ಟಿ20 ಸರಣಿ ಗೆದ್ದ ಭಾರತ ತಂಡ  
ಕ್ರಿಕೆಟ್

ಹಾರ್ದಿಕ್​, ತಿಲಕ್​ ಸ್ಫೋಟಕ ಬ್ಯಾಟಿಂಗ್​! ಸ್ಪಿನ್ 'ಚಕ್ರವರ್ತಿ' ಕಮಾಲ್​; ದ. ಆಫ್ರಿಕಾ ಎದುರು ಟಿ20 ಸರಣಿ ಗೆದ್ದ ಭಾರತ | IND vs SA T20

ಪ್ರಮುಖ ಮುಖ್ಯಾಂಶಗಳು

  • 5ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
  • 30 ರನ್​ಗಳಿಂದ ದಕ್ಷಿಣ ಆಫ್ರಿಕಾ ಎದುರು ಪಂದ್ಯ ಗೆದ್ದ ಭಾರತ
  • 3-1 ಅಂತರದಲ್ಲಿ ಟಿ20 ಸರಣಿ ಗೆದ್ದು ಬೀಗಿದ ಟೀಮ್ ಇಂಡಿಯಾ
IND vs SA T20: ನಿನ್ನೆ (ಡಿ.19) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ಲಭಿಸಿತು.
30 ರನ್‌ಗಳಿಂದ ಹರಿಣರ ಪಡೆ ಎದುರು ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದು ಬೀಗಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಮಾತ್ರ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದರು. ಇದು ತಂಡದ ಗೆಲುವನ್ನು ಇನ್ನೂ ಸುಲಭವಾಗಿಸಿತು. ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಗರಿಷ್ಠ ಮೊತ್ತವನ್ನೇ ಕಲೆಹಾಕಿತು. 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಭಾರತ 231 ರನ್ ಗಳಿಸಿತು. 232 ರನ್‌ಗಳ ಬೃಹತ್​ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳಿಸಲಷ್ಟೇ ಶಕ್ತವಾಯಿತು.
ಟೀಮ್ ಇಂಡಿಯಾ ಪರ ಸ್ಪಿನ್​ ದಾಳಿ ನಡೆಸಿದ ವರುಣ್ ಚಕ್ರವರ್ತಿ ಒಟ್ಟು 4 ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಜಸ್ಪ್ರಿತ್​ ಬುಮ್ರಾ 2, ಅರ್ಶ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ತಂಡದ ಪರ ತಿಲಕ್ ವರ್ಮಾ (73) ಮತ್ತು ಹಾರ್ದಿಕ್ ಪಾಂಡ್ಯ (63) ಸ್ಫೋಟಕ ಅರ್ಧಶತಕ ಬಾರಿಸಿದರು. ವಿಶೇಷವಾಗಿ ಪಾಂಡ್ಯ ಬ್ಯಾಟಿಂಗ್ ಮೈದಾನದಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಾರ್ದಿಕ್​, ತಮ್ಮ ಮಿಂಚಿನ ಬ್ಯಾಟಿಂಗ್‌ನಿಂದ ಟೀಮ್ ಇಂಡಿಯಾದ ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಹೆಚ್ಚು ಕೊಡುಗೆ ನೀಡಿದರು.