ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್
- ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು
- ಹರಿಣಗಳ ಪಡೆ ಎದುರು 51 ರನ್ಗಳ ಅಂತರದಿಂದ ಸೋಲಿಗೆ ಶರಣಾದ ಟೀಮ್ ಇಂಡಿಯಾ
- ಪಂದ್ಯದ ಬಳಿಕ ತಮ್ಮ ಸೋಲಿಗೆ ಕಾರಣಗಳು ಏನೆಂಬುದನ್ನು ಬಿಚ್ಚಿಟ್ಟ ನಾಯಕ ಸೂರ್ಯಕುಮಾರ್
IND vs SA T20 Match: ಆತಿಥೇಯ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ T20 ಸರಣಿಯ ಎರಡನೇ ಪಂದ್ಯ ಗುರುವಾರ (ಡಿ.11) ರಾತ್ರಿ ನ್ಯೂ ಚಂಡೀಗಢದ ಮುಲ್ಲನ್ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಡೆಯಿತು. ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನು ಅನುಭವಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡದ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಟೀಮ್ ಇಂಡಿಯಾ ಭಾರಿ ರನ್ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ತಂಡದ ಸೋಲಿಗೆ ಕಾರಣಗಳು ಏನು ಅನ್ನೋದನ್ನು ಬಹಿರಂಗಪಡಿಸಿದರು.
ಈ ಪಂದ್ಯದ ಸೋಲು ನಾವು ಮಾಡಿದ ತಪ್ಪಿನಿಂದಾಗಿದೆ ಸಂಭವಿಸಿದೆ. ವಿಶೇಷವಾಗಿ, ನಾವು ಪಿಚ್ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು. ಅಲ್ಲದೆ, ನಾವು ಪ್ಲಾನ್-ಬಿ ಅನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ನಾವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ, ನಾವು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡೆವು. ಈ ನಿರ್ಧಾರ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿದ್ದರಿಂದ ಅವರ ಬೌಲರ್‌ಗಳಿಗೆ ಯಾವ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಬೇಕೆಂದು ಉತ್ತಮ ತಿಳುವಳಿಕೆ ದೊರೆಯಿತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ಮಾಡಿದ ರೀತಿಯಿಂದ ನಾವು ಪಾಠ ಕಲಿತಿದ್ದೇವೆ ಎಂದರು.
ಶುಭಮಾನ್ ಗಿಲ್ ಮತ್ತು ನಾನು ಉತ್ತಮ ಆರಂಭ ನೀಡಬೇಕಿತ್ತು. ಆದರೆ, ನಾವಿಬ್ಬರೂ ರನ್ ಗಳಿಸುವಲ್ಲಿ ವಿಫಲರಾದೆವು. ಯಾವಾಗಲೂ ಅಭಿಷೇಕ್ ಶರ್ಮರನ್ನೇ ಅವಲಂಬಿಸಲು ಸಾಧ್ಯವಿಲ್ಲ. ಅವರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಾರೆ. ಹೀಗಾಗಿ, ಅವರು ಯಾವುದೇ ಸಮಯದಲ್ಲಿ ಔಟ್ ಆಗಬಹುದು. ನಾನು, ಗಿಲ್ ಮತ್ತು ನಮ್ಮ ಇತರ ಬ್ಯಾಟ್ಸ್‌ಮನ್‌ಗಳು ತಂಡಕ್ಕಾಗಿ ಸಾಧ್ಯವಾದಷ್ಟು ರನ್ ಗಳಿಸುವತ್ತ ಗಮನಹರಿಸಬೇಕು. ಆದರೆ, ನಿನ್ನೆ ಪಂದ್ಯದಲ್ಲಿ ಅದು ನಮ್ಮಿಂದ ಆಗಲಿಲ್ಲ ಎಂದು ಯಾದವ್ ಹೇಳಿದರು.
ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ನಾವು ತಯಾರಿ ನಡೆಸುತ್ತೇವೆ. ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಂತೆ ಪ್ರದರ್ಶನ ನೀಡುತ್ತಾರೆ ಎಂದು ನಾವು ಆಶಿಸಿದ್ದೆವು. ಆದರೆ, ದುರದೃಷ್ಟವಶಾತ್, ಅದು ಆಗಲಿಲ್ಲ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೂರ್ಯಕುಮಾರ್ ಯಾದವ್ ಪಡೆ, ಹರಿಣರ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಹರಿಣರು 213 ರನ್ ಕಲೆಹಾಕಿದರು. ದಕ್ಷಿಣ ಆಫ್ರಿಕಾದ ಓಪನರ್ ಕ್ವಿಂಟನ್ ಡಿ ಕಾಕ್ ಸ್ಪೋಟಕ ಇನ್ನಿಂಗ್ಸ್ ನೀಡಿದರು. ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ಮೂಲಕ 195.65 ಸ್ಟ್ರೈಕ್ ರೇಟ್‌ನಲ್ಲಿ 90 ರನ್ ಸಿಡಿಸಿದರು. ಕಾಕ್ ನಂತರದಲ್ಲಿ, ಐಡೆನ್ ಮಾರ್ಕ್ರಾಮ್ (26 ಎಸೆತ, 29 ರನ್), ಡೊನೊವನ್ ಫೆರೇರಾ (16 ಎಸೆತ. ಅಜೇಯ 30 ರನ್) ಮತ್ತು ಡೇವಿಡ್ ಮಿಲ್ಲರ್ (12 ಎಸೆತ, ಅಜೇಯ 20 ರನ್) ತಂಡದ ಒಟ್ಟು ಮೊತ್ತವನ್ನು ಹೆಚ್ಚಿಸಲು ಶ್ರಮಿಸಿದರು.
214 ರನ್ ಗುರಿ ತಲುಪಲು ಮುಗ್ಗರಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳ ಪೈಕಿ ತಿಲಕ್ ವರ್ಮಾ ಮಾತ್ರ ಕ್ರೀಸ್ನಲ್ಲಿ ನಿಂತು, ತಂಡಕ್ಕಾಗಿ ಕೊನೆಯವರೆಗೂ ಹೋರಾಡಿದರು. ಕೇವಲ 34 ಎಸೆತ ಎದುರಿಸಿದ ತಿಲಕ್, 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿದರು. ಇಷ್ಟಾದರೂ ಅವರಿಗೆ ಉತ್ತಮ ಸಾಥ್ ಸಿಗದ ಹಿನ್ನೆಲೆ ಪಂದ್ಯವನ್ನು ಸೋಲಿಗೆ ದೂಡುವಂತಾಯಿತು. ಅಂತಿಮವಾಗಿ ಟೀಮ್ ಇಂಡಿಯಾ ಕೇವಲ 162 ರನ್ಗೆ ಆಲ್ಔಟ್ ಆಯಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಸ್ತುತ ಉಭಯ ತಂಡಗಳು 1-1 ರಲ್ಲಿ ಸಮಬಲ ಕಾಯ್ದುಕೊಂಡಿವೆ, (ಏಜೆನ್ಸೀಸ್).