ಕೊನೆಯ ಸೂಪರ್-8 ಪಂದ್ಯ ಗೆದ್ದ ಭಾರತ
- ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಸೂಪರ್-8 ಪಂದ್ಯ
- ವಿಂಡೀಸ್ ನೀಡಿದ 196 ರನ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ
- ಫಲಿಸಿದ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ
IND vs WI: ಇಂದು (ಮಾ.01) ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ ಸೂಪರ್-8 ಹಾಗೂ ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಸಂಜು ಸ್ಯಾಮ್ಸನ್ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ ಪಂದ್ಯ ಗೆದ್ದ ಭಾರತ ಕಡೆಗೂ ತನ್ನ ಸೆಮೀಸ್ ಕನಸನ್ನು ಈಡೇರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ವಿಂಡೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ಗಿಳಿದ ವೆಸ್ಟ್ ಇಂಡೀಸ್ ದೈತ್ಯರು, 20 ಓವರ್ನಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೂರ್ಯ ಪಡೆಗೆ, ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಇನ್ನಿಂಗ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು.ಚೇಸಿಂಗ್ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಸ್ಯಾಮ್ಸನ್ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ವಿಶೇಷ.
ಇದೇ ಸಮಯದಲ್ಲಿ ಕೇವಲ 10 ರನ್ಗೆ ಪೆವಿಲಿಯನ್ ಹಾದಿ ಹಿಡಿದ ಸ್ಫೋಟಕ ಎಡಗೈ ಬ್ಯಾಟರ್ಗಳಾದ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರನ್ನು ಮತ್ತೊಮ್ಮೆ ಭಾರೀ ನಿರಾಶೆಗೊಳಿಸಿದರು. ಉಳಿದಂತೆ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ಸಂಜು, ಇಡೀ ಪಂದ್ಯದ ಪೂರ ಕೂಲ್ ಆಗಿಯೇ ಚೇಸ್ ಮಾಡಿದ್ದು ನಿಜಕ್ಕೂ ರೋಮಾಂಚಕಕಾರಿ ಆಗಿತ್ತು. ಕಡೆಯ 2 ಓವರ್ನಲ್ಲಿ ಸ್ಯಾಮ್ಸನ್ ಮೇಲಿದ್ದ ಒತ್ತಡವನ್ನು ಇಳಿಸಿದ್ದೇ ಶಿವಂ ದುಬೆ ಅವರ ಎರಡು ಬೌಂಡರಿಗಳು.
ಸಂಜು ಅಬ್ಬರಕ್ಕೆ ಕೊಚ್ಚಿಹೋದ ವಿಂಡೀಸ್
ಕೇವಲ 50 ರನ್ಗೆ 97 ರನ್ ಬಾರಿಸಿದ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದ ರೋಚಕ ಗೆಲುವಿನ ರೂವಾರಿ. ಈ ಅದ್ಭುತ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿವೆ. ತನ್ನ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವನ್ನು ಸೆಮಿಫೈನಲ್ಗೆ ಕೊಂಡೊಯ್ದ ಸಂಜುಗೆ ಇಡೀ ಭಾರತೀಯ ಕ್ರಿಕೆಟ್ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.