ಟೀಮ್​ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್​ ಯಾದವ್​  
ಕ್ರಿಕೆಟ್

ಬೇಕಂತಲೇ ಆಡಿದೆವು... ಕಿವೀಸ್​ ವಿರುದ್ಧ ಸೋಲಿಗೆ ಅಚ್ಚರಿಯ ಕಾರಣ ಕೊಟ್ಟ ಸೂರ್ಯಕುಮಾರ್​ ಯಾದವ್​! IND vs NZ

ಪ್ರಮುಖ ಮುಖ್ಯಾಂಶಗಳು

  • ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ
  • ಬುಧವಾರ ವೈಜಾಗ್​ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಸೋಲು
  • ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಕ್ಕೆ ಪಡೆದಿರುವ ಭಾರತ ನಾಲ್ಕನೇ ಪಂದ್ಯದಲ್ಲಿ ಮುಗ್ಗರಿತು
  • ಸೋಲಿನ ವಿಚಾರವಾಗಿ ಸ್ಪಷ್ಟನೆ ನೀಡಿದ ನಾಯಕ ಸೂರ್ಯಕುಮಾರ್​ ಯಾದವ್​
IND vs NZ : ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಬುಧವಾರ (ಜ.28) ವೈಜಾಗ್‌ನಲ್ಲಿ ನಡೆಯಿತು. ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಕ್ಕೆ ಪಡೆದಿರುವ ಭಾರತ ನಾಲ್ಕನೇ ಪಂದ್ಯದಲ್ಲಿ ಮುಗ್ಗರಿಸಿತು. ಪಂದ್ಯದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಈ ವಿಚಾರವಾಗಿ ನಾಯಕ ಸೂರ್ಯಕುಮಾರ್​ ಯಾದವ್​ ಕೂಡ ಸ್ಪಷ್ಟನೆ ನೀಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ ಒಟ್ಟು 215 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೇ (44) ಮತ್ತು ಟಿಮ್ ಸೀಫರ್ಟ್ (62) ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿ, ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಕೇವಲ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ನ್ಯೂಜಿಲೆಂಡ್ ತಂಡವು 50 ರನ್‌ಗಳಿಂದ ಗೆದ್ದು ಬೀಗಿತು. ಈ ಪಂದ್ಯದ ನಂತರ, ಟೀಮ್​​ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿ, ಸೋಲಿಗೆ ಕಾರಣಗಳನ್ನು ಬಹಿರಂಗಪಡಿಸಿದರು.
ನಾವು ಈ ಪಂದ್ಯದಲ್ಲಿ ಉದ್ದೇಶಪೂರ್ವಕವಾಗಿ ಆರು ಬ್ಯಾಟ್ಸ್‌ಮನ್‌ಗಳೊಂದಿಗೆ ಮೈದಾನಕ್ಕೆ ಇಳಿದೆವು. ಅಲ್ಲದೆ, ಐದು ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಆಡಲು ಬಯಸಿದ್ದೆವು. ಈ ಪಂದ್ಯದಲ್ಲಿ ನಾವು ನಮ್ಮನ್ನು ಪರೀಕ್ಷಿಸಿಕೊಳ್ಳಲು ಬಯಸಿದ್ದೆವು. 180 ರಿಂದ 200 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೊದಲು ನಾವು ಎರಡು ಅಥವಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡರೆ ಪರಿಸ್ಥಿತಿ ಏನಾಗುತ್ತದೆ ಎಂದು ನೋಡಲು ನಾವು ಬಯಸಿದ್ದೆವು. ಈ ಪಂದ್ಯದಲ್ಲಿ ನಮ್ಮ ಸೋಲು, ನಮಗೊಂದು ಪಾಠವಾಗಿದೆ. ವಿಶ್ವಕಪ್ ತಂಡದ ಭಾಗವಾಗಿರುವ ಎಲ್ಲಾ ಆಟಗಾರರಿಗೆ ಅವಕಾಶ ನೀಡಲು ನಾವು ಬಯಸಿದ್ದೆವು. ಅದಕ್ಕಾಗಿಯೇ ನಾವು ಇತರ ಆಟಗಾರರನ್ನು ಆಡಿಸಲಿಲ್ಲ ಎಂದು ಸೂರ್ಯಕುಮಾರ್ ಹೇಳಿದರು.
ಭಾರಿ ಮಂಜು ಬೀಳುತ್ತಿದ್ದರಿಂದ ಈ ಪಂದ್ಯದಲ್ಲಿ ಒಂದು ಅಥವಾ ಎರಡು ಉತ್ತಮ ಜೊತೆಯಾಟ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಶಿವಂ ದುಬೆ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅವರೊಂದಿಗೆ ಇನ್ನೂ ಒಬ್ಬ ಬ್ಯಾಟ್ಸ್‌ಮನ್ ರನ್ ಗಳಿಸಿದ್ದರೂ ಸಹ, ಭಾರತ ಗೆಲ್ಲಲು ಸಾಕಷ್ಟು ಅವಕಾಶಗಳು ಇರುತ್ತಿದ್ದವು ಎಂದು ನಾಯಕ ಸೂರ್ಯಕುಮಾರ್ ಯಾದವ್ ಹೇಳಿದರು.
ಅಂದಹಾಗೆ, ಈ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾ ಅವರು ಕ್ಯಾಚ್ ಬಿಟ್ಟ ಕಾರಣ ಕಿವೀಸ್​ ಪಡೆ ಬೃಹತ್ ಸ್ಕೋರ್ ಗಳಿಸಲು ಸಾಧ್ಯವಾಯಿತು. ಇನ್ನಿಂಗ್ಸ್ ಆರಂಭದಲ್ಲಿ ನ್ಯೂಜಿಲೆಂಡ್ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ನೀಡಿದ ಕ್ಯಾಚ್ ಅನ್ನು ಬುಮ್ರಾ ಕೈಚೆಲ್ಲಿದರು. ಟೀಮ್ ಇಂಡಿಯಾದ ಸೋಲಿಗೆ ಇದು ಕೂಡ ಒಂದು ಕಾರಣವೆಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಅರ್ಷದೀಪ್​ ಸಿಂಗ್ ಎಸೆದ ಮೊದಲ ಓವರ್‌ನಲ್ಲಿ ಟಿಮ್ ಸೀಫರ್ಟ್ ಬೃಹತ್ ಶಾಟ್ ಬಾರಿಸಿದರು. ಶಾರ್ಟ್ ಥರ್ಡ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಬುಮ್ರಾ ಹಿಂದಕ್ಕೆ ಓಡಿ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ, ಅವರು ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆ ನಂತರ, ಟಿಮ್ ಸೀಫರ್ಟ್ ಅಬ್ಬರಿಸಿದರು. ಅವರು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಕೇವಲ 36 ಎಸೆತಗಳಲ್ಲಿ 62 ರನ್ ಗಳಿಸುವ ಮೂಲಕ ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು, (ಏಜೆನ್ಸೀಸ್​).