ಭಾರತ ಮತ್ತು ನ್ಯೂಜಿಲೆಂಡ್ ಫೈನಲ್ ಪಂದ್ಯ
- ಮಾ.08ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್
- ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ
- ಮಳೆಯಿಂದ ಪಂದ್ಯ ರದ್ದಾದರೆ ಜಂಟಿ ವಿಜೇತರು ಘೋಷಣೆ?
IND vs NZ Final: ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ ತಲುಪಿದ್ದು, ಇದೇ ಭಾನುವಾರ (ಮಾ.06) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಬಹಳ ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್ ಪ್ರಿಯರಿಗೆ ಇದೀಗ ಒಂದು ತಲೆಬಿಸಿ ಕಾಡಲಾರಂಭಿಸಿದೆ. ಅಷ್ಟಕ್ಕೂ, ಮಳೆಯಿಂದ ಈ ಪಂದ್ಯ ರದ್ದಾದರೆ ಯಾರಿಗೆ ಗೆಲುವು? ಜಂಟಿ ವಿಜೇತರು ಎಂದು ಯಾವ ಸಂದರ್ಭದಲ್ಲಿ ಘೋಷಿಸಲಾಗುವುದು ಎಂಬ ಪ್ರಶ್ನೆಗಳು ಉದ್ಬವಿಸಿವೆ.
ಚೊಚ್ಚಲ ಗೆಲುವಿಗಾಗಿ ನ್ಯೂಜಿಲೆಂಡ್ ಹಪಹಪಿ
ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಕಿವೀಸ್ ಪಡೆಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಟೀಮ್ ಇಂಡಿಯಾ ವಿರುದ್ಧ ಆಡಿರುವ ಮೂರು ಗ್ರೂಪ್ ಸ್ಟೇಜ್ ಪಂದ್ಯಗಳನ್ನು ನ್ಯೂಜಿಲೆಂಡ್ ತಂಡವೇ ಗೆದ್ದು ಬೀಗಿದೆ. ಒಂದೆಡೆ, ಈ ಬಾರಿ ಸತತವಾಗಿ ಉತ್ತಮ ಪ್ರದರ್ಶನ ನೀಡಿರುವ ಸ್ಯಾಟ್ನರ್ ಪಡೆಯು ಫೈನಲ್ ಪಂದ್ಯವನ್ನು ಗೆದ್ದು ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಮಹಾದಾಸೆಯನ್ನು ಹೊಂದಿದೆ.
ಮತ್ತೊಂದೆಡೆ, ಭಾರತ ಈ ಫೈನಲ್ನಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ಸೃಷ್ಟಿಸಲು ಎದುರು ನೋಡುತ್ತಿದೆ. ಇಲ್ಲಿಯವರೆಗೆ ಯಾವುದೇ ಆತಿಥೇಯ ದೇಶ ಟಿ20 ವಿಶ್ವಕಪ್ ಗೆದ್ದಿಲ್ಲ. ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಏನಾದರೂ ಭಾರತ ಗೆದ್ದರೆ, ಈ ದಾಖಲೆ, ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಗಲಿದೆ.
ಮಳೆ ಬಂದರೆ ಮುಂದೇನು?
ಟಿ20 ವಿಶ್ವಕಪ್‌ನಲ್ಲಿ ಮಳೆಯಿಂದಾಗಿ ಕೆಲವು ಪಂದ್ಯಗಳು ರದ್ದಾಗಿವೆ. ಆದಾಗ್ಯೂ, ಅಂತಿಮ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಪ್ರಸ್ತುತ, ಭಾರತದಲ್ಲಿ ಬೇಸಿಗೆಗಾಲ ಆರಂಭವಾಗಿರುವ ಹಿನ್ನೆಲೆ ಅಹಮದಾಬಾದ್ನಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಅಕಸ್ಮಾತ್, ಮೋಡ ಕವಿದು ಇದ್ದಕ್ಕಿದ್ದಂತೆ ಮಳೆ ಬಂದು ಪಂದ್ಯ ರದ್ದಾದರೆ ಏನಾಗುತ್ತದೆ ಎಂದು ನೋಡೋಣ.
ಐಸಿಸಿ ಅಂತಿಮ ಪಂದ್ಯಕ್ಕೆ ಮೀಸಲು ದಿನವನ್ನು ಈಗಾಗಲೇ ನಿಗದಿಪಡಿಸಿದೆ. ಮಳೆಯಿಂದಾಗಿ ಭಾನುವಾರ ಪಂದ್ಯ ನಡೆಯದಿದ್ದರೆ, ಮ್ಯಾಚ್ ಸೋಮವಾರಕ್ಕೆ ಮುಂದೂಡಿಕೆ ಆಗಲಿದೆ. ವಾಸ್ತವವಾಗಿ, ಓವರ್‌ಗಳನ್ನು ಕಡಿಮೆ ಮಾಡಿದರೂ ಭಾನುವಾರದಂದೇ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ 120 ನಿಮಿಷಗಳ ಹೆಚ್ಚುವರಿ ಸಮಯವೂ ಲಭ್ಯವಿರುತ್ತದೆ. ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ ವಿಜೇತರನ್ನು ಘೋಷಿಸಬೇಕಾದರೂ, ಎರಡೂ ತಂಡಗಳು ತಲಾ ಕನಿಷ್ಠ 10 ಓವರ್‌ಗಳನ್ನು ಬೌಲಿಂಗ್ ಮಾಡಬೇಕಿದೆ.
ಅಕಸ್ಮಾತ್, ಸೋಮವಾರ ಕೂಡ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದಾದರೆ ಫೈನಲ್ ಪಂದ್ಯವನ್ನು ವಿಧಿಯಿಲ್ಲದೇ ರದ್ದುಗೊಳಿಸಲಾಗುತ್ತದೆ. ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ,(ಏಜೆನ್ಸೀಸ್).