ನಲ್ಲಿ ಸೆಣಸಲಿದೆ. ಹರ್ಮಾನ್ಪ್ರೀತ್ ಕೌರ್ ಪಡೆ ಗೆಲುವಿನ ಹ್ಯಾಟ್ರಿಕ್ ಸಾಧಿಸಿದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ.
ಭಾರತ ಮೊದಲ 2 ಪಂದ್ಯಗಳಲ್ಲೂ ಬಲಿಷ್ಠ ಬ್ಯಾಟಿಂಗ್ ನಿರ್ವಹಣೆ ತೋರಿದ್ದು, ಪಾಕ್ ವಿರುದ್ಧ 64 ಮತ್ತು ನೆದರ್ಲೆಂಡ್ ವಿರುದ್ಧ 95 ರನ್ಗಳಿಂದ ಗೆಲುವು ಸಾಧಿಸಿದೆ. ಸ್ಮೃತಿ ಮಂದನಾ, ಶೆಫಾಲಿ ವರ್ಮ, ರಿಚಾ ಘೋಷ್ ದಿಟ್ಟ ಬ್ಯಾಟಿಂಗ್ನಿಂದ ಗಮನಸೆಳೆದಿದ್ದರೆ, ದೀಪ್ತಿ ಶರ್ಮ, ಶ್ರೀಚರಣಿ, ನಂದಿನಿ ಶರ್ಮ ಬೌಲಿಂಗ್ನಲ್ಲಿ ಮಿಂಚಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಗಾಯದಿಂದ ಹೊರಬಿದ್ದಿರುವುದು ಹಿನ್ನಡೆಯಾಗಿದ್ದು, ಅವರ ಸ್ಥಾನವನ್ನು ರಾಧಾ ಯಾದವ್ ತುಂಬುವ ನಿರೀಕ್ಷೆ ಇದೆ. ಏಕದಿನ ವಿಶ್ವಕಪ್ ತಾರೆ ಜೆಮೀಮಾ ರೋಡ್ರಿಗಸ್ (1, 19) ಮೊದಲ 2 ಪಂದ್ಯಗಳಲ್ಲಿ ರನ್ಬರ ಎದುರಿಸಿದ್ದು, ಈ ಬಾರಿ ಲಯಕ್ಕೆ ಮರಳುವ ತವಕದಲ್ಲಿದ್ದಾರೆ.ಆ
ಮತ್ತೊಂದೆಡೆ ಲಾರಾ ವೊಲ್ವಾರ್ಡ್ ಪಡೆ, ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತರೂ, ಪಾಕ್ ವಿರುದ್ಧದ 2ನೇ ಪಂದ್ಯದಲ್ಲಿ ಗೆದ್ದು ಲಯಕ್ಕೆ ಮರಳಿದೆ. ಹರಿಣಗಳಿಗೆ ಸೆಮೀಸ್ ಆಸೆ ಜೀವಂತ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅಗತ್ಯವೆನಿಸಿದೆ.
*200: ಹರ್ಮಾನ್ಪ್ರೀತ್ ಕೌರ್ಗೆ ಇದು 200ನೇ ಟಿ20 ಪಂದ್ಯವಾಗಿದೆ. ಅವರು ಪುರುಷ&ಮಹಿಳಾ ಕ್ರಿಕೆಟಿಗರಲ್ಲಿ ಈ ಸಾಧನೆ ಮಾಡಿದ ಮೊದಲಿಗರೆನಿಸಲಿದ್ದಾರೆ.
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.