ತಿಲಕ್​ ವರ್ಮ ಏಜೆನ್ಸಿ
ಕ್ರಿಕೆಟ್

ಅಂತಿಮ ಚತುರ್ದಿನ ಪಂದ್ಯದಲ್ಲಿ ಭಾರತ ಎ ಮೇಲುಗೈ

ಧ್ರುವ ಜುರೆಲ್​ ಪಡೆ ಸದ್ಯ 428 ರನ್​ ಮುನ್ನಡೆಯಲ್ಲಿದೆ.

ಲಿಂಕಾನ್​: ಧ್ರುವ ಜುರೆಲ್​ (71 ರನ್​, 95 ಎಸೆತ, 9 ಬೌಂಡರಿ, 2 ಸಿಕ್ಸರ್​), ತಿಲಕ್​ ವರ್ಮ (81*ರನ್​, 164 ಎಸೆತ, 5 ಬೌಂಡರಿ, 2 ಸಿಕ್ಸರ್​), ವಾಷಿಂಗ್ಟನ್​ ಸುಂದರ್​ (50* ರನ್​, 107 ಎಸೆತ, 2 ಬೌಂಡರಿ) ಅರ್ಧಶತಕದಾಟ ಮತ್ತು ಕನ್ನಡಿಗ ಪ್ರಸಿದ್ಧಕೃಷ್ಣ (12ಕ್ಕೆ 2) ಹೊಸ ಚೆಂಡಿನಲ್ಲಿ ನಡೆಸಿದ ಬಿಗಿ ದಾಳಿಯ ನೆರವಿನಿಂದ ಭಾರತ ಎ ತಂಡ ಆತಿಥೇಯ ನ್ಯೂಜಿಲೆಂಡ್​ ಎ ವಿರುದ್ಧದ 3ನೇ ಹಾಗೂ ಅಂತಿಮ ಚತುರ್ದಿನ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಬೆರ್ಟ್​ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ 2 ವಿಕೆಟ್​ಗೆ 227 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಭಾರತ ಎ ತಂಡ, ಚಹಾ ವಿರಾಮದ ಬಳಿಕ 146 ಓವರ್​ಗಳಲ್ಲಿ 5 ವಿಕೆಟ್​ಗೆ 464 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಪ್ರತಿಯಾಗಿ ನ್ಯೂಜಿಲೆಂಡ್​ ಎ ಪ್ರಸಿದ್ಧಕೃಷ್ಣ ನೀಡಿದ ಆರಂಭಿಕ ಆಘಾತದಿಂದ ದಿನದಂತ್ಯಕ್ಕೆ 14 ಓವರ್​ಗಳಲ್ಲಿ 2 ವಿಕೆಟ್​ಗೆ 36 ರನ್​ ಗಳಿಸಿ ಸಂಕಷ್ಟದಲ್ಲಿದೆ. ಧ್ರುವ ಜುರೆಲ್​ ಪಡೆ ಸದ್ಯ 428 ರನ್​ ಮುನ್ನಡೆಯಲ್ಲಿದೆ.

ಕ್ರಮವಾಗಿ 77 ಮತ್ತು 12 ರನ್​ಗಳಿಂದ ದಿನದಾಟ ಆರಂಭಿಸಿದ ಸಾಯಿ ಸುದರ್ಶನ್​ ಮತ್ತು ಧ್ರುವ ಜುರೆಲ್​ ಬೇಗನೆ ಬೇರ್ಪಟ್ಟರು. ಸುದರ್ಶನ್​ 88 ರನ್​ಗೆ ಔಟಾಗಿ ಶತಕವಂಚಿತರಾದರು. ಬಳಿಕ ಜುರೆಲ್​, ತಿಲಕ್​ ವರ್ಮ ಬೆಂಬಲದೊಂದಿಗೆ ಅರ್ಧಶತಕ ಪೂರೈಸಿ ನಿರ್ಗಮಿಸಿದರು. ಬಳಿಕ ರವೀಂದ್ರ ಜಡೇಜಾ-ತಿಲಕ್​ 5ನೇ ವಿಕೆಟ್​ಗೆ 123 ಎಸೆತಗಳಲ್ಲಿ 44 ರನ್​ ಸೇರಿಸಿದರು. ಜಡೇಜಾ ಔಟಾದ ಬಳಿಕ ತಿಲಕ್​, ವಾಷಿಂಗ್ಟನ್​ ಜತೆಗೂಡಿ ಮುರಿಯದ 6ನೇ ವಿಕೆಟ್​ಗೆ 203 ರನ್​ಗಳಲ್ಲಿ 114 ರನ್​ ಜತೆಯಾಟವಾಡಿ ತಂಡದ ಮೊತ್ತವನ್ನು 450ರ ಗಡಿ ದಾಟಿಸಿದರು.

ಭಾರತ ಎ: 146 ಓವರ್​ಗಳಲ್ಲಿ 5 ವಿಕೆಟ್​ಗೆ 464 ಡಿಕ್ಲೇರ್​ (ಸುದರ್ಶನ್​ 88, ಜುರೆಲ್​ 71, ತಿಲಕ್​ 81*, ಜಡೇಜಾ 25, ವಾಷಿಂಗ್ಟನ್​ 50*, ಗಿಬ್ಸನ್​ 73ಕ್ಕೆ 2, ಮೆಕ್​ಕೇ 45ಕ್ಕೆ 1), ನ್ಯೂಜಿಲೆಂಡ್​ ಎ: 14 ಓವರ್​ಗಳಲ್ಲಿ 2 ವಿಕೆಟ್​ಗೆ 36 (ಹೀಫಿ 19, ಗಿಬ್ಸನ್​ 1*, ಪ್ರಸಿದ್ಧಕೃಷ್ಣ 12ಕ್ಕೆ 2).