- ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ
- ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ಗೆ ಲಗ್ಗೆ
- ವಿಶ್ವಕಪ್ ಟ್ರೋಫಿ ಗೆಲ್ಲಲು ತಂಡದಲ್ಲಿ ಒಂದು ಬದಲಾವಣೆ ಅಗತ್ಯ
- ಟೀಮ್ ಇಂಡಿಯಾಗೆ ಕ್ರಿಕೆಟ್ ಪ್ರೇಮಿಗಳ ಮಹತ್ವದ ಸಲಹೆ
IND vs NZ Final: ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ ತಲುಪಿದ್ದು, ಇದೇ ಭಾನುವಾರ (ಮಾ.06) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕಾಗಿ ಬಹಳ ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್ ಪ್ರಿಯರು ಸದ್ಯ ಟೀಮ್ ಇಂಡಿಯಾಗೆ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಂಗ್ಲರ ಬ್ಯಾಟ್ನಿಂದ ಹರಿಯುತ್ತಿದ್ದ ರನ್ಗಳ ಹೊಳೆಯನ್ನು ಟೀಮ್ ಇಂಡಿಯಾ ಬೌಲರ್ಗಳಿಂದ ತಡೆಯಲು ಸಾಧ್ಯವಾಗಲಿಲ್ಲ. ಕೊನೆಯ 18 ಮತ್ತು 19ನೇ ಓವರ್ನಲ್ಲಿ ಬುಮ್ರಾ ಹಾಗೂ ಪಾಂಡ್ಯ ಇಂಗ್ಲೆಂಡ್ ಬ್ಯಾಟರ್ಗಳನ್ನು ಗೆಲುವಿನ ದಡ ಸೇರದಂತೆ ಕಟ್ಟಿಹಾಕಿದ್ದು ಮೆಚ್ಚುವಂತದ್ದು. ಆದರೆ, ಅದಕ್ಕೂ ಹಿಂದಿನ ಅಂದರೆ ಮಧ್ಯದ ಓವರ್ಗಳಲ್ಲಿ ಹೆಚ್ಚುವರಿ ರನ್ಗಳನ್ನು ನೀಡಿದ ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿ, ವಿಕೆಟ್ ಕಬಳಿಸುವುದಕ್ಕಿಂತ ನಿರೀಕ್ಷೆಗೂ ಮೀರಿದ ರನ್ಗಳನ್ನೇ ನೀಡಿದರು. ಇದು ತಂಡದ ಬೇಸರಕ್ಕೆ ಕಾರಣವಾಯಿತು.
ಭಾರತ ನಿರೀಕ್ಷಿಸಿದ ರೀತಿಯಲ್ಲಿಯೇ ಟೂರ್ನಿ ಆರಂಭವಾಯಿತು. ಗ್ರೂಪ್ ಸ್ಟೇಜ್ನ ನಾಲ್ಕು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ ವರುಣ್ ಚಕ್ರವರ್ತಿ, ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ರನ್ ಹೊಡೆಯಲು ಹೆಣಗಾಡುವಂತೆ ಮಾಡಿದರು. ತಮ್ಮ ಸ್ಪಿನ್ ದಾಳಿಯಿಂದ ಮಿಡಲ್ ಓವರ್ಗಳಲ್ಲಿ ಫುಲ್ ಕಂಟ್ರೋಲ್ ಮಾಡುತ್ತಿದ್ದ ಚಕ್ರವರ್ತಿ ಅದ್ಯಾಕೋ ಸೂಪರ್-8 ಹಂತಕ್ಕೆ ಹೋಗುತ್ತಿದ್ದಂತೆ ತಮ್ಮ ಲಯ ಕಳೆದುಕೊಂಡಿದ್ದಾರೆ.
ಸೂಪರ್-8 ಪಂದ್ಯಗಳಲ್ಲಿ ಸ್ಟೋರಿ ಚೇಂಜ್
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಕಂಟ್ರೋಲ್ ಕಳೆದುಕೊಂಡ ವರುಣ್, ವಿಕೆಟ್ ಪಡೆಯುವುದಕ್ಕಿಂತ ಹೆಚ್ಚುವರಿ ರನ್ಗಳನ್ನು ನೀಡಿದರು. ಸಾಮಾನ್ಯವಾಗಿ ಡಾಟ್ ಬಾಲ್‌ಗಳ ಮೂಲಕ ನಿರ್ಮಿಸುತ್ತಿದ್ದ ಒತ್ತಡ ಈಗ ನಿಧಾನವಾಗಿ ಮರೆಯಾಗಿದೆ. ಇದೆಲ್ಲವೂ ಅವರ ಬೌಲಿಂಗ್ ಮೇಲಿನ ಭರವಸೆಯನ್ನು ಕುಸಿಯುವಂತೆ ಮಾಡಿದೆ. ಈ ಮಧ್ಯೆ, ಅಹಮದಾಬಾದ್ ಪಿಚ್ಗೆ ಕುಲದೀಪ್ ಯಾದವ್ ಅವರೇ ಉತ್ತಮ ಎಂದು ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದ್ದಾರೆ.
ಕುಲದೀಪ್ ಬೇಕು
ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿ, ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಆಸೆಯಿದ್ದರೆ ಮೊದಲು ತಂಡಕ್ಕೆ ಕುಲದೀಪ್ ಯಾದವ್ ಅವರನ್ನು ಕರೆತರಬೇಕು. ವರುಣ್ ಚಕ್ರವರ್ತಿ ಸ್ಥಾನಕ್ಕೆ ಕುಲದೀಪ್ರನ್ನು ಆಡಿಸುವುದು ಬಹಳ ಒಳ್ಳೆಯ ಕೆಲಸ. ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ಗೆ ಅವರ ಬೌಲಿಂಗ್ ಸರಿಯಾಗಿ ಕೆಲಸ ಮಾಡುತ್ತೆ ಎಂದಿದ್ದಾರೆ. ತಂಡದಲ್ಲಿ ಇದೊಂದು ಬದಲಾವಣೆ ತನ್ನಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಟೀಮ್ ಇಂಡಿಯಾಗೆ ಸಲಹೆ ನೀಡಿರುವುದು ಗಮನಾರ್ಹ,(ಏಜೆನ್ಸೀಸ್).