world crown: ನಾಳೆ ಭಾರತ-ಇಂಗ್ಲೆಂಡ್ ಕಿರಿಯರ ಪ್ರಶಸ್ತಿ ಕಾದಾಟ: 6ನೇ ವಿಶ್ವ ಕಿರೀಟದ ನಿರೀಕ್ಷೆ
ಹರಾರೆ: ದಾಖಲೆ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಐಸಿಸಿ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಟೂರ್ನಿಯ ಅಜೇಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗಲಿದ್ದು, ನಿಕಟ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ.
ಸತತ ಆರು ಹಾಗೂ ಒಟ್ಟಾರೆ 10ನೇ ಬಾರಿ ಫೈನಲ್ ಪ್ರವೇಶಿಸಿರುವ ಭಾರತ ತಂಡ ಹಾಲಿ ಆವೃತ್ತಿಯ ಸೂಪರ್-ಸಿಕ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತ್ತು. ಎರಡೂ ತಂಡಗಳು ಒಂದೇ ಗುಂಪಿನಲ್ಲಿದ್ದರೂ, ಲೀಗ್‌ನಲ್ಲಿ ಗುಂಪಿನ ಅಗ್ರಸ್ಥಾನಿ ಆಗಿದ್ದರಿಂದ ಮುಖಾಮುಖಿ ಆಗಿರಲಿಲ್ಲ. 2022ರ ಆವೃತ್ತಿಯ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿಯೂ ಅದನ್ನೇ ಪುನರಾವರ್ತಿಸುವ ಹಂಬಲದಲ್ಲಿದೆ.
ಸೆಮಿಫೈನಲ್‌ನಲ್ಲಿ ದಾಖಲೆಯ ಚೇಸಿಂಗ್‌ನೊಂದಿಗೆ ಭಾರತ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಜತೆಗೆ ಆರಂಭಿಕ ಆರನ್ ಜಾರ್ಜ್ ಹಾಗೂ ನಾಯಕ ಆಯಷ್ ಮಹಾತ್ರೆ ಲಯಕ್ಕೆ ಮರಳಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. 14 ವರ್ಷದ ವೈಭವ್ ಸೂರ್ಯವಂಶಿ (264 ರನ್) ಮೂರು ಅರ್ಧಶತಕ ಸಹಿತ ಭಾರತ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಇಂಗ್ಲೆಂಡ್ ತಂಡವನ್ನು ಮಣಿಸಲು ಭಾರತ ತಂಡ ಸಂಘಟಿತ ನಿರ್ವಹಣೆ ತೋರುವುದು ಅಗತ್ಯ. ಹೆನಿಲ್ ಪಟೇಲ್ 11 ವಿಕೆಟ್‌ನೊಂದಿಗೆ ಭಾರತ ಪರ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್ ಎನಿಸಿದ್ದಾರೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೆಮೀಸ್‌ನಲ್ಲಿ ಮಣಿಸಿರುವ ಇಂಗ್ಲೆಂಡ್, ನಾಯಕ ಥಾಮಸ್ ರೆವ್ (299 ರನ್), ಬೆನ್ ಮೇಯ್ಸ (399) ಮೇಲೆ ಹೆಚ್ಚು ಅವಲಂಬಿತವಾಗಿದೆ. ಆಂಗ್ಲರು 1998ರಲ್ಲಿ ಏಕೈಕ ಬಾರಿ ಕಿರಿಯರ ವಿಶ್ವಕಪ್ ಜಯಿಸಿದ್ದರು. ಆರಂಭಿಕರಿಬ್ಬರ ಅಸ್ಥಿರ ನಿರ್ವಹಣೆ ಹಿನ್ನಡೆ ತಂದಿದ್ದು, ಬೌಲಿಂಗ್‌ನಲ್ಲಿ ಮನ್ಸಿ ಲಮ್ಸಡೆನ್ (15 ವಿಕೆಟ್) ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಎನಿಸಿದ್ದಾರೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್