ಲಾರ್ಡ್ಸ್‌ನಲ್ಲಿ ಭಾರತ-ಇಂಗ್ಲೆಂಡ್ ನಿರ್ಣಾಯಕ ಫೈಟ್: ಹೊಸ ಮೈಲಿಗಲ್ಲು ಸೃಷ್ಟಿಸಲಿರುವ ರೋ-ಕೊ ಜೋಡಿ! 
ಕ್ರಿಕೆಟ್

ಲಾರ್ಡ್ಸ್‌ನಲ್ಲಿ ಭಾರತ-ಇಂಗ್ಲೆಂಡ್ ನಿರ್ಣಾಯಕ ಫೈಟ್: ಹೊಸ ಮೈಲಿಗಲ್ಲು ಸೃಷ್ಟಿಸಲಿರುವ ರೋ-ಕೊ ಜೋಡಿ!

ಲಂಡನ್: ಮಾಜಿ ನಾಯಕ ರೋಹಿತ್ ಶರ್ಮ ನಿವೃತ್ತಿ ವದಂತಿಗಳ ನಡುವೆ ಭಾರತ ತಂಡ ಹಾಲಿ ಯುಕೆ ಪ್ರವಾಸದಲ್ಲಿ ಮೊದಲ ಸರಣಿ ಜಯದ ನಿರೀಕ್ಷೆಯಲ್ಲಿದೆ. ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಸರಣಿಯ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. 3 ಪಂದ್ಯಗಳ ಸರಣಿ ಸದ್ಯ 1-1 ಸಮಬಲದಲ್ಲಿದೆ.
ಮುಂದಿನ ವರ್ಷದ ಐಸಿಸಿ ಏಕದಿನ ವಿಶ್ವಕಪ್‌ಗೆ 15 ತಿಂಗಳು ಬಾಕಿಯಿರುವಂತೆ ಆಯ್ಕೆ ಸಮಿತಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಯೋಜನೆ ರೂಪಿಸಿದೆ. ಆದರೆ, ಲಾರ್ಡ್ಸ್ ಪಂದ್ಯ ‘ರೋಹಿತ್ ಪಾಲಿಗೆ ಕೊನೇ ಅಂತಾರಾಷ್ಟ್ರೀಯ ಪಂದ್ಯವಲ್ಲ’ ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಟೀಮ್ ಇಂಡಿಯಾ ತನ್ನ ಮುಂದಿನ ಏಕದಿನ ಸರಣಿಯನ್ನು ಸೆಪ್ಟೆಂಬರ್‌ನಲ್ಲಿ ಆಡುವುದರಿಂದ, ಈ ಪಂದ್ಯ 39 ವರ್ಷದ ರೋಹಿತ್ ಪಾಲಿಗೂ ನಿರ್ಣಾಯಕ ಎನಿಸಿದೆ.
ರೋ-ಕೊಗೆ 400ನೇ ಪಂದ್ಯ
ಲಾರ್ಡ್ಸ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ-ರೋಹಿತ್ ಶರ್ಮ ಜತೆಯಾಗಿ ಭಾರತ ಪರ 400 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಒಂದೇ ದೇಶದ ಪರ ಜತೆಯಾಗಿ ಇಷ್ಟು ಪಂದ್ಯ ಆಡಿದ ವಿಶ್ವದ 6ನೇ ಜೋಡಿ ಎನಿಸಲಿದ್ದಾರೆ.
ಶ್ರೀಲಂಕಾದ ಸಂಗಕ್ಕರ-ಜಯವರ್ಧನೆ (550), ದಿಲ್ಶಾನ್-ಜಯವರ್ಧನೆ (426), ಸಂಗಕ್ಕರ-ದಿಲ್ಶಾನ್ (418), ಜಯಸೂರ‌್ಯ-ಮುರಳೀಧರನ್ (408) ಹಾಗೂ ದ.ಆಫ್ರಿಕಾದ ಜಾಕ್ ಕಾಲಿಸ್-ಮಾರ್ಕ್ ಬೌಷರ್ (407) ಅತಿ ಹೆಚ್ಚು ಪಂದ್ಯಗಳನ್ನಾಡಿದ ಜೋಡಿಗಳು. ದ್ರಾವಿಡ್-ತೆಂಡುಲ್ಕರ್ (391) ಟೀಮ್ ಇಂಡಿಯಾ ಪರ ಒಟ್ಟಾಗಿ ಗರಿಷ್ಠ ಪಂದ್ಯಗಳನ್ನಾಡಿರುವ 2ನೇ ಜೋಡಿ ಎನಿಸಿದ್ದಾರೆ.