ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಎಚ್ಚರಿಕೆ (Team India )  
ಕ್ರಿಕೆಟ್

ಆತನ ಬಗ್ಗೆ ಎಚ್ಚರದಿಂದಿರಿ... ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಎಚ್ಚರಿಕೆ! Team India

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದ ಆ ಸಮಯ ಹತ್ತಿರಬಂದಿದೆ
  • ಟಿ20 ವಿಶ್ವಕಪ್‌ನ ಭಾಗವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಲಿವೆ
  • ಈ ಹೈವೋಲ್ಟೇಜ್ ಪಂದ್ಯಕ್ಕೆ ಕ್ರೀಡಾ ಜಗತ್ತೇ ಕಾದು ಕುಳಿತಿದ್ದು, ಕ್ಷಣಗಣನೆ ಆರಂಭವಾಗಿದೆ
  • ಪ್ರತಿಷ್ಠಿತ ಪಂದ್ಯಕ್ಕೂ ಮುನ್ನವೇ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ
Team India : ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದ ಆ ಸಮಯ ಹತ್ತಿರಬಂದಿದೆ. 2026ರ ಟಿ20 ವಿಶ್ವಕಪ್‌ನ ಭಾಗವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಇಂದು (ಫೆ.15) ಕೊಲಂಬೊದಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕ್ರೀಡಾ ಜಗತ್ತೇ ಕಾದು ಕುಳಿತಿದ್ದು, ಕ್ಷಣಗಣನೆ ಆರಂಭವಾಗಿದೆ.
ಪ್ರತಿಷ್ಠಿತ ಪಂದ್ಯಕ್ಕೂ ಮುನ್ನವೇ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಅದೇನೆಂದರೆ, ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಯಾವುದೇ ಕಾರಣಕ್ಕೂ ಕಡಿಮೆ ಅಂದಾಜು ಮಾಡಬೇಡಿ ಎಂದು ಟೀಮ್​ ಇಂಡಿಯಾಗೆ ಭಜ್ಜಿ ಎಚ್ಚರಿಕೆ ನೀಡಿದ್ದಾರೆ.
ಈ ಹೈವೋಲ್ಟೇಜ್ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ಪಾಕಿಸ್ತಾನ ತಂಡದಲ್ಲಿ ಉಸ್ಮಾನ್ ತಾರಿಕ್ ಅವರಂತಹ ಉತ್ತಮ ಸ್ಪಿನ್ನರ್ ಇದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ಗಳು ಅವರನ್ನು ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಆದರೆ, ನಮ್ಮ ತಂಡದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಭಾರತ ತಂಡ ಈಗ ತುಂಬಾ ಬಲಿಷ್ಠವಾಗಿದೆ. ಟೀಮ್ ಇಂಡಿಯಾ ಎಂದಿನಂತೆ ಯಾವುದೇ ಒತ್ತಡವಿಲ್ಲದೆ ಆಟವಾಡಿ ವಿಜಯ ಪತಾಕೆ ಹಾರಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಭಜ್ಜಿ ಹೇಳಿದ್ದಾರೆ.

ಸಾಕಷ್ಟು ಸುದ್ದಿಯಲ್ಲಿದ್ದಾರೆ ತಾರಿಕ್​

ಅಂದಹಾಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್​ ಉಸ್ಮಾನ್ ತಾರಿಕ್ ಹೆಸರು ಸಾಕಷ್ಟು ಸುದ್ದಿಯಲ್ಲಿದೆ. ಈ ಆಫ್-ಸ್ಪಿನ್ನರ್ ತನ್ನ ವಿಶಿಷ್ಟ ಸ್ಟಾಪ್-ಅಂಡ್-ಪಾಸ್ ಸೈಡ್-ಆರ್ಮ್ ಆಕ್ಷನ್ ಮೂಲಕ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸುತ್ತಿದ್ದಾರೆ. ಇಲ್ಲಿಯವರೆಗೆ ನಾಲ್ಕು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತಾರಿಕ್ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, ಪ್ರತಿ ಓವರ್‌ಗೆ ಆರು ರನ್‌ಗಳಿಗಿಂತ ಕಡಿಮೆ ಎಕಾನಮಿ ದರದಲ್ಲಿ ಉತ್ತಮ ದಾಖಲೆ ಒಂದಿದ್ದಾರೆ. ಒಟ್ಟು 42 ಟಿ20 ಪಂದ್ಯಗಳಲ್ಲಿ 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಇಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್​ ಇಂಡಿಯಾ ಆಟಗಾರರಿಗೆ ದೊಡ್ಡ ಬೆದರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನ ತಂಡವು ಉಸ್ಮಾನ್ ತಾರಿಕ್ ಅವರನ್ನು ತಮ್ಮ ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ. ಈ ಹಿಂದಿನ ಪಂದ್ಯದಲ್ಲಿ ಅಮೆರಿಕದ ಬ್ಯಾಟ್ಸ್‌ಮನ್‌ಗಳು ತಾರಿಕ್​ ಅವರ ಬೌಲಿಂಗ್​ನಲ್ಲಿ ಆಡಲು ಹೆಣಗಾಡಿದರು. ಅಲ್ಲದೆ, ಅನೇಕರು ತಾರಿಕ್​ ಅವರ ಬೌಲಿಂಗ್​ ಶೈಲಿಯನ್ನೂ ಪ್ರಶ್ನಿಸುತ್ತಿದ್ದಾರೆ. ಬೌಲಿಂಗ್​ ಮಾಡುವಾಗ ಕ್ರೀಸ್​ ಬಳಿ ಒಂದೆರೆಡು ಸೆಕಂಡ್​ ನಿಂತು ಆ ಬಳಿಕ ಬಾಲ್​ ಅನ್ನು ಬಿಡುಗಡೆ ಮಾಡುತ್ತಾರೆ. ಈ ರೀತಿಯ ಬೌಲಿಂಗ್​ ಇದೇ ಮೊದಲು. ಹೀಗಾಗಿ, ತಾರಿಕ್​ ಇದೀಗ ಎಲ್ಲರ ಪ್ರಶ್ನೆಯಾಗಿದ್ದಾರೆ. ಆದರೂ ಐಸಿಸಿ ಮಾತ್ರ ಈವರೆಗೂ ತಾರಿಕ್​ ಬೌಲಿಂಗ್​ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಸದ್ಯ, ತಾರಿಕ್​ ಅವರ ಬೌಲಿಂಗ್ ಶೈಲಿ ವಿವಾದಕ್ಕೆ ಕಾರಣವಾಗಿದೆ. ಉಸ್ಮಾನ್ ಅವರ ಬೌಲಿಂಗ್ ಶೈಲಿಯಲ್ಲಿನ ವಿರಾಮವನ್ನು "ಕಾನೂನುಬಾಹಿರ" ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್​ ಪೀಟರ್ಸನ್ ಹೇಳಿದ್ದಾರೆ. ಆದರೆ, ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೌಲಿಂಗ್​ ಶೈಲಿಯ ಕಾನೂನುಬದ್ಧತೆಯನ್ನು ನಿರ್ಧರಿಸುವುದು ICCಗೆ ಮಾತ್ರ ಸಾಧ್ಯ ಎಂದಿದ್ದಾರೆ. ಅಲ್ಲದೇ, ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀರುವ ಅಶ್ವಿನ್​, ತಾರಿಕ್ ಏನಾದರೂ ರನ್-ಅಪ್‌ನಲ್ಲಿ ನಿಂತರೆ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಸ್ವಲ್ಪ ಮುಂದೆ ಹೋಗಬಹುದು. ಇದು ಬೌಲರ್ ಮೇಲೆ ಮಾನಸಿಕ ಒತ್ತಡ ಹಾಕುತ್ತದೆ ಎಂಬ ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).