ಸಿಕ್ಸರ್ ಇಲ್ಲದೆ ಸಿಡಿದ ವೈಭವ್: ಬೌಂಡರಿಗಳ ಮೂಲಕವೇ ಅಫ್ಘಾನ್ ಬೌಲರ್‌ಗಳ ಬೆವರಿಳಿಸಿದ ವಂಡರ್ ಕಿಡ್! Vaibhav Sooryavanshi
- ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ 2026ರ ತ್ರಿಕೋನ 'ಎ' ಸರಣಿಯ ಎರಡನೇ ಪಂದ್ಯ
- ಅಫ್ಘಾನಿಸ್ತಾನ ಎ ವಿರುದ್ಧ ಸರಣಿಯ ಎರಡನೇ ಗೆಲುವಿಗಾಗಿ ಸೆಣಸಾಡುತ್ತಿರುವ ಭಾರತ ಎ ತಂಡ
- ತಮ್ಮ ಚುರುಕಾದ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದ ಯುವ ಬ್ಯಾಟಿಂಗ್ ಅಸ್ತ್ರ ವೈಭವ್ ಸೂರ್ಯವಂಶಿ
- ಕೇವಲ 22 ಎಸೆತಗಳಲ್ಲಿ 200ರ ಸ್ಟ್ರೈಕ್ ರೇಟ್‌ನಲ್ಲಿ ಬಿರುಸಿನ 44 ರನ್ ಬಾರಿಸಿ ಔಟಾದ ವಂಡರ್ ಕಿಡ್
Vaibhav Sooryavanshi: ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ 2026ರ ತ್ರಿಕೋನ 'ಎ' ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ವಿರುದ್ಧ ಭಾರತ ಎ ತಂಡದ ಯುವ ಬ್ಯಾಟಿಂಗ್ ಅಸ್ತ್ರ ವೈಭವ್ ಸೂರ್ಯವಂಶಿ ಚುರುಕಾದ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ.
ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 12 ಎಸೆತಗಳಲ್ಲಿ 14 ರನ್ ಗಳಿಸಿ ಬೇಗನೇ ಔಟಾಗಿ ನಿರಾಸೆ ಮೂಡಿಸಿದ್ದ ವೈಭವ್, ಈ ಪಂದ್ಯದಲ್ಲಿ ಅಫ್ಘಾನ್ ಬೌಲರ್‌ಗಳ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೇವಲ 22 ಎಸೆತಗಳನ್ನು ಎದುರಿಸಿದ ಅವರು 200ರ ಸ್ಟ್ರೈಕ್ ರೇಟ್‌ನಲ್ಲಿ ಬಿರುಸಿನ 44 ರನ್ ಬಾರಿಸಿ ಅಬ್ದುಲ್ಲಾ ಅಹ್ಮದ್‌ಜೈ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ವೈಭವ್ ಸೂರ್ಯವಂಶಿ ಅವರ ಈ 44 ರನ್‌ಗಳ ಇನ್ನಿಂಗ್ಸ್‌ನ ಅತ್ಯಂತ ರೋಚಕ ಸಂಗತಿ ಏನೆಂದರೆ, ಅವರ ಬ್ಯಾಟ್‌ನಿಂದ ಒಂದೇ ಒಂದು ಸಿಕ್ಸರ್ ಕೂಡ ಬರಲಿಲ್ಲ! ಐಪಿಎಲ್ನಲ್ಲಿ ಸಿಕ್ಸರ್ಗಳ ಸುರಿಮಳೆಗೈಯುತ್ತಿದ್ದ ವೈಭವ್ ಇಂದು 44 ರನ್ ಬಾರಿಸಿದರೂ ಒಂದೇ ಒಂದು ಸಿಕ್ಸರ್ ಬಾರಿಸಲಿಲ್ಲ. ಮೈದಾನದ ನಾಲ್ಕೂ ಮೂಲೆಗಳಿಗೆ ಕೇವಲ ಬೌಂಡರಿಗಳನ್ನು ಬಾರಿಸುವ ಮೂಲಕವೇ ರನ್ ಕಲೆಹಾಕಿದರು. ಅಫ್ಘಾನ್ ವೇಗಿಗಳ ಲೈನ್ ಮತ್ತು ಲೆಂತ್ ಅನ್ನು ಸುಲಭವಾಗಿ ಅರಿತ ವೈಭವ್, ಬರೋಬ್ಬರಿ 9 ಭರ್ಜರಿ ಬೌಂಡರಿಗಳನ್ನು ಸಿಡಿಸಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದ್ದಾರೆ.
ಸಿಕ್ಸರ್ ಬಾರಿಸದೆ, ಕೇವಲ ಬೌಂಡರಿ ಹಾಗೂ ಸಿಂಗಲ್ಸ್‌ಗಳ ಮೂಲಕವೇ ಕೇವಲ 22 ಎಸೆತಗಳಲ್ಲಿ 44 ರನ್ ಚಚ್ಚಿದ ವೈಭವ್ ಅವರ ಈ ಕ್ಲಾಸಿಕ್ ಇನ್ನಿಂಗ್ಸ್ ಅಭಿಮಾನಿಗಳನ್ನು ರಂಜಿಸಿತು. ಅಬ್ದುಲ್ಲಾ ಅಹ್ಮದ್‌ಜೈ ಎಸೆದ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಅರ್ಧಶತಕದ ಸನಿಹದಲ್ಲಿ ಔಟಾಗುವ ಮೂಲಕ ಅವರ ಆಟ ಕೊನೆಗೊಂಡಿತು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾರತ ಎ ತಂಡ 15 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿದೆ. 46 ಎಸೆತಗಳಲ್ಲಿ 59 ರನ್ಗಳಿಸಿರುವ ಪ್ರಭ್ಸಿಮ್ರಾನ್ ಸಿಂಗ್ ಕ್ರೀಸ್ನಲ್ಲಿ ನೆಲೆಯೂರಿದ್ದರೆ, ರುತುರಾಜ್ ಗಾಯಕ್ವಾಡ್ 13 ರನ್ ಗಳಿಸಿ, ಪ್ರಭ್ಸಿಮ್ರಾನ್ಗೆ ಸಾಥ್ ನೀಡುತ್ತಿದ್ದಾರೆ., (ಏಜೆನ್ಸೀಸ್).