ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ
- ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲು
- ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರೀ ಮುಖಭಂಗ ಅನುಭವಿಸಿದ ಪಾಕ್
- ತಮ್ಮದೇ ತಂಡದ ಮೂವರಿಗೆ ಗೇಟ್ಪಾಸ್ ಕೊಡಿ ಎಂದ ಮಾಜಿ ಕ್ಯಾಪ್ಟನ್
IND vs PAK: ನಿನ್ನೆ (ಫೆ.15) ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 61 ರನ್ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಮತ್ತೆ ಪಾಕ್ ತಂಡಕ್ಕೆ ಹೀನಾಯ ಸೋಲುಣಿಸಿದ ಭಾರತಕ್ಕೆ ಇದು 8ನೇ ಗೆಲುವು. ಸೂರ್ಯಕುಮಾರ್ ಯಾದವ್ ಪಡೆ ವಿರುದ್ಧ ಸೋತ ಬೆನ್ನಲ್ಲೇ ಪಾಕ್ನಲ್ಲಿ ಅಭಿಮಾನಿಗಳ ಆಕ್ರೋಶ ಸ್ಫೋಟಗೊಂಡಿದೆ.
ಟೀಮ್ ಇಂಡಿಯಾ ಎದುರು 61 ರನ್ಗಳಿಂದ ಸೋತ ಕಾರಣ, ಪಾಕಿಸ್ತಾನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಟಿವಿಗಳನ್ನು ಹೊಡೆದು ಹಾಕಿದರೆ, ಇನ್ನೂ ಕೆಲವರು ತಂಡದ ಆಟಗಾರರಿಗೆ ಹಿಡಿಶಾಪ ಹಾಕುವ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಾಕ್ ಅಭಿಮಾನಿಗಳ ಮಧ್ಯೆ ಮಾಜಿ ಕ್ಯಾಪ್ಟನ್ ಶಾಹಿದ್ ಆಫ್ರಿದಿ ತಮ್ಮದೇ ಆಟಗಾರರಿಗೆ ಛೀಮಾರಿ ಹಾಕಿದ್ದಾರೆ.
ಸೂಪರ್ 8
ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸ್ವಂತ ಅಳಿಯ ಮತ್ತು ಇತರ ಇಬ್ಬರು ಆಟಗಾರರನ್ನು ತಂಡದಿಂದ ತಕ್ಷಣವೇ ಕಿತ್ತು ಬಿಸಾಡಬೇಕೆಂದು ಒತ್ತಾಯಿಸಿದ್ದಾರೆ. ನಮ್ಮ ತಂಡ ಏನಾದರೂ ಸೂಪರ್ 8 ತಲುಪಲು ಬಯಸಿದ್ದೇ ಆದರೆ, ನಮೀಬಿಯಾ ವಿರುದ್ಧದ ಪಂದ್ಯದಿಂದ ಈ ಮೂವರನ್ನು ತೆಗೆದುಹಾಕಬೇಕು ಮತ್ತು ಹೊಸಬರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
"ಕೆಲವು ಸಮಯದಿಂದ ಈಗಿರುವ ಪಾಕಿಸ್ತಾನ ತಂಡವು, ಉತ್ತಮ ಟೀಮ್ಗಳ ವಿರುದ್ಧ ಪ್ರದರ್ಶನ ನೀಡಲು ಸತತವಾಗಿ ವಿಫಲವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗಾಗಿ, ಇಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಸಮಯ ಸನ್ನಿಹಿತವಾಗಿದೆ. ನಾನೇನಾದರೂ ಆಯ್ಕೆಗಾರನಾಗಿದ್ದರೆ, ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ಶಾದಾಬ್ ಅವರನ್ನು ಮೊದಲು ತಂಡದಿಂದ ಕೈಬಿಡುತ್ತಿದ್ದೆ ಎಂದು ಅಫ್ರಿದಿ ಗುಡುಗಿದ್ದಾರೆ.
ಪಂದ್ಯದ ವಿವರ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. 176 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕ ಹಂತದಲ್ಲೇ ಶಾಕ್ ಎದುರಾಯಿತು. ಶೂನ್ಯಕ್ಕೆ ವಿಕೆಟ್ ಕಳೆದುಕೊಂಡ ಪಾಕ್, ಆ ಬಳಿಕ ಸರಣಿ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಪೈಪೋಟಿ ನೀಡುವಲ್ಲಿ ಮುಗ್ಗರಿಸಿತು. 61 ರನ್ಗಳಿಂದ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದ್ದು ಅದ್ಭುತ. ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 77 ರನ್ ಸಿಡಿಸಿದ ಇಶಾನ್ ಕಿಶನ್, ತಂಡದ ಪರ ಸ್ಫೋಟಕ ಇನ್ನಿಂಗ್ಸ್ ನೀಡಿದರು,(ಏಜೆನ್ಸೀಸ್).