- ಇದೇ ಜು.23ರಿಂದ ಜಿಂಬಾಬ್ವೆ-ಭಾರತ ನಡುವೆ 3 ಪಂದ್ಯಗಳ ಟಿ20 ಸರಣಿ
- ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಜಿಂಬಾಬ್ವೆ ನಾಯಕ ಎಚ್ಚರಿಕೆ
IND vs ZIM: ಇತ್ತೀಚೆಗಷ್ಟೇ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಹೀನಾಯವಾಗಿ ಸೋತ ಶ್ರೇಯಸ್ ಅಯ್ಯರ್ ಪಡೆ ಸದ್ಯ ಭಾರಿ ಮುಖಭಂಗ ಅನುಭವಿಸಿದೆ. ಒಟ್ಟು 6 ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾಗೆ ಇದೀಗ ಜಿಂಬಾಬ್ವೆ ತಂಡದ ನಾಯಕ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವಕಪ್ ಗೆದ್ದ ಚಾಂಪಿಯನ್ಸ್ ತಂಡಕ್ಕೆ ಕಳೆದ ಸರಣಿಗಳಲ್ಲಿ ಗೆಲುವು ಸಾಧಿಸುವುದು ಕಠಿಣವಾಗಿದೆ. ಸೂರ್ಯಕುಮಾರ್ ಯಾದವ್ ಬದಲಿಗೆ ಟಿ20 ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಶ್ರೇಯಸ್ ಅಯ್ಯರ್ ತಮ್ಮ ಮೊದಲ ನಾಯಕತ್ವದ ಪಂದ್ಯಗಳಲ್ಲೇ ಭಾರಿ ಮುಖಭಂಗ ಅನುಭವಿಸಿದ್ದಾರೆ. ಐರ್ಲೆಂಡ್ ವಿರುದ್ಧ ಎರಡು ಮತ್ತು ಇಂಗ್ಲೆಂಡ್‌ನಲ್ಲಿ ನಾಲ್ಕು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ, ಇದೇ ಜು.23ರ ಗುರುವಾರದಿಂದ ಜಿಂಬಾಬ್ವೆಯಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಈ ಸರಣಿಯ ಆರಂಭಕ್ಕೂ ಮೊದಲೇ ಪರೋಕ್ಷವಾಗಿ ಟೀಮ್ ಇಂಡಿಯಾಗೆ ಕಿಚಾಯಿಸಿರುವ ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ, ನಮ್ಮ ತಂಡವನ್ನು ಅಳೆಯುವಂತಿಲ್ಲ. ಇಲ್ಲಿ ಒನ್ ಸೈಡೆಡ್ ಆಗುವ ಮಾತೇ ಇಲ್ಲ. ಎರಡೂ ತಂಡಗಳು ಕಠಿಣ ಹೋರಾಟ ನಡೆಸಲಿದೆ. ಭಾರತೀಯ ತಂಡವು ಪ್ರಸ್ತುತ ಬದಲಾವಣೆಯ ಹಂತದಲ್ಲಿದ್ದು, ಎರಡೂ ತಂಡಗಳಿಗೆ ಸಮಾನ ಅವಕಾಶಗಳಿವೆ ಎಂದಿದ್ದಾರೆ.
ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸಾಧಿಸಿದ ಗೆಲುವುಗಳು ನಮ್ಮ ತಂಡದಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿದೆ. ಭಾರತವನ್ನು ಸೋಲಿಸಲು ನಮ್ಮಲ್ಲಿ ಒಳ್ಳೆಯ ಪ್ಲ್ಯಾನ್ಗಳಿವೆ ಎಂದರು. ಇದೇ ಸಮಯದಲ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿ ಸ್ಫೋಟಕ ಆರಂಭ ನೀಡಿದ್ದೇ ಆದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು 'ಜನರೇಷನ್ ಬ್ಯಾಟರ್' ಎಂದು ರಾಜಾ ಮೆಚ್ಚಿ ಮಾತನಾಡಿದ್ದಾರೆ.
ಈ ಸರಣಿಯಿಂದ ಸಂಜು ಸ್ಯಾಮ್ಸನ್ ಹೊರಗುಳಿದಿದ್ದು, ಐಪಿಎಲ್ 2026ರ ಪಂಜಾಬ್ ಕಿಂಗ್ಸ್ ಪರ ಮಿಂಚಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪ್ರಭ್ಸಿಮ್ರನ್ ಸಿಂಗ್ ಅವರನ್ನು ತಂಡದಲ್ಲಿ ಹೆಸರಿಸಲಾಗಿದೆ. ಆಯ್ಕೆಗಾರರು ಮೊದಲ ಬಾರಿಗೆ ವೇಗದ ಬೌಲರ್‌ಗಳಾದ ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಸ್ಪಿನ್ನರ್ ಹರ್ಷ್ ದುಬೆಗೆ ಸ್ಥಾನ ನೀಡಿದ್ದಾರೆ. ವರುಣ್ ಚಕ್ರವರ್ತಿ ಗಾಯಗೊಂಡ ಹಿನ್ನಲೆ ರವಿ ಬಿಷ್ಣೋಯಿ ತಂಡಕ್ಕೆ ಮರಳಿದ್ದಾರೆ,(ಏಜೆನ್ಸೀಸ್).