- ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟಕ್ಕೆ ಬ್ರೇಕ್
- ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು
- ಪಂದ್ಯೆ ಗೆದ್ದ ಬಳಿಕ ದ. ಆಫ್ರಿಕಾ ನಾಯಕನ ಹೇಳಿಕೆ ವೈರಲ್
IND vs SA: ನಿನ್ನೆ (ಫೆ.22) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲುಂಡಿತು. ಸೆಮಿಫೈನಲ್ಗೆ ಪ್ರವೇಶ ಪಡೆಯಬೇಕು ಎಂದರೆ ಈ ಹಂತದ ಪ್ರತಿಯೊಂದು ಪಂದ್ಯವನ್ನು ಗೆಲ್ಲುವುದು ಅನಿವಾರ್ಯ. ಹೀಗಿರುವಾಗ, ಉತ್ತಮ ರನ್ರೇಟ್ ಹೊಂದದ ಸೂರ್ಯಕುಮಾರ್ ಯಾದವ್ ಪಡೆ, ಆಲ್ಔಟ್ ಆಗುವ ಮೂಲಕ ಮುಗ್ಗರಿಸಿದ್ದು ಸದ್ಯ ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಟೀಮ್ ಇಂಡಿಯಾ ವಿರುದ್ಧ 76 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಮ್, ತಮ್ಮ ತಂಡದ ಆಟಗಾರರ ಬಗ್ಗೆ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಅದ್ಭುತ ಇನ್ನಿಂಗ್ಸ್ ಪಂದ್ಯದ ಗೆಲುವಿಗೆ ಪ್ರಮುಖ ಕಾರಣವಾಯಿತು. ಇದು ಎರಡೂ ತಂಡಗಳ ನಡುವಿನ ವ್ಯತ್ಯಾಸ ಎಂದು ಹೇಳಿದರು.
ಪಂದ್ಯ ಗೆದ್ದ ಬೆನ್ನಲ್ಲೇ ಮಾತನಾಡಿದ ಮಾರ್ಕ್ರಮ್, ಇದು ಅದ್ಭುತ ಗೆಲುವು. ಈ ಹಿಂದೆ ಈ ಮೈದಾನದಲ್ಲಿ ಆಡಿದ ವಿಕೆಟ್‌ಗಿಂತ ಪಿಚ್ ತುಂಬಾ ಭಿನ್ನವಾಗಿದೆ. ವಿಕೆಟ್ ಹೇಗೆ ಪಡೆಯಬಹುದು ಎಂದು ಮುಂಚಿತವಾಗಿಯೇ ಲೆಕ್ಕಾಚಾರ ಹಾಕಿ, ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ಫಲಿತಾಂಶ ಪಡೆದ ನಮ್ಮ ಬೌಲರ್‌ಗಳಿಗೆ ಅಭಿನಂದನೆಗಳು. ಈ ಟೂರ್ನಮೆಂಟ್‌ನ ಆರಂಭದಲ್ಲಿ ಇದು ಸ್ವಲ್ಪ ಕಷ್ಟಕರವೆಂದು ಕಂಡುಬಂದರೂ, ಭಾರತದ ವಿರುದ್ಧದ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಕಮಾಲ್ ಮಾಡಿದ್ದಾರೆ ಎಂದರು.
ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಅತ್ಯುತ್ತಮ ಬ್ಯಾಟಿಂಗ್ ಬಗ್ಗೆ ನಾನು ಮಾತಾಡಲೇಬೇಕು. ಅವರ ಉತ್ತಮ ಜೊತೆಯಾಟ ತಂಡದ ಸ್ಕೋರ್ ಅನ್ನು ಇನ್ನಷ್ಟು ಹೆಚ್ಚಿಸಿತು. ಭಾರತೀಯ ಬೌಲರ್‌ಗಳು ಇನ್ನಿಂಗ್ಸ್‌ನ ಆರಂಭದಲ್ಲಿ ಮತ್ತು ಕೊನೆಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ನಮ್ಮ ತಂಡವು ಮಿಡೆಲ್ ಆರ್ಡರ್ನಲ್ಲಿ ಆಡಿದ ರೀತಿಯೇ ಗೆಲುವಿಗೆ ಕಾರಣವಾಯಿತು. ಇದೇ ಎರಡೂ ತಂಡಗಳ ನಡುವಿನ ಏಕೈಕ ವ್ಯತ್ಯಾಸ ಎಂದು ಒತ್ತಿ ಹೇಳಿದರು.
ಯುಎಇ ವಿರುದ್ಧದ ಪಂದ್ಯದಲ್ಲಿ ನಾವು ಅಷ್ಟು ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ, ಈ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಫೀಲ್ಡಿಂಗ್‌ನಲ್ಲಿ ಎರಡು ಕ್ಯಾಚ್‌ಗಳನ್ನು ಬಿಡುವುದು ಒಳ್ಳೆಯದಲ್ಲ. ತದನಂತರ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಬಗ್ಗೆ ಹೇಳುವುದಾದರೆ, ಈ ಟೂರ್ನಮೆಂಟ್‌ಗೆ ಮೊದಲು ನಾವು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದೇವೆ. ಸೋಮವಾರ ಬೆಳಗ್ಗೆಯಿಂದ ನಾವು ಆ ಪಂದ್ಯದ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಇದು ಒಂದು ದೊಡ್ಡ ಪಂದ್ಯ ಮತ್ತು ಆ ಪಂದ್ಯವನ್ನು ಗೆಲ್ಲಲು ನಾವು ಶತಾಯಗತಾಯ ಪ್ರಯತ್ನ ಮಾಡುತ್ತೇವೆ ಎಂದು ಮಾರ್ಕ್ರಾಮ್ ಹೇಳಿದರು.
ಪಂದ್ಯದ ವಿವರ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್ನಲ್ಲಿ ವಿಫಲರಾದ್ದರಿಂದ ಟೀಮ್ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು,