ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ
- ಇಂದು (ಫೆ.15) ಕೊಲೊಂಬಾದಲ್ಲಿ ಇಂಡೋ-ಪಾಕ್ ಕದನ
- ಪಾಕಿಸ್ತಾನ ತಂಡಕ್ಕೆ ಮಣ್ಣು ಮುಕ್ಕಿಸಲು ಟೀಮ್ ಇಂಡಿಯಾ ಸನ್ನದ್ಧ
- ಈ ಮಧ್ಯೆ, ಟೀಮ್ ಇಂಡಿಯಾ ದಿಗ್ಗಜ ಸೌರವ್ ಗಂಗೂಲಿ ಹೇಳಿಕೆಗಳು ವೈರಲ್
ನವದೆಹಲಿ: ಇಂದು (ಫೆ.15) ಕೊಲೊಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ (IND vs PAK) ಟಿ20 ವಿಶ್ವಕಪ್ ಪಂದ್ಯಕ್ಕೆ ಇಡೀ ಜಗತ್ತೇ ಸಾಕ್ಷಿಯಾಗಲಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಕಾರಣ, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹಾಗೂ ಬಹುನಿರೀಕ್ಷಿತ ಪಂದ್ಯ ಇದಾಗಿದೆ. ಟೂರ್ನಿ ಆರಂಭಕ್ಕೂ ಮೊದಲ ದಿನದಿಂದಲೂ ಗುಳ್ಳೆನರಿ ಬುದ್ಧಿಯನ್ನು ತೋರಿದ ಪಾಕಿಸ್ತಾನ, ಕಡೆಗೂ ಟೀಮ್ ಇಂಡಿಯಾ ವಿರುದ್ಧ ಆಡುವುದಾಗಿ ಒಪ್ಪಿಕೊಂಡಿದೆ. ಹೀಗಿರುವಾಗ, ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಕುತೂಹಲ ಕೆರಳಿದ್ದು, ಹೈಡ್ರಾಮಾ ಸೃಷ್ಟಿಸಿದ್ದ ಪಾಕ್ ತಂಡವನ್ನು ಬಗ್ಗುಬಡಿಯುವ ಮೂಲಕ ಸೋಲಿನ ರುಚಿ ಉಣಿಸಲಿದೆ ಎಂಬ ನಿರೀಕ್ಷೆ ಜನರಲ್ಲಿ ದುಪ್ಪಟ್ಟಾಗಿದೆ. ಈ ಪಂದ್ಯ ಕುರಿತಂತೆ ಅನೇಕ ಮಾಜಿ ಕ್ರಿಕೆಟಿಗರು ಮಾತನಾಡಿದ್ದು, ಇದೀಗ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, 'ದಾದಾ' ಸೌರವ್ ಗಂಗೂಲಿ ನೀಡಿದ ಹೇಳಿಕೆಗಳು ಸದ್ಯ ಗಮನ ಸೆಳೆದಿವೆ.
ಉಸ್ಮಾನ್ ತಾರಿಕ್ ಬೌಲಿಂಗ್ ಡೇಂಜರ್?
ಟಿ20 ವಿಶ್ವಕಪ್ ಟೂರ್ನಿ ಆರಂಭವಾದ ದಿನದಿಂದಲೂ ಪಾಕಿಸ್ತಾನ ಪರ ಸ್ಪಿನ್ನರ್ ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿಯ ವಿರುದ್ಧ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಬೌಲಿಂಗ್ ಮಾಡುವಾಗ ಕ್ರೀಸ್ ಬಳಿ ಒಂದೆರೆಡು ಸೆಕೆಂಡ್ ನಿಂತು ಆ ಬಳಿಕ ಬಾಲ್ ಅನ್ನು ರಿಲೀಸ್ ಮಾಡುತ್ತಾರೆ. ಈ ರೀತಿಯ ಬೌಲಿಂಗ್ ಇದೇ ಮೊದಲು. ಹೀಗಾಗಿ, ತಾರಿಕ್ ಇದೀಗ ಎಲ್ಲರ ಪ್ರಶ್ನೆ, ಗೊಂದಲಗಳಿಗೆ ನೇರ ಗುರಿಯಾಗಿದ್ದಾರೆ. ಕೆಲವರು ಇದು ಮೋಸದಾಟ ಎಂದರೆ, ಇನ್ನೂ ಕೆಲವರು ಈತನ ಬೌಲಿಂಗ್ ಎದುರಿಸೋದು ಡೇಂಜರ್ ಎಂದಿದ್ದಾರೆ.
ಕ್ರಿಕೆಟ್ 'ದಾದಾ'ನ ಖಡಕ್ ನುಡಿ
ಯಾವುದು ಕಷ್ಟವೇನಲ್ಲ. ತಾರಿಕ್ ಒಬ್ಬ ಸಾಮಾನ್ಯ ಆಫ್-ಸ್ಪಿನ್ನರ್. ಏನು ಒಂದು ಪಾಜ್ ಕೊಟ್ಟು ಬೌಲಿಂಗ್ ಮಾಡ್ತಾರೆ ಅಷ್ಟೇ. ನಮ್ಮ ತಂಡ (ಟೀಮ್ ಇಂಡಿಯಾ) ಚೆನ್ನಾಗಿಯೇ ಆಡಲಿದೆ ಎಂದರು. ಇನ್ನು ತಂಡದಲ್ಲಿ ಒಂದಷ್ಟು ಬದಲಾವಣೆಯ ಅಗತ್ಯವಿದೆ ಎಂದ ಗಂಗೂಲಿ, ಅಕ್ಸರ್, ವರುಣ್, ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಫ್ರಂಟ್ಲೈನ್ ಬೌಲರ್ಗಳ ಸ್ಥಾನದಲ್ಲಿರಬೇಕು. ತಂಡದ ಮೇಲೆ ನನಗೆ ಭರವಸೆಯಿದೆ ಎಂದು ಹೇಳಿದ್ದಾರೆ.
ಅಂದಹಾಗೆ, 28 ವರ್ಷದ ಉಸ್ಮಾನ್ ತಾರಿಕ್, ಇದುವರೆಗೂ ಆಡಿರುವ ನಾಲ್ಕು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಿಗೆ ಕೇವಲ 27 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಅವರ ಬೌಲಿಂಗ್ ಶೈಲಿಯ ಬಗ್ಗೆ ಕೆಲವು ವಿವಾದಗಳು ಹರಿದಾಡಿದ್ದು, ಇದು ಜಾಲತಾಣಗಳಲ್ಲಿ ಉಸ್ಮಾನ್ಗೆ ಇಲ್ಲಸಲ್ಲದ ಹೈಪ್ ತಂದುಕೊಡುತ್ತಿದೆ.
ಭಾರತ ತಂಡ
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ (ಉಪನಾಯಕ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.