- ಫೆ.15ರಂದು ಕೊಲೊಂಬೊದಲ್ಲಿ ಇಂಡೋ-ಪಾಕ್ ಕದನ
- ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಅಡ್ಡಿ-ಆತಂಕ
- ಪಂದ್ಯ ರದ್ದಾಗುವ ಮುನ್ಸೂಚನೆ, ರದ್ದಾದರೆ ಮುಂದೇನು ಕಥೆ?
ಶ್ರೀಲಂಕಾ: ಇಂದು (ಫೆ.15) ಕೊಲೊಂಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದೆ. ಸಂಜೆ 7 ಗಂಟೆಗೆ ಆರಂಭಗೊಳ್ಳಲಿರುವ ಈ ಪಂದ್ಯಕ್ಕೆ ಇಡೀ ಜಗತ್ತೇ ತೀವ್ರ ಕುತೂಹಲದಿಂದ ಹಾಗೂ ಕಾತರದಿಂದ ಕಾಯತೊಡಗಿದೆ. ಆರಂಭದಲ್ಲಿ ಬಾಂಗ್ಲಾಗೆ ಬೆಂಬಲ ಸೂಚಿಸುವ ನೆಪದಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದ ಪಾಕ್, ಪಂದ್ಯ ಆಡ್ತೇವೆ ಎಂದು ಹೊಡೆದ ದಿಢೀರ್ ಯು-ಟರ್ನ್ ಎಲ್ಲರಿಗೂ ಗೊತ್ತೇ ಇದೆ. ಟಿವಿ ಮುಂದೆ ಕೂರಲು ತುದಿಗಾಲಿನಲ್ಲಿ ನಿಂತಿರುವ ಕ್ರಿಕೆಟ್ ಪ್ರೇಮಿಗಳಿಗೆ ಸದ್ಯ ಮಳೆಯಿಂದ ರದ್ದಾಗುವ ಭೀತಿ ಎದುರಾಗಿದೆ.
ಹೀಗಿದೆ ಹವಾಮಾನ ವರದಿ
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇದೀಗ ವರುಣನ ಅಡಚಣೆ ಕಾಡತೊಡಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಭಾನುವಾರ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಗಲಿನಲ್ಲಿ ಶೇ.93ರಷ್ಟು ಮಳೆ ಬೀಳಲಿದ್ದು, ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.26ರಷ್ಟಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು?
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದ ಯಾವುದಾದರೂ ಪಂದ್ಯ ರದ್ದಾಗುವ ಮೊದಲು ಕನಿಷ್ಠ ಐದು ಓವರ್ಗಳನ್ನು ಆಡುವುದು ಅನಿವಾರ್ಯ. ಇದು ಐಸಿಸಿಯ ಮೂಲ ನಿಯಮ. ವರುಣನ ಆರ್ಭಟದ ನಡುವೆ ಈ 5 ಓವರ್ ಕೂಡ ಆಡಿಸಲು ಸಾಧ್ಯವಾಗಿಲ್ಲ ಎಂದಾದರೆ, ಆ ಪಂದ್ಯ ರದ್ದಾಗುತ್ತೆ. ಈ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಇಲ್ಲಿ 'ರಿಸರ್ವ್ ಡೇ'ಗೆ (ಪಂದ್ಯ ನಾಳೆಗೆ ಮುಂದೂಡಿಕೆ) ಅನುಮತಿ ಇಲ್ಲ ಎಂಬುದು ಗಮನಾರ್ಹ.
ಮಳೆಯಿಂದ ಪಂದ್ಯ ಕೊಚ್ಚಿ ಹೋದ್ರೆ ಭಾರೀ ನಷ್ಟ!
ಅಕಸ್ಮಾತ್ ಮಳೆಯಿಂದ ಪಂದ್ಯವೇನಾದರೂ ರದ್ದಾದರೆ, ಲೈವ್ ಪ್ರಸಾರ ಮಾಡುವ ಸಂಸ್ಥೆಗೆ ಭಾರೀ ನಷ್ಟ ಉಂಟಾಗಲಿದೆ. ಇದು ಬರುವ ಆ್ಯಡ್ಗಳ ಲಾಭಾಂಶಕ್ಕೆ ದೊಡ್ಡ ಹೊಡೆತ ನೀಡಲಿದೆ. ಮುಖ್ಯವಾಗಿ, ವೀಕ್ಷಕರ ಸಂಖ್ಯೆಯೂ ಗಣನೀಯವಾಗಿ ಕುಸಿಯಲಿದೆ. ಇನ್ನು ಸ್ಟೇಡಿಯಂಗೆ ಬಂದ ಅಪಾರ ಸಂಖ್ಯೆಯ ವೀಕ್ಷಕರು, ಪಂದ್ಯ ನಡೆಯದೇ ಹೋದರೆ ರೀ-ಫಂಡ್ಗೆ ಆಗ್ರಹಿಸುತ್ತಾರೆ. ಇದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೂ ತಲೆನೋವಾಗಿ ಪರಿಣಮಿಸಲಿದೆ,(ಏಜೆನ್ಸೀಸ್).
ಭಾರತ ತಂಡ
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ (ಉಪನಾಯಕ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.