ಟಾಸ್​ ಗೆದ್ದರೂ ನಡೆಯಲಿಲ್ಲ ಪಂದ್ಯ! ಭಾರತ-ನ್ಯೂಜಿಲೆಂಡ್​ ನಡುವಿನ 3ನೇ ಏಕದಿನ ಮ್ಯಾಚ್​ ರದ್ದು | IND vs NZ ODI  
ಕ್ರಿಕೆಟ್

ಟಾಸ್​ ಗೆದ್ದರೂ ನಡೆಯಲಿಲ್ಲ ಪಂದ್ಯ! ಭಾರತ-ನ್ಯೂಜಿಲೆಂಡ್​ ನಡುವಿನ 3ನೇ ಏಕದಿನ ಮ್ಯಾಚ್​ ರದ್ದು | IND vs NZ ODI

IND vs NZ ODI: ಇಂದು ಹ್ಯಾಮಿಲ್ಟನ್‌ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಇದೀಗ ಬಿಡದೆ ಸುರಿಯುತ್ತಿರುವ ಮಳೆಯಿಂದ ರದ್ದುಗೊಳಿಸಲಾಗಿದೆ.

ಮಳೆಯ ಕಾರಣದಿಂದಾಗಿ, ಈ ಪಂದ್ಯದಲ್ಲಿ ಒಂದೇ ಒಂದು ಎಸೆತವನ್ನೂ ಹಾಕಲು ಸಾಧ್ಯವಾಗದ ಹಿನ್ನೆಲೆ ಮ್ಯಾಚ್​ ಅನ್ನು ರದ್ದು ಮಾಡಲಾಯಿತು. ಕೇವಲ ಟಾಸ್ ಪ್ರಕ್ರಿಯೆ ಮಾತ್ರ ನಡೆಯಿತು. ಟಾಸ್ ಗೆದ್ದ ಶುಭಮನ್​ ಗಿಲ್, ಪ್ಲ್ಯಾನಿಂಗ್​ ಪ್ರಕಾರ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಕೊನೆಗೂ ವ್ಯರ್ಥವಾಯಿತು.

ಪಂದ್ಯವು ಬೆಳಗ್ಗೆ 7.30ಕ್ಕೆ ಪ್ರಾರಂಭ ಆಗಬೇಕಿತ್ತು. ಆದರೆ, ಮಳೆಯ ಅಡಚಣೆಯಿಂದಾಗಿ ಟಾಸ್ ಪ್ರಕ್ರಿಯೆಯನ್ನು ಬೆಳಗ್ಗೆ 9 ಗಂಟೆಗೆ ಮುಂದೂಡಲಾಯಿತು. ಟಾಸ್ ನಡೆದ ತಕ್ಷಣವೇ, ಮಳೆ ಮತ್ತೆ ಕ್ರೀಡಾಂಗಣವನ್ನು ಆವರಿಸಿಕೊಂಡ ಕಾರಣ, ಕೆಲವು ಗಂಟೆಗಳ ಕಾಲ ಕಾಯಲಾಯಿತು. ಮತ್ತು 50 ಓವರ್​ ಪಂದ್ಯವನ್ನು 40 ಓವರ್​ಗೆ ಇಳಿಸಲಾಯಿತು. ಇಷ್ಟಾದರೂ ನಿಲ್ಲದೆ, ಪದೇ ಪದೇ ಸುರಿದ ಮಳೆಯಿಂದ ಆಟ ಆರಂಭಿಸಲು ಸಾಧ್ಯವೇ ಆಗಲಿಲ್ಲ.

ಕನಿಷ್ಠ 20 ಓವರ್‌ಗಳ ಪಂದ್ಯವನ್ನಾದರೂ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ವರುಣನ ಅಡಚಣೆಯಿಂದ ನಿರಾಶೆ ಉಂಟಾಯಿತು. ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಮ್​, ಸದ್ಯ 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಕಿವೀಸ್​ನಿಂದ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿತ್ತು. ಆದರೆ, ಆ ಲೆಕ್ಕಾಚಾರ ಇಂದು ಈಡೇರಲಿಲ್ಲ. ಎರಡೂ ತಂಡಗಳ ನಡುವಿನ ನಾಲ್ಕನೇ ಏಕದಿನ ಪಂದ್ಯವು ಇದೇ ನ.13ರಂದು ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ,(ಏಜೆನ್ಸೀಸ್).