ಭಾರತ ತಂಡd ಹೆಡ್​ಕೋಚ್​, ನಾಯಕ ಸೂರ್ಯಕುಮಾರ್ ಯಾದವ್ 
ಕ್ರಿಕೆಟ್

ಈತ ಇದ್ದಿದ್ರೆ ಮ್ಯಾಚ್ ಸೋಲ್ತಿರಲಿಲ್ಲ! ಕ್ಯಾಪ್ಟನ್​, ಹೆಡ್​ಕೋಚ್​ ಮಾಡಿದ ಆ ಒಂದು ಮಿಸ್ಟೇಕ್​ ಇಷ್ಟಕ್ಕೆಲ್ಲ ಕಾರಣ? | IND vs SA

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಸೋಲಿಗೆ ಇದೂ ಒಂದು ಕಾರಣ
  • ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಿಂದ ಅಕ್ಸರ್ ಪಟೇಲ್​ ಹೊರಗೆ
  • ಅಕ್ಸರ್​ ಪಟೇಲ್​ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್​ ಬೇಕಿತ್ತಾ? ಎಂಬ ಪ್ರಶ್ನೆ
IND vs SA: ನಿನ್ನೆ (ಫೆ.22) ಅಹಮದಾಬಾದ್​ ಕ್ರೀಡಾಂಗಣದಲ್ಲಿ ನಡೆದ ಸೂಪರ್​-8 ಹಂತದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿತು. 76 ರನ್​ಗಳಿಂದ ಮಕಾಡೆ ಮಲಗಿದ ಟೀಮ್ ಇಂಡಿಯಾ ವಿರುದ್ಧ ಇದೀಗ ಭಾರತದ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಸರಣಿ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ. ಸತತ ಗೆಲುವುಗಳೊಂದಿಗೆ ಹೊಸ ಹುರುಪಿನಲ್ಲಿದ್ದ ಭಾರತಕ್ಕೆ ಹರಿಣರ ಪಡೆಯ ಎದುರು ಸೋತಿದ್ದು ಸದ್ಯ ಭಾರಿ ಆಘಾತ ನೀಡಿದೆ. ಇದು ಸಾಲು ಸಾಲು ಟೀಕೆ, ವ್ಯಂಗ್ಯ ಮತ್ತು ಲೇವಡಿಗಳಿಗೆ ಕಾರಣವಾಗಿದೆ. ಪಾಕಿಸ್ತಾನದ ಕೈಲಾಗದ ಆಟಗಾರರು ಈಗ ಟೀಮ್ ಇಂಡಿಯಾ ನೋಡಿ ನಾಲಿಗೆ ಹರಿಬಿಡುವಂತಾಗಿದೆ. ಇದಕ್ಕೆ ಕಾರಣ, ಕೇವಲ ಸೋಲಲ್ಲ! ಹೀನಾಯ ಸೋಲು ಎಂಬುದು ಇಲ್ಲಿ ಗಮನಾರ್ಹ.
ದಕ್ಷಿಣ ಆಫ್ರಿಕಾ ಒಂದು ಬಲಿಷ್ಠ ತಂಡ ಎಂಬುದು ಟೂರ್ನಿಯ ಎಲ್ಲ ತಂಡಗಳಿಗೂ ಗೊತ್ತಿದೆ. ಇದು ಕ್ರಿಕೆಟ್​ ಪ್ರಿಯರಿಗೂ ಗೊತ್ತಿದ್ದ ಸಂಗತಿಯೇ. ಹೀಗಿದ್ದಾಗ, ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಯೂನಿಟ್​ ಸಿದ್ಧಪಡಿಸಬೇಕಿದ್ದ ಜವಾಬ್ದಾರಿ ಟೀಮ್ ಮ್ಯಾನೇಜ್​ಮೆಂಟ್​ ಅಂದರೆ ಹೆಡ್​ಕೋಚ್ ಗೌತಮ್ ಗಂಭೀರ್​ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರದ್ದು. ಓಪನಿಂಗ್​ ಯಾರನ್ನು ಇಳಿಸಬೇಕು ಎಂಬುದರಿಂದ ಹಿಡಿದು ಮಧ್ಯಮ ಕ್ರಮಾಂಕದಲ್ಲಿ ಯಾರೆಲ್ಲ ಬರಬೇಕು ಮತ್ತು ಬೌಲಿಂಗ್​ನಲ್ಲಿ ಆಲ್​ರೌಂಡರ್​ಗಳ ಪಾತ್ರ ಎಷ್ಟು ಮುಖ್ಯ ಎಂಬ ಅರಿವಿರಬೇಕಿತ್ತು. ಆದ್ರೆ, ಈ ಪಂದ್ಯದಲ್ಲಿ ಆಗಿದ್ದೇ ಉಲ್ಟಾ!
ಈ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಲ್​ರೌಂಡರ್ ಆಗಿ ಹೆಚ್ಚಿನ ವಿಕೆಟ್​ ಮತ್ತು ರನ್​ಗಳನ್ನು ಕಲೆಹಾಕಿರುವುದೇ ಅಕ್ಸರ್​ ಪಟೇಲ್. ತಂಡದ ಉಪನಾಯಕನಾಗಿ ಕಣಕ್ಕಿಳಿಯುವ ಅಕ್ಸರ್​ರನ್ನು ದಕ್ಷಿಣ ಆಫ್ರಿಕಾ ಪಂದ್ಯದಿಂದ ಕೈಬಿಟ್ಟಿದ್ದೇ ಟೀಮ್ ಮ್ಯಾನೇಜ್​ಮೆಂಟ್ ಮಾಡಿದ ಮೊದಲ ಮಿಸ್ಟೇಕ್​. ಅಲ್ಲಿಂದ, ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್​ ಆಡುವುದೇ ಬೆಸ್ಟ್​ ಎಂದು ಭಾವಿಸಿ, ಅಕ್ಸರ್ ಸ್ಥಾನಕ್ಕೆ ಆಡಿಸಿದ್ದು ನಿಜಕ್ಕೂ ದುರಂತ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ರೆಕಾರ್ಡ್​ ಇರುವುದೇ ಅಕ್ಸರ್​ ಪಟೇಲ್​ ಹೆಸರಿನಲ್ಲಿ. ಹೀಗಿದ್ದಮೇಲೆ, ಒಬ್ಬ ತಂಡದ ಉಪನಾಯಕ ಹಾಗೂ ಅತ್ಯುತ್ತಮ ಆಲ್​ರೌಂಡರ್​ ಅನ್ನು ಕೂರಿಸಿ, ಸುಂದರ್​ರನ್ನು ಆಡಿಸಿದ್ದು ಹೀನಾಯ ಸೋಲಿಗೆ ಒಂದು ಮುಖ್ಯ ಕಾರಣವಾಯಿತು ಎಂಬುದರಲ್ಲಿ ಅನುಮಾನವಿಲ್ಲ.
ಈ ಟಿ20 ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಆಡಿದ ಅಕ್ಸರ್​ ಪಟೇಲ್​, ಆಲ್​ರೌಂಡರ್​ ಆಗಿ ಉತ್ತಮ ಇನ್ನಿಂಗ್ಸ್​ ನೀಡಿದರು. ಸ್ಪಿನ್ನರ್​ ಆಗಿ 6 ಬಹುಮುಖ್ಯ ವಿಕೆಟ್​ಗಳನ್ನು ಕಬಳಿಸಿದ ಪಟೇಲ್​, ಗ್ರೂಪ್​ ಸ್ಟೇಜ್​ನ ಕೊನೆಯ ನೆದರ್​ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗುಳಿದರು. ಇದು ಅಷ್ಟು ದೊಡ್ಡ ಪರಿಣಾಮ ಬೀರಲಿಲ್ಲ. ಆದರೆ, ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಿಂದ ಅವರನ್ನು ಹೊರಗಿಟ್ಟಿದ್ದು ಬೌಲಿಂಗ್​ ಪಡೆಯ ದೊಡ್ಡ ಬಲವನ್ನೇ ಕಸಿದಂತಾಯಿತು. ದ.ಆಫ್ರಿಕಾ ತಂಡದ ಬ್ಯಾಟರ್​ಗಳ ವಿಕೆಟ್​ ಕಿತ್ತುಬಿಸಾಡಲು ಅಕ್ಸರ್​ ಪಟೇಲ್​ ಅವರ ಸ್ಪಿನ್​ ಮೋಡಿ ಅಗತ್ಯವಿತ್ತು ಎಂದು ಕ್ರಿಕೆಟ್​ ಅಭಿಮಾನಿಗಳು ಸಹ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).