- ಇಂಡೋ-ಪಾಕ್ ಕದನಕ್ಕೆ ವರುಣನ ಅಡ್ಡಿ-ಆತಂಕ
- ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಸಾಕು ಎಂದ ಪಾಕ್ ಮಾಜಿ ಕ್ರಿಕೆಟಿಗ
- ಮಳೆ ಬರಲಿ ಎಂದು ದೇವರಲ್ಲಿ ಕೇಳುತ್ತೇನೆ ಎಂಬ ಮಾತು
ಶ್ರೀಲಂಕಾ: ಇಂದು (ಫೆ.15) ಕೊಲೊಂಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿದೆ. ಸಂಜೆ 7 ಗಂಟೆಗೆ ಆರಂಭಗೊಳ್ಳಲಿರುವ ಈ ಪಂದ್ಯಕ್ಕೆ ಇಡೀ ಜಗತ್ತೇ ತೀವ್ರ ಕುತೂಹಲದಿಂದ ಹಾಗೂ ಕಾತರದಿಂದ ಕಾಯುತ್ತಿದೆ. ಅತ್ತ ಹವಾಮಾನ ಇಲಾಖೆ, ಮ್ಯಾಚ್ಗೆ ಮಳೆಯ ಮುನ್ಸೂಚನೆ ನೀಡಿರುವುದು ಟಿವಿ ಮುಂದೆ ಕೂರಲು ತುದಿಗಾಲಿನಲ್ಲಿ ನಿಂತಿರುವ ಕ್ರಿಕೆಟ್ ಪ್ರೇಮಿಗಳಿಗೆ ಪಂದ್ಯ ರದ್ದಾಗುವ ಭೀತಿ ಕಾಡುತ್ತಿದ್ದರೆ, ಮಾಜಿ ಪಾಕ್ ಕ್ರಿಕೆಟಿಗ ಮಾತ್ರ ಮಳೆ ಬರಲಿ ಎಂದು ದೇವರಿಗೆ ಕೈಮುಗಿದಿದ್ದಾರೆ.
ಮಳೆ ಬಂದ್ರೆ ಸಾಕು...
'ಎ ಸ್ಪೋರ್ಟ್ಸ್' ಜತೆ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಲಿ ಎಂದು ನಾನು ಅಲ್ಲಾ ಬಳಿ ಕೇಳುತ್ತೇನೆ. ಹೀಗಾದರೆ, ಎರಡೂ ತಂಡಗಳು ತಲಾ ಒಂದೊಂದು ಅಂಕ ಸಿಗುತ್ತದೆ ಎಂದಿದ್ದಾರೆ. ಅವರ ಈ ಮಾತುಗಳು ಸದ್ಯ ಅಪಾರ ಸಂಖ್ಯೆಯಲ್ಲಿ ಪಂದ್ಯಕ್ಕಾಗಿ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳನ್ನು ಕೆರಳಿಸಿದೆ.
ಹವಾಮಾನ ವರದಿ ಏನು?
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇದೀಗ ವರುಣನ ಅಡಚಣೆ ಕಾಡತೊಡಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಭಾನುವಾರ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಗಲಿನಲ್ಲಿ ಶೇ.93ರಷ್ಟು ಮಳೆ ಬೀಳಲಿದ್ದು, ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.26ರಷ್ಟಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು?
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದ ಯಾವುದಾದರೂ ಪಂದ್ಯ ರದ್ದಾಗುವ ಮೊದಲು ಕನಿಷ್ಠ ಐದು ಓವರ್ಗಳನ್ನು ಆಡುವುದು ಅನಿವಾರ್ಯ. ಇದು ಐಸಿಸಿಯ ಮೂಲ ನಿಯಮ. ವರುಣನ ಆರ್ಭಟದ ನಡುವೆ ಈ 5 ಓವರ್ ಕೂಡ ಆಡಿಸಲು ಸಾಧ್ಯವಾಗಿಲ್ಲ ಎಂದಾದರೆ, ಆ ಪಂದ್ಯ ರದ್ದಾಗುತ್ತೆ. ಈ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಇಲ್ಲಿ 'ರಿಸರ್ವ್ ಡೇ'ಗೆ (ಪಂದ್ಯ ನಾಳೆಗೆ ಮುಂದೂಡಿಕೆ) ಅನುಮತಿ ಇಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).