ಇಂಡೋ-ಪಾಕ್​ ಪಂದ್ಯಕ್ಕೆ ಮತ್ತೊಂದು ವಿಘ್ನ ( IND vs PAK ) 
ಕ್ರಿಕೆಟ್

ಇಂಡೋ-ಪಾಕ್​ ಪಂದ್ಯಕ್ಕೆ ಮತ್ತೊಂದು ವಿಘ್ನ: ಇದೇನಾದರೂ ನಡೆದ್ರೆ ನಾಳಿನ ಪಂದ್ಯ ರದ್ದಾಗೋದು ಫಿಕ್ಸ್​! IND vs PAK

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಹೈ-ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ
  • ನಾಳೆ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ
  • ಈ ಪಂದ್ಯಕ್ಕಾಗಿ ಪ್ರಪಂಚದಾದ್ಯಂತ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದಾರೆ
  • ಸಂಪ್ರದಾಯಿಕ ಎದುರಾಳಿಗಳ ನಡುವಿನ ಪ್ರತಿಷ್ಠಿತ ಕದನಕ್ಕೆ ಇದೀಗ ಮತ್ತೊಂದು ವಿಘ್ನ ಎದುರಾಗಿದೆ
IND vs PAK: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಹೈ-ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ, ಭಾನುವಾರ (ಫೆ.15) ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಪಂದ್ಯಕ್ಕೆ ಇದೀಗ ಮತ್ತೊಂದು ವಿಘ್ನ ಎದುರಾಗುವ ಸಾಧ್ಯತೆ ಇದೆ.
ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್​ನಿಂದ ಐಸಿಸಿ ಹೊರಗಿಟ್ಟಿದ್ದಕ್ಕೆ ಬಾಂಗ್ಲಾಗೆ ಬೆಂಬಲ ಸೂಚಿಸಲು ಹೋಗಿ ಟೂರ್ನಿಯನ್ನೇ ಬಹಿಷ್ಕಾರ ಮಾಡುವುದಾಗಿ ಪಾಕಿಸ್ತಾನ ಆರಂಭದಲ್ಲಿ ಹೇಳಿತ್ತು. ಇದಾದ ಬಳಿಕ ಯೂಟರ್ನ್​ ಹೊಡೆದ ಪಾಕಿಸ್ತಾನ, ಭಾರತ ವಿರುದ್ಧ ಆಡುವುದಿಲ್ಲ ಎನ್ನುವ ಮೂಲಕ ಮತ್ತೊಂದು ಖ್ಯಾತೆ ತೆಗೆಯಿತು. ಹೀಗಾಗಿ, ಫೆ.15ರಂದು ಪಂದ್ಯ ನಡೆಯುತ್ತೋ? ಇಲ್ಲವೋ? ಎಂಬ ಅನುಮಾನ ಕಾಡಿತ್ತು. ಅಂತಿಮವಾಗಿ ಐಸಿಸಿ ಎಚ್ಚರಿಕೆಗೆ ಬಗ್ಗಿದ ಪಾಕಿಸ್ತಾನ, ಟೀಮ್​ ಇಂಡಿಯಾ ವಿರುದ್ಧ ಆಡಲು ಒಪ್ಪಿಕೊಂಡಿತು. ಪಾಕ್​ ಸರ್ಕಾರವೂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿತು. ಇದರಿಂದ ಹೈವೋಲ್ಟೇಜ್​ ಪಂದ್ಯ ನೋಡಲು ಎದುರು ನೋಡುತ್ತಿದ್ದ ಕ್ರೀಡಾಭಿಮಾನಿಗಳು ನಿಟ್ಟುಸಿರು ಬಿಟ್ಟರು. ಆದರೆ, ಇದೀಗ ಈ ಪಂದ್ಯಕ್ಕೆ ಮತ್ತೊಂದು ಅಡಚಣೆ ಉಂಟಾಗಿದೆ.
ಭಾನುವಾರ ನಡೆಯಲಿರುವ ಪಾಕಿಸ್ತಾನ vs ಭಾರತ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಶ್ರೀಲಂಕಾದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಮುನ್ಸೂಚನೆ ಇದೀಗ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಶ್ರೀಲಂಕಾದ ಹವಾಮಾನ ಇಲಾಖೆ ಹೊರಡಿಸಿರುವ ವಿಶೇಷ ಹವಾಮಾನ ಬುಲೆಟಿನ್ ಪ್ರಕಾರ, ಫೆಬ್ರವರಿ 15ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಲಂಕಾದ ಜನರು ಜಾಗರೂಕರಾಗಿರಬೇಕು ಎಂದಿದೆ. ಈ ಕಡಿಮೆ ಒತ್ತಡದ ಪ್ರದೇಶವು ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದರೆ, ಇದರ ಪರಿಣಾಮ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿರುವ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದ ಬಳಿ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನು ಕೇಳಿ ಕ್ರಿಕೆಟ್​ ಪ್ರೇಮಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆ ಬಂದರೆ ಏನಾಗಲಿದೆ?

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ದಿನದಂದು ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಭಾರೀ ಮಳೆಯಾದರೆ, ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಸಾಧಾರಣ ಮಳೆ ಬಂದು ಅಡ್ಡಿಯಾದರೆ, ಕಡಿಮೆ ಓವರ್‌ಗಳೊಂದಿಗೆ ಪಂದ್ಯವನ್ನು ಆಡಲಾಗುತ್ತದೆ. ಸಂಪೂರ್ಣ ಪಂದ್ಯ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ಸಿಗುತ್ತದೆ. ಇಲ್ಲಿ ಇನ್ನೊಂದು ಸಂಗತಿ ಏನೆಂದರೆ, ಪಾಕಿಸ್ತಾನ ಮತ್ತು ಭಾರತ ಪಂದ್ಯವು ಗ್ರೂಪ್​ ಹಂತದ ಪಂದ್ಯವಾಗಿರುವುದರಿಂದ ಪಂದ್ಯ ರದ್ದಾದರೂ ಯಾವುದೇ ಮೀಸಲು ದಿನಗಳು ಇರುವುದಿಲ್ಲ. ಪ್ರತಿ ತಂಡಕ್ಕೂ ಒಂದು ಪಾಯಿಂಟ್ ನೀಡಲಾಗುತ್ತದೆ, (ಏಜೆನ್ಸೀಸ್​).