ಹರ್ಷಿತ್​ ಔಟ್​ ಆಗ್ತಿದ್ದಂತೆ ಸುತ್ತುವರಿದ ಪಾಕ್ ಆಟಗಾರರು: ತಿಲಕ್​ ವರ್ಮಾ ಎಂಟ್ರಿ, ಮೈದಾನದಲ್ಲಿ ನಡೆಯಿತು ಹೈಡ್ರಾಮಾ! 
ಕ್ರಿಕೆಟ್

ಹರ್ಷಿತ್​ ಔಟ್​ ಆಗ್ತಿದ್ದಂತೆ ಸುತ್ತುವರಿದ ಪಾಕ್ ಆಟಗಾರರು: ತಿಲಕ್​ ವರ್ಮಾ ಎಂಟ್ರಿ, ಮೈದಾನದಲ್ಲಿ ನಡೆಯಿತು ಹೈಡ್ರಾಮಾ! Rising Stars Asia Cup

ಹರ್ಷಿತ್ ರಾಣಾ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ, ಪಾಕ್ ಆಟಗಾರ ಸುಫಿಯಾನ್ ಮುಕಿಮ್ ಹಾಗೂ ಇತರ ಆಟಗಾರರು ಅತಿಯಾದ ಸಂಭ್ರಮಾಚರಣೆ ಮಾಡುತ್ತಾ ಹರ್ಷಿತ್ ಅವರನ್ನು ಕೆಣಕಿ ಅವಮಾನಿಸಲು ಮುಂದಾದರು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಲ್ಲಿ ರೋಚಕತೆಗಿಂತ ಹೆಚ್ಚಾಗಿ ವಾಗ್ವಾದ ಮತ್ತು ಜಗಳಗಳೇ ಸದ್ದು ಮಾಡುತ್ತವೆ. ಇದೀಗ 'ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್' (Rising Stars Asia Cup) ಪಂದ್ಯಾವಳಿಯಲ್ಲೂ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಭಾರಿ ಹೈಡ್ರಾಮಾ ನಡೆದಿದೆ. ಟೀಮ್ ಇಂಡಿಯಾ ವೇಗಿ ಹರ್ಷಿತ್ ರಾಣಾ ಅವರನ್ನು ಪಾಕಿಸ್ತಾನಿ ಆಟಗಾರರು ಕೆಣಕಿದ್ದಕ್ಕೆ, ಭಾರತ ತಂಡದ ನಾಯಕ ತಿಲಕ್ ವರ್ಮಾ ಮೈದಾನದಲ್ಲೇ ಪಾಕ್ ಆಟಗಾರರಿಗೆ ತಕ್ಕ ತಿರುಗೇಟು ನೀಡಿದ್ದು, ಪರಿಸ್ಥಿತಿ ಕೈಮೀರುವ ಮುನ್ನವೇ ಅಂಪೈರ್‌ಗಳು ಮಧ್ಯಪ್ರವೇಶಿಸಿ ಜಗಳ ತಿಳಿಗೊಳಿಸಿದ ಘಟನೆ ನಡೆದಿದೆ.

ಈ ವಿವಾದಾತ್ಮಕ ಘಟನೆ ನಡೆದಿದ್ದು ಭಾರತದ ಇನ್ನಿಂಗ್ಸ್‌ನ 45ನೇ ಓವರ್‌ನ ಎರಡನೇ ಎಸೆತದಲ್ಲಿ. ಪಾಕಿಸ್ತಾನದ ಬೌಲರ್ ಮೊಹಮ್ಮದ್ ಇಮ್ರಾನ್ ರಾಂಧವಾ ಎಸೆದ ಫುಲ್ ಟಾಸ್ ಎಸೆತದಲ್ಲಿ ಹರ್ಷಿತ್ ರಾಣಾ ಔಟಾದರು. ಆಗಲೇ ಭಾರತ ಸೋಲಿನ ಅಂಚಿಗೆ ತಲುಪಿದ್ದು, ಪಾಕಿಸ್ತಾನದ ಗೆಲುವಿಗೆ ಕೇವಲ ಒಂದು ವಿಕೆಟ್ ಮಾತ್ರ ಬಾಕಿಯಿತ್ತು. ಹರ್ಷಿತ್ ರಾಣಾ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ, ಪಾಕ್ ಆಟಗಾರ ಸುಫಿಯಾನ್ ಮುಕಿಮ್ ಹಾಗೂ ಇತರ ಆಟಗಾರರು ಅತಿಯಾದ ಸಂಭ್ರಮಾಚರಣೆ ಮಾಡುತ್ತಾ ಹರ್ಷಿತ್ ಅವರನ್ನು ಕೆಣಕಿ ಅವಮಾನಿಸಲು ಮುಂದಾದರು. ಇದು ಎರಡೂ ತಂಡಗಳ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.

ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡದ ನಾಯಕ ತಿಲಕ್ ವರ್ಮಾ, ತಮ್ಮ ಸಹ ಆಟಗಾರನಿಗೆ ಆದ ಅವಮಾನವನ್ನು ಸಹಿಸದೆ ತಕ್ಷಣವೇ ಸಿಡಿದೆದ್ದರು. ಪಾಕಿಸ್ತಾನಿ ಆಟಗಾರರ ಈ ಅತಿರೇಕದ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಿಲಕ್, ಪಾಕ್ ಆಟಗಾರರೊಂದಿಗೆ ನೇರ ವಾಗ್ವಾದಕ್ಕಿಳಿದರು. ಇದರಿಂದ ಮೈದಾನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಅಂಪೈರ್‌ಗಳು ತಕ್ಷಣ ಮಧ್ಯಪ್ರವೇಶಿಸಿ ಎರಡೂ ತಂಡಗಳ ಆಟಗಾರರನ್ನು ಸಮಾಧಾನಪಡಿಸಿದರು. ಈ ವಾಗ್ವಾದದ ವೇಳೆ ಆಟಗಾರರ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆದಿರುವುದು ಸ್ಪಷ್ಟವಾಗಿ ಕಂಡುಬಂದರೂ, ಅಶ್ಲೀಲ ಪದಗಳನ್ನು ಬಳಸಿರುವ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎನ್ನಲಾಗಿದೆ.

ಆದರೆ, ಈ ವಿವಾದದ ಹಿಂದೆ ಮತ್ತೊಂದು ಹಿನ್ನೆಲೆಯೂ ಇರುವುದು ಬೆಳಕಿಗೆ ಬಂದಿದೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಮಾಡುವಾಗ, ಹರ್ಷಿತ್ ರಾಣಾ ಕೂಡ ಪಾಕ್ ಬ್ಯಾಟರ್‌ಗಳನ್ನು ಹಲವು ಬಾರಿ ಕೆಣಕಿದ್ದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ವಿಕೆಟ್ ಪಡೆದಾಗಲೂ ಹರ್ಷಿತ್ ಅವರು ಪಾಕ್ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆ ಸಂದರ್ಭದಲ್ಲೂ ಅಂಪೈರ್‌ಗಳು ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು. ಅದಕ್ಕೆ ಪ್ರತೀಕಾರವೆಂಬಂತೆ ಹರ್ಷಿತ್ ಔಟಾದಾಗ ಪಾಕಿಸ್ತಾನಿ ಆಟಗಾರರು ತಿರುಗೇಟು ನೀಡಿದ್ದಾರೆ ಎನ್ನಲಾಗಿದ್ದು, ಈ ಇಡೀ ಪ್ರಕರಣದ ಕುರಿತು ಮ್ಯಾಚ್ ರೆಫರಿ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಪಂದ್ಯದ ಫಲಿತಾಂಶವನ್ನು ಗಮನಿಸುವುದಾದರೆ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಹಸನ್ ನವಾಜ್ (79), ಮಾಜ್ ಸದಾಕತ್ (59) ಮತ್ತು ಫರ್ಹಾನ್ ಯೂಸುಫ್ (56) ಅರ್ಧಶತಕ ಗಳಿಸಿದರೆ, ಭಾರತದ ಪರ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಸೂರ್ಯಾಂಶ್ ಶೆಡ್ಗೆ ಮತ್ತು ವಿಪ್ರಜ್ ನಿಗಮ್ ತಲಾ ಎರಡು ವಿಕೆಟ್ ಪಡೆದರು. 314 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತದ ಪರ ನಾಯಕ ತಿಲಕ್ ವರ್ಮಾ ಭರ್ಜರಿ ಶತಕ (100), ಅಭಿಷೇಕ್ ಶರ್ಮಾ (70) ಹಾಗೂ ಶಹಬಾಜ್ ಅಹ್ಮದ್ (56) ದಿಟ್ಟ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ 48 ರನ್‌ಗಳ ಗೆಲುವು ಸಾಧಿಸಿತು, (ಏಜೆನ್ಸೀಸ್​).